Advertisement

ರಾಜ್ಯ ಸರ್ಕಾರ ಸಂಪೂರ್ಣ ವಿಫಲ; ಬರಗಾಲದಲ್ಲೂ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆತುರವೇಕೆ? – ಬಿ.ವೈ. ವಿಜಯೇಂದ್ರ- The state government has completely failed; Why is there a rush to give the post of chairman of the corporation board to an MLA even during a drought? – B.Y. Vijayendra

 SUDDILIVE || SHIVAMOGGA

ರಾಜ್ಯ ಸರ್ಕಾರ ಸಂಪೂರ್ಣ ವಿಫಲ; ಬರಗಾಲದಲ್ಲೂ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆತುರವೇಕೆ? – ಬಿ.ವೈ. ವಿಜಯೇಂದ್ರ- The state government has completely failed; Why is there a rush to give the post of chairman of the corporation board to an MLA even during a drought? – B.Y. Vijayendra  
Vijendra, criticise


ಶಿವಮೊಗ್ಗ:
ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡುವ ಯೋಗ್ಯತೆ ಇಲ್ಲದ ರಾಜ್ಯ ಕಾಂಗ್ರೆಸ್ ಸರ್ಕಾರ, ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಕ್ಯಾಬಿನೆಟ್ ದರ್ಜೆ ಕಲ್ಪಿಸುವುದರಲ್ಲಿ ನಿರತವಾಗಿದೆ. ಬರಗಾಲದ ಸಂದರ್ಭದಲ್ಲಿ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಅನಿವಾರ್ಯತೆ ಮುಖ್ಯಮಂತ್ರಿಗಳಿಗೆ ಏನಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು.

ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಕೇವಲ ಜಾಹೀರಾತುಗಳ ಮೂಲಕ 'ನುಡಿದಂತೆ ನಡೆದಿದ್ದೇವೆ' ಎಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಭಾರತ್ ಜೋಡೋ ಸಂಯೋಜಕರನ್ನೂ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರವೇ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳಿಕೊಳ್ಳುತ್ತಿರುವಾಗ ಇಂತಹ ನೇಮಕಾತಿಗಳಿಗೆ ಹಣ ವ್ಯಯಿಸುವ ಅಗತ್ಯವೇನಿತ್ತು? ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಕ್ಯಾಬಿನೆಟ್ ದರ್ಜೆ ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರಗಳನ್ನು ತೆರೆಯುವ ಕೆಲಸ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ

ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಅನಗತ್ಯ ನೇಮಕಾತಿ ಮತ್ತು ಘೋಷಣೆಗಳಿಗೆ ಸರ್ಕಾರ ಮುಂದಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.

ಆಶಾ ಕಾರ್ಯಕರ್ತೆಯರಿಗೆ 350 ಕೋಟಿ ನೀಡಲು ಸಾಧ್ಯವಾಗುತ್ತಿಲ್ಲವೇ?

ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ವೇತನ ಹೆಚ್ಚಿಸುವ ಯೋಗ್ಯತೆ ಸರ್ಕಾರಕ್ಕಿಲ್ಲವೇ ಎಂದು ಪ್ರಶ್ನಿಸಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರನ್ನು 'ನನ್ನ ಸಹೋದರಿಯರು' ಎಂದು ಕರೆಯುತ್ತಾರೆ. ಹಾಗಿದ್ದರೆ ಅವರ ಬೇಡಿಕೆ ಈಡೇರಿಸಲು ವಾರ್ಷಿಕ 350 ಕೋಟಿ ರೂ. ಮೀಸಲಿಡುವುದು ಸರ್ಕಾರಕ್ಕೆ ಕಷ್ಟವೇ ಎಂದು ಪ್ರಶ್ನಿಸಿದರು.

ಮಂಗಳೂರಿಗೆ 32 ಸಾವಿರ ಕೋಟಿ ರೂ. ಘೋಷಣೆ ಮಾಡುತ್ತೀರಿ. ರಸ್ತೆ ಅಭಿವೃದ್ಧಿಗೆ 16 ಸಾವಿರ ಕೋಟಿ ರೂ. ನೀಡುವುದಾಗಿ ಹೇಳುತ್ತೀರಿ. ಆದರೆ ಆಶಾ ಕಾರ್ಯಕರ್ತೆಯರಿಗೆ 350 ಕೋಟಿ ರೂ. ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ನಿವಾಸದ ಶೃಂಗಾರಕ್ಕೆ 100 ಕೋಟಿ ರೂ. ಖರ್ಚು ಮಾಡಿದ್ದಾರೆ. ತಮ್ಮನ್ನು ಪ್ರಜಾಸೇವಕ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿಗಳು ಬರಗಾಲದ ಸಂದರ್ಭದಲ್ಲಿ ಮನೆ ಅಲಂಕಾರಕ್ಕೆ ಇಷ್ಟು ಹಣ ಖರ್ಚು ಮಾಡುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದರು.

ಬಹಿಷ್ಕಾರಕ್ಕೆ ಕರೆ ನೀಡಿದರೆ ಜನರೇ ಉತ್ತರಿಸುತ್ತಾರೆ

ಬಿಜೆಪಿಯವರು ಮನೆ ಬಾಗಿಲಿಗೆ ಬಂದರೆ ಬಹಿಷ್ಕಾರ ಹಾಕಿ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅದೇ ರೀತಿ ಹಿರಿಯೂರು ಉಪಚುನಾವಣೆಯಲ್ಲಿಯೂ ಜನರು ಕಾಂಗ್ರೆಸ್‌ಗೆ ಕಪಾಳಮೋಕ್ಷ ಮಾಡಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಕಾಡುಗೊಲ್ಲ ಸಮುದಾಯದ ಮೀಸಲಾತಿ ವಿಚಾರದಲ್ಲಿ ಈಗ ರಾಜಕೀಯ ಮಾಡಲಾಗುತ್ತಿದೆ. ಹಿರಿಯೂರು ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಈಗಿನ ಕಾಂಗ್ರೆಸ್ ಸರ್ಕಾರ ನೀರಾವರಿಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಬಹಿರಂಗಪಡಿಸಲಿ. ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಕಳೆದ ಚುನಾವಣೆಯಲ್ಲಿ ಜನರು ಮೋಸ ಹೋಗಿರಬಹುದು. ಆದರೆ ಪದೇ ಪದೇ ಅದೇ ರೀತಿ ಆಗುವುದಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಬಸವಣ್ಣನವರ ಬಗ್ಗೆ ಅವಹೇಳನ; ಕಾನೂನು ಕ್ರಮಕ್ಕೆ ಆಗ್ರಹ

ರವಿ ಹಂಚ್ ಅವರು ಸಮಾಜದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅಣ್ಣ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ಕೇವಲ ವೀರಶೈವ ಸಮಾಜಕ್ಕೆ ಮಾತ್ರ ಮಾಡಿದ ಅಪಮಾನವಲ್ಲ, ಇಡೀ ನಾಡಿನ ಜನತೆಗೆ ಮಾಡಿದ ಅಪಚಾರವಾಗಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಗೃಹ ಸಚಿವರಿಗೆ ಒತ್ತಾಯ ಮಾಡುವುದಾಗಿ ತಿಳಿಸಿದ ಅವರು, ಕೇವಲ ಬಂಧಿಸಿ ನಂತರ ಬಿಡುಗಡೆ ಮಾಡುವ ಕೆಲಸ ಮಾಡಬಾರದು. ನಾಡಿನ ಯಾವುದೇ ದಾರ್ಶನಿಕರಿಗೆ ಅವಮಾನ ಮಾಡುವಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆ ವಿರುದ್ಧ ಸದನದಲ್ಲಿ ಹೋರಾಟ

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಬೆಲೆ ಏರಿಕೆ ವಿಚಾರವನ್ನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಬಲವಾಗಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.

ಹಿರಿಯೂರು ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ

ಹಿರಿಯೂರು ಉಪಚುನಾವಣೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಚುನಾವಣೆಯಲ್ಲಿ ಎರಡು ಪಕ್ಷಗಳ ಸಹಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.

ಸಚಿವ ಮಧು ಬಂಗಾರಪ್ಪ ವರ್ತನೆಗೆ ವಿಜಯೇಂದ್ರ ಖಂಡನೆ

ಕೊಪ್ಪಳದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವರ್ತನೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರ ವರ್ತನೆ ಮತ್ತು ಉಡಾಫೆಯ ಹೇಳಿಕೆಗಳನ್ನು ರಾಜ್ಯಾದ್ಯಂತ ಖಂಡಿಸಲಾಗುತ್ತಿದೆ. ಅವರ ಅವಿವೇಕತನದ ನಡವಳಿಕೆಯನ್ನು ಯಾರಿಂದಲೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಶಿಕ್ಷಣ ಸಚಿವರಿಗೆ ಗೌರವದ ಬಗ್ಗೆ ಕಾಳಜಿ ಇದ್ದರೆ, ತಮ್ಮ ವರ್ತನೆಗೆ ಕ್ಷಮೆ ಕೇಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

The state government has completely failed; Why is there a rush to give the post of chairman of the corporation board to an MLA even during a drought? – B.Y. Vijayendra  

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು