Advertisement

ಮೀಸಲಾತಿ ಹಕ್ಕೊತ್ತಾಯ ಡಿ.10ರಂದು ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ-Fasting Satyagraha in Belgaum on December 10th to protest reservation rights: Basavajaya Mrityunjaya Swamiji warns

 SUDDILIVE || SHIVAMOGGA

ಮೀಸಲಾತಿ ಹಕ್ಕೊತ್ತಾಯ ಡಿ.10ರಂದು ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ-Fasting Satyagraha in Belgaum on December 10th to protest reservation rights: Basavajaya Mrityunjaya Swamiji warns   

Jaya, mruthyunjaya


ಶಿವಮೊಗ್ಗ:
ಲಿಂಗಾಯತ ಪಂಚಮಸಾಲಿ, ಮಲೆಗೌಡ ಸೇರಿದಂತೆ ಕೃಷಿ ಆಧಾರಿತ ಲಿಂಗಾಯತ ಉಪಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಬಸವಕಲ್ಯಾಣ ಪೀಠದ ಪ್ರಥಮ ಜಗದ್ಗುರು, ಮೀಸಲಾತಿ ಹೋರಾಟದ ಪ್ರವರ್ತಕ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದರು.

ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮುದಾಯದ ಮೀಸಲಾತಿ ಹಕ್ಕೊತ್ತಾಯವನ್ನು ನಿರ್ಲಕ್ಷಿಸಬಾರದು. ಈ ಬಾರಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

2A ಮೀಸಲಾತಿ, ಕೇಂದ್ರ ಓಬಿಸಿಗೆ ಶಿಫಾರಸು

ಕಳೆದ ಆರು ವರ್ಷಗಳಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಕೃಷಿ ಆಧಾರಿತ ಲಿಂಗಾಯತ ಪಂಚಮಸಾಲಿ, ಮಲೆಗೌಡ, ದೀಕ್ಷಾ ಲಿಂಗಾಯತ, ಗೌಡ ಲಿಂಗಾಯತ, ಗೌಳಿ ಲಿಂಗಾಯತ ಸೇರಿದಂತೆ ವಿವಿಧ ಹೆಸರುಗಳಿಂದ ಗುರುತಿಸಲ್ಪಡುವ ಸಮುದಾಯಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಪಡೆಯುವ ಉದ್ದೇಶದಿಂದ ಹೋರಾಟ ನಡೆಸುತ್ತಿವೆ ಎಂದು ಸ್ವಾಮೀಜಿ ಹೇಳಿದರು.

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ 2A ಮೀಸಲಾತಿ ಪಟ್ಟಿಯಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸಬೇಕು. ಉಳಿದ ಲಿಂಗಾಯತ ಉಪಪಂಗಡಗಳನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಶಿಫಾರಸು ಮಾಡಬೇಕು ಎಂಬುದು ಹೋರಾಟದ ಪ್ರಮುಖ ಬೇಡಿಕೆಯಾಗಿದೆ ಎಂದರು.


2A ಮೀಸಲಾತಿ ನೀಡಲು ತಾಂತ್ರಿಕ ತೊಂದರೆ ಅಥವಾ ಸಮಯದ ಅಗತ್ಯವಿದ್ದರೆ, ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ 2D ಪ್ರವರ್ಗವನ್ನಾದರೂ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ. 2D ಜಾರಿಗೆ ನ್ಯಾಯಾಲಯದ ಅಡೆತಡೆಗಳಿದ್ದರೂ, ಕೇಂದ್ರ ಓಬಿಸಿ ಪಟ್ಟಿಗೆ ಸಮುದಾಯಗಳನ್ನು ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಓಬಿಸಿ ಪಟ್ಟಿಗೆ ಶಿಫಾರಸು ದೊರೆತರೆ ನೀಟ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಪರೀಕ್ಷೆಗಳು ಹಾಗೂ ಉದ್ಯೋಗಗಳಲ್ಲಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಡಿ.10ರಂದು ಬೆಳಗಾವಿಯಲ್ಲಿ ಹೋರಾಟ

ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ ಬಳಿಕ ಸಮುದಾಯದ ಹಕ್ಕೊತ್ತಾಯವನ್ನು ಮಂಡಿಸಲಾಗಿದೆ. ಮೀಸಲಾತಿ ವಿಚಾರವಾಗಿ ಚರ್ಚಿಸಲು ಸಮಯ ಕೇಳಿದ್ದ ಮುಖ್ಯಮಂತ್ರಿಗಳು ಕಳೆದ ನಾಲ್ಕು ತಿಂಗಳಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾಗ ಚಿತ್ರದುರ್ಗಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಆಗ ಸಹಾನುಭೂತಿಯಿಂದ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಅವಕಾಶ ದೊರೆತರೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ನೆನಪಿಸಿಕೊಂಡರು.

ಈ ಹಿನ್ನೆಲೆಯಲ್ಲಿ ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ಮೀಸಲಾತಿಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. 2024ರ ಡಿಸೆಂಬರ್ 10ರಂದು ಸುವರ್ಣ ವಿಧಾನಸೌಧದ ಎದುರು ನಡೆದ ಹೋರಾಟದ ವೇಳೆ ಲಾಠಿ ಪ್ರಹಾರ ನಡೆದ ಹಿನ್ನೆಲೆಯಲ್ಲಿ, ಈ ದಿನವನ್ನು 'ಲಿಂಗಾಯತರ ಮೇಲಿನ ದೌರ್ಜನ್ಯ ದಿನ' ಎಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಮೀಸಲಾತಿ ಹೋರಾಟ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಬಾರಿ ಸರ್ಕಾರ ಹೋರಾಟವನ್ನು ಕಡೆಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.

ಸಮುದಾಯದವರಿಗೆ ಸ್ವಾಮೀಜಿ ಕರೆ

ಮಲ್ನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಮಲೆಗೌಡ ಪಂಚಮಸಾಲಿ ಹಾಗೂ ಇತರೆ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಆರೋಗ್ಯದ ಸಮಸ್ಯೆ ಇರುವವರು ಉಪವಾಸ ಸತ್ಯಾಗ್ರಹದ ಬದಲಿಗೆ ಧರಣಿಯಲ್ಲಿ ಪಾಲ್ಗೊಳ್ಳಬಹುದು. ಆರೋಗ್ಯ ಅನುಕೂಲವಿರುವವರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

'ನಮ್ಮ ನಡೆ ಬೆಳಗಾವಿ ಸತ್ಯಾಗ್ರಹದ ಕಡೆಗೆ' ಎಂಬ ಘೋಷವಾಕ್ಯದಡಿ ಡಿಸೆಂಬರ್ 10ರಂದು ನಡೆಯುವ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ

ಪತ್ರಿಕಾಗೋಷ್ಠಿಯಲ್ಲಿ ಮಲೆಗೌಡ ಪಂಚಮಸಾಲಿ ಮಹಾಸಭಾ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಗೌಡ ಹಕ್ರೆ, ಶಿವಮೊಗ್ಗ ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಎಂ.ಪಿ., ಶಿವಪ್ಪ ನಾಯಕ ಯುವ ವೇದಿಕೆಯ ರಾಜ್ಯ ಅಧ್ಯಕ್ಷ ವಿರೂಪಾಕ್ಷ ಗೌಡ, ಪಂಚಸೇನೆಯ ಜಿಲ್ಲಾ ಅಧ್ಯಕ್ಷ ರುದ್ರಗೌಡ ಮಹಾರುದ್ರಪ್ಪ ಅಂಗಡಿ, ಸಮಾಜದ ಹಿರಿಯ ಮುಖಂಡ ಚಂದ್ರಶೇಖರ್ ಗೌಡ, ವೀರೇಶ್ ಸೇರಿದಂತೆ ಶಿಕಾರಿಪುರದಿಂದ ಆಗಮಿಸಿದ್ದ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Fasting Satyagraha in Belgaum on December 10th to protest reservation rights: Basavajaya Mrityunjaya Swamiji warns   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು