ಶಿವಮೊಗ್ಗದಲ್ಲಿ ಮಾದಕ ದ್ರವ್ಯಗಳ ವಿರುದ್ಧ ರಾಷ್ಟ್ರೀಯ ಬೈಕ್ ಜಾಥಾ-National bike rally against drugs in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಮಾದಕ ದ್ರವ್ಯಗಳ ವಿರುದ್ಧ ರಾಷ್ಟ್ರೀಯ ಬೈಕ್ ಜಾಥಾ-National bike rally against drugs in Shivamogga    
Motor, cycle

‘ಬೇಡ ಬ್ರೋ’ ಅಭಿಯಾನದಡಿ ವಿದ್ಯಾರ್ಥಿಗಳು, ಯುವಜನರಿಗೆ ಜಾಗೃತಿ


ಶಿವಮೊಗ್ಗ: ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಏಕತಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥಾ–2026 ಅ.17ರಂದು ಚಿತ್ರದುರ್ಗದಿಂದ ಶಿವಮೊಗ್ಗ ನಗರಕ್ಕೆ ಆಗಮಿಸಿತು.

ನಗರದ ಗೋಪಿ ವೃತ್ತದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಾಥಾವನ್ನು ಸ್ವಾಗತಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್ ಅವರು ಜಾಥಾ ತಂಡವನ್ನು ಸ್ವಾಗತಿಸಿ, ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗೋಪಿ ವೃತ್ತದಲ್ಲಿ ಸೇರಿದ್ದ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ‘ಬೇಡ ಬ್ರೋ’ ಅಭಿಯಾನದ ಮೂಲಕ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಬಳಿಕ ಐಕ್ಯತಾ ಗೋಡೆಯ ಎದುರು ಮಾದಕ ದ್ರವ್ಯಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಸ್ಥಳೀಯ ಬೈಕ್ ಸವಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಗೋಪಿ ವೃತ್ತದಿಂದ ಆರಂಭವಾದ ಬೈಕ್ ಜಾಥಾವು ಎಎ ವೃತ್ತ, ಕರ್ನಾಟಕ ಸಂಘ, ಶಂಕರ ಮಠ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕೆಇಬಿ ವೃತ್ತ, ರೈಲ್ವೆ ನಿಲ್ದಾಣದ ಮುಂಭಾಗ, ಎಎ ಕಾಲೋನಿ, ಉಷಾ ವೃತ್ತ, ವಿನೋಬನಗರದ 60 ಅಡಿ ರಸ್ತೆ, ಆಲ್ಕೊಳ ವೃತ್ತ, ಗೋಪಾಳಗೌಡ ಬಡಾವಣೆ, ಡಿವಿಜಿ ವೃತ್ತ, ಗೋಪಾಳ ಬಸ್ ನಿಲ್ದಾಣ, ತುಂಗಾನಗರ ಬೈಪಾಸ್, ನ್ಯೂ ಮಂಡ್ಲಿ ವೃತ್ತ, ಸಂದೇಶ ಮೋಟಾರ್ಸ್ ಹಾಗೂ ಎನ್.ಟಿ. ರಸ್ತೆಯ ಮೂಲಕ ಅಶೋಕ ವೃತ್ತ ತಲುಪಿತು. ಅಲ್ಲಿಂದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಾಥಾ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಪಿಯ 8ನೇ ಪಡೆಯ ಕಮಾಂಡೆಂಟ್ ಯುವಕುಮಾರ್, ಕೆಎಸ್‌ಐಎಸ್‌ಎಫ್ ಶಿವಮೊಗ್ಗದ ಸಹಾಯಕ ಕಮಾಂಡೆಂಟ್ ಮಂಜುನಾಥ್ ಅಣಜಿ, ಶಿವಮೊಗ್ಗ ನಗರದ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ

2026ನೇ ಸಾಲಿನಲ್ಲಿ ಯುವಜನರಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ‘ಬೇಡ ಬ್ರೋ’ ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ 1,525 ಶೈಕ್ಷಣಿಕ ಸಂಸ್ಥೆಗಳಲ್ಲಿ 46,720 ವಿದ್ಯಾರ್ಥಿಗಳು ಹಾಗೂ 2,080 ಶಿಕ್ಷಕರಿಗೆ ಅರಿವು ಮೂಡಿಸಲಾಗಿದೆ. ಅಲ್ಲದೆ, 166 ಮಾದಕ ದ್ರವ್ಯ ವಿರೋಧಿ ಸಮಿತಿಗಳನ್ನು ರಚಿಸಲಾಗಿದೆ.

ಇದರ ಜೊತೆಗೆ 1,029 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, 34,301 ವಿದ್ಯಾರ್ಥಿಗಳು ಹಾಗೂ 9,564 ಸಾರ್ವಜನಿಕರಿಗೆ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

National bike rally against drugs in Shivamogga 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close