SUDDILIVE || SHIVAMOGGA
ಕೋಟೆಗಂಗೂರು ರೈಲ್ವೆ ಹಳಿ ಮೇಲೆ ಗಾಯಗೊಂಡ ಸ್ಥಿತಿಯಲ್ಲಿ ಯುವಕ ಪತ್ತೆ; ಹಲ್ಲೆ ಮಾಡಿ ಎಸೆದಿರುವ ಶಂಕೆ- Youth found injured on Kotegangur railway tracks; suspected of being assaulted and thrown
ಶಿವಮೊಗ್ಗ: ನಗರದ ಹೊರವಲಯದ ಕೋಟೆಗಂಗೂರು ರೈಲ್ವೆ ಹಳಿ ಮೇಲೆ 24 ವರ್ಷದ ಯುವಕನೊಬ್ಬ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿ ರೈಲ್ವೆ ಹಳಿ ಮೇಲೆ ಬಿಸಾಡಲಾಗಿದೆಯೇ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದಾನೆಯೇ ಎಂಬ ಪ್ರಶ್ನೆಗಳು ಮೂಡಿದ್ದು, ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
ಕೋಟೆಗಂಗೂರು ಮೂಲದ ಆನಂದ ಎಂಬ ಯುವಕ ಗಾಯಗೊಂಡ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದಾನೆ. ಈತ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಊಟ ಮಾಡಿ ಹೋದ ಬಳಿಕ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ ಆರೋಪ
ಆನಂದನ ಕುಟುಂಬದವರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ಊಟ ಮಾಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ನಡೆದಿರುವುದು ಕುಟುಂಬದವರಿಗೆ ಬೆಳಗ್ಗೆ ತಿಳಿದುಬಂದಿದೆ ಎನ್ನಲಾಗಿದೆ.
ಆನಂದನ ತಾಯಿ ಮುನಿಯಮ್ಮ ಅವರು ತಮ್ಮ ಮಗನ ಮೇಲೆ ಕೋಟೆಗಂಗೂರಿನ ಭಾಸ್ಕರ್ ಎಂಬಾತನು ಹಲ್ಲೆ ನಡೆಸಿ ರೈಲ್ವೆ ಹಳಿ ಮೇಲೆ ಬಿಸಾಡಿ ಹೋಗಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಯುವಕನಿಗೆ ಗಾಯಗಳಾಗಿರುವ ನಿಖರ ಸಂದರ್ಭ ಹಾಗೂ ಘಟನೆಯಲ್ಲಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಎರಡು ವಾರಗಳ ಹಿಂದೆ ದೂರು ನೀಡಲಾಗಿತ್ತು
ಆನಂದ ಮತ್ತು ಬಾಸ್ಕರ ನಡುವೆ ಗಲಾಟೆ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುಮಾರು ಎರಡು ವಾರಗಳ ಹಿಂದೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ಕು ಜನ ರನ್ನ ಪೊಲೀಸರು ಬಂಧಿಸಿದ್ದು ಭಾಸ್ಕರ್ ಅವರನ್ನಬಂಧಿಸಿಲ್ಲ ಎಂದು ದೂರಿದ್ದಾರೆ. ರೈಲ್ವೆ ಹಳಿ ಮೇಲೆ ಯುವಕ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೂ ಅದಕ್ಕೂ ನೇರ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.
ಘಟನೆಯ ಹಿನ್ನೆಲೆಯಲ್ಲಿ ಹಿಂದಿನ ದೂರು, ಯುವಕನ ಸಂಪರ್ಕದಲ್ಲಿದ್ದವರು ಹಾಗೂ ಆತ ಕೊನೆಯದಾಗಿ ಯಾರೊಂದಿಗೆ ಇದ್ದ ಎಂಬ ಅಂಶಗಳು ಮಹತ್ವ ಪಡೆದುಕೊಂಡಿವೆ. ಈ ಪ್ರಕತಣ ರೈಲ್ಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ
ಆನಂದ ಸೋಮನಕೊಪ್ಪದಲ್ಲಿರುವ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಆತ ಹಿಂದೆ ಮತ್ತೊಬ್ಬರ ಬಳಿ ಕೆಲಸ ಮಾಡಿದ್ದು, ಬಳಿಕ ಪರಿಚಯಸ್ಥರೊಂದಿಗೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆನಂದನ ದುಡಿದು ಜೀವನ ನಡೆಸುತ್ತಿದ್ದ ಯುವಕನಾಗಿದ್ದು, ಕುಡಿಯುವ ಅಭ್ಯಾಸವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಕೆಟ್ಟ ಸಹವಾಸ ಇರಲಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ. ನಿನ್ನೆ ರಾತ್ರಿ 11-30 ತನ್ನ ಕುಟುಂಬದವರೊಂದಿಗೆ ಇದ್ದ ಆನಂದನ ಮೇಲೆ ಹಲ್ಲೆ ನಡೆಸಿರುವ ಆರೋಪದ ಕುರಿತು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ.
