SUDDILIVE || BANGALORU
ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್‌ಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ- Minister Madhu Bangarappa congratulates Suda President C.G. Madhusudan
ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಜಿ. ಮಧುಸೂದನ್ ಅವರನ್ನು ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು.
ಮಧುಸೂದನ್ ಅವರ ನಾಯಕತ್ವದಲ್ಲಿ ಶಿವಮೊಗ್ಗ–ಭದ್ರಾವತಿ ಅವಳಿ ನಗರಗಳು ಸುಸಂಘಟಿತ ನಗರಾಭಿವೃದ್ಧಿ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಮಗ್ರ ಪ್ರಗತಿಯ ಮೂಲಕ ಹೊಸ ಎತ್ತರ ತಲುಪಲಿ ಎಂದು ಸಚಿವರು ಹಾರೈಸಿದರು.
ಕಾಂಗ್ರೆಸ್ ಸಂಘಟನೆ ಬಲಪಡಿಸಲು ಯುವಕರಿಗೆ ಆದ್ಯತೆ ನೀಡಿ
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಸಂಘಟಿಸಿ ಬೆಳೆಸಿದಷ್ಟು ಪಕ್ಷದ ಶಕ್ತಿ ವೃದ್ಧಿಯಾಗಲಿದೆ ಎಂದು ಮಧು ಬಂಗಾರಪ್ಪ ಅವರು ಮಧುಸೂದನ್ ಅವರಿಗೆ ತಿಳಿಸಿದರು.
ರಾಹುಲ್ ಗಾಂಧಿ ಅವರು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಯುವಕರು ಹೆಚ್ಚಿನ ಶಕ್ತಿ ತುಂಬಬೇಕು. ಯುವಕರಿಗೆ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಬೇಕು ಎಂಬುದು ರಾಹುಲ್ ಗಾಂಧಿ ಅವರ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿ ಯುವ ನಾಯಕರು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ, ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಕರ್ನಾಟಕ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಶೆಟ್ಟಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
