ತೀರ್ಥಹಳ್ಳಿ ಕರಡು ಮತದಾರರ ಪಟ್ಟಿ ವಿಚಾರ: ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌ಗೆ ಕಾಂಗ್ರೆಸ್ ಆಗ್ರಹ-Tirthahalli draft voter list issue: Congress demands FIR against BJP leader

 SUDDILIVE || SHIVAMOGGA

ತೀರ್ಥಹಳ್ಳಿ ಕರಡು ಮತದಾರರ ಪಟ್ಟಿ ವಿಚಾರ: ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌ಗೆ ಕಾಂಗ್ರೆಸ್ ಆಗ್ರಹ-Tirthahalli draft voter list issue: Congress demands FIR against BJP leader  
Tirthahalli, draft



ಶಿವಮೊಗ್ಗ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಸತೀಶ್ ಎಸ್. ಅವರು ಸೆಪ್ಟೆಂಬರ್ 12ರಂದು ತಾಲೂಕು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನ ವಿಚಾರ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 186ನೇ ಭಾಗ ಸಂಖ್ಯೆಯ ಮತದಾರರ ಪಟ್ಟಿಯಲ್ಲಿರುವ 81 ಮತದಾರರು ಬಹುತೇಕ ಬೇರೆ ಊರುಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸತೀಶ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಲೋಪ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಈ ದೂರಿನ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನಿಜವಾಗಿಯೂ ಯಾವುದೇ ಲೋಪವಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಬೂತ್ ಮಟ್ಟದ ಅಧಿಕಾರಿಗಳ (BLO) ಪರಿಶೀಲನೆ ಹಾಗೂ ಜವಾಬ್ದಾರಿಯನ್ನು ನಿಗದಿಪಡಿಸಬಹುದು. ಆದರೆ, ಯಾವುದೇ ಲೋಪವಿಲ್ಲದಿದ್ದರೂ ಮತದಾರರ ಕುರಿತು ಅನುಮಾನ ಮೂಡಿಸುವ ರೀತಿಯಲ್ಲಿ ದೂರು ನೀಡುವುದು ಸಾರ್ವಜನಿಕರಲ್ಲಿ ಗೊಂದಲ ಹಾಗೂ ಭಾವನಾತ್ಮಕ ಪ್ರಚೋದನೆಗೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡರ ಪ್ರಕಾರ, 186ನೇ ಬೂತ್‌ನಲ್ಲಿರುವ ಸಂಬಂಧಿತ ಮತದಾರರಿಗೆ ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆ ಅರ್ಜಿಗಳನ್ನು ನೀಡಿದ್ದು, ಅವುಗಳನ್ನು ಪರಿಗಣಿಸುವ ಪ್ರಕ್ರಿಯೆಯನ್ನೂ ಕೈಗೊಂಡಿದ್ದಾರೆ. ಹೀಗಾಗಿ, ಸತೀಶ್ ಅವರು ನೀಡಿರುವ ದೂರಿನಲ್ಲಿನ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಯೋಗೀಶ್ ನೇತೃತ್ವದ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

ದೂರು ಪರಿಶೀಲಿಸಿದ ಬಳಿಕ ಅದರಲ್ಲಿ ಯಾವುದೇ ವಾಸ್ತವಿಕ ಲೋಪ ಕಂಡುಬರದಿದ್ದರೆ, ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ದೂರು ಸಲ್ಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಸುಳ್ಳು ಅಥವಾ ಆಧಾರರಹಿತ ದೂರು ನೀಡಿರುವುದು ತನಿಖೆಯಲ್ಲಿ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್ ಅವರ ನೇತೃತ್ವದಲ್ಲಿ ನಡೆದ ಈ ಮನವಿ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ಹಾಪ್ಕಾಂ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಎಸ್.ಟಿ. ಹಾಲಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್ ಸೇರಿದಂತೆ ಯುವ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೂ ಚುನಾವಣಾ ಅಧಿಕಾರಿಗಳು ದಾಖಲೆಗಳು ಮತ್ತು ಕ್ಷೇತ್ರಮಟ್ಟದ ಪರಿಶೀಲನೆಯ ಆಧಾರದ ಮೇಲೆ ವಾಸ್ತವಾಂಶವನ್ನು ಸ್ಪಷ್ಟಪಡಿಸಬೇಕು. ಈ ಪ್ರಕರಣದಲ್ಲಿಯೂ 186ನೇ ಭಾಗ ಸಂಖ್ಯೆಯ ಮತದಾರರ ಕುರಿತ ದೂರಿನ ಸತ್ಯಾಸತ್ಯತೆ ಪರಿಶೀಲನೆಯ ನಂತರವೇ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Tirthahalli draft voter list issue: Congress demands FIR against BJP leader  


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close