SUDDILIVE || SHIVAMOGGA
ಶಿವಮೊಗ್ಗ ವಿಮಾನ ನಿಲ್ದಾಣ ಬಂದ್ ಮಾಡಿ, ರೈತರ ಜಮೀನು ವಾಪಸ್ ಕೊಡಿ ಎಂದಿದ್ದ ಶಾಸಕ ಬೇಳೂರು ಉಲ್ಟಾ! | ಪತ್ರಿಕಾಗೋಷ್ಠಿಯಲ್ಲಿ ಮುಜುಗರಕ್ಕೀಡಾದ್ರಾ?MLA from Belur who said to close Shivamogga airport and return farmers' land backfires! | Embarrassed at press conference
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ವಿಮಾನ ನಿಲ್ದಾಣವನ್ನೇ ಬಂದ್ ಮಾಡಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನನ್ನು ವಾಪಸ್ ನೀಡಲಿ ಎಂದು ಹೇಳಿದ್ದರು. ಆದರೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ತಮ್ಮ ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದು, ವಿಮಾನ ನಿಲ್ದಾಣದ ವಿಚಾರದಲ್ಲಿ ಶಾಸಕರು ಉಲ್ಟಾ ಹೊಡೆದರೇ ಎಂಬ ಪ್ರಶ್ನೆ ಮೂಡಿದೆ.
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ನವೆಂಬರ್ 21ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ವಿಮಾನಗಳೇ ಬಾರದಿದ್ದರೆ ಆ ಜಮೀನನ್ನು ರೈತರಿಗೆ ವಾಪಸ್ ಕೊಟ್ಟುಬಿಡಿ. ವಿಮಾನ ನಿಲ್ದಾಣವನ್ನೇ ಮುಚ್ಚಿಬಿಡೋಣ ಎಂದು ಖಾರವಾಗಿ ಹೇಳಿದ್ದರು.
ಇದಲ್ಲದೆ, ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಿಕೊಡುವ ಉದ್ದೇಶದಿಂದಲೇ ವಿಮಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವೇ ವಿಮಾನಯಾನ ಸೇವೆ ಮುಂದುವರಿಸಲು ಕ್ರಮ ಕೈಗೊಳ್ಳಬೇಕು. ಉಡಾನ್ ಯೋಜನೆಯಡಿ ವಿಮಾನ ಹಾರಾಟ ಆರಂಭಿಸಬೇಕು ಎಂದು ಆಗ್ರಹಿಸಿದ್ದರು.
ಕಲಬುರಗಿ, ಬೀದರ್ಗೆ 16 ಕೋಟಿ; ಶಿವಮೊಗ್ಗಕ್ಕೆ ಎಷ್ಟು?
ಇದೇ ವೇಳೆ, ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ತಲಾ 16 ಕೋಟಿ ರೂ. ಅನುದಾನ ನೀಡಿದೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲವೇ ಎಂದು ಮಾಧ್ಯಮದವರು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಶಾಸಕರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 10 ಕೋಟಿ ರೂ. ನೀಡಲಾಗಿದೆ. ಅದರಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದ 5 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಆದರೆ ಈ ಅನುದಾನದ ವಿಚಾರದಲ್ಲಿ ಮತ್ತಷ್ಟು ಸ್ಪಷ್ಟನೆ ಕೇಳಿದಾಗ, ಅಧ್ಯಕ್ಷರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂಬ ಧಾಟಿಯಲ್ಲಿ ಉತ್ತರಿಸಿದರು. ಇದರಿಂದ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನದ ಕುರಿತು ಶಾಸಕರಿಗೆ ಸಂಪೂರ್ಣ ಮಾಹಿತಿ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇಂಡಿಗೋ ವಿಮಾನ ಸೇವೆ ಸ್ಥಗಿತಕ್ಕೆ ಹೊಸ ನಿಯಮ ಕಾರಣ ಎಂದ ಅಧ್ಯಕ್ಷರು
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಳ್ಳುತ್ತಿರುವುದಕ್ಕೆ ಕಾರಣ ಹೇಳಲು ಮುಂದಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ. ಮಂಜುನಾಥ ಗೌಡ ಪೈಲಟ್ಗಳ ದಿನದ ಲ್ಯಾಂಡಿಂಗ್ ಮಿತಿಗೆ ಸಂಬಂಧಿಸಿದ ಹೊಸ ನಿಯಮವನ್ನು ಕೇಂದ್ರ ಪ್ರಸ್ತಾಪಿಸಿದ್ದರಿಂದ ಇಂಡಿಗೋ ವಿಮಾನ ಶಿವಮೊಗ್ಗ ಮತ್ತು ಬೆಂಗಳೂರಿನ ನಡುವಿನ ಹಾರಾಟವನ್ನ ಬಂದ್ ಮಾಡಿದೆ.
ಒಬ್ಬ ಪೈಲಟ್ ದಿನಕ್ಕೆ ಎರಡು ಲ್ಯಾಂಡಿಂಗ್ಗಳನ್ನು ಮಾತ್ರ ಮಾಡಬಹುದೆಂಬ ನಿಯಮದಿಂದಾಗಿ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಪೈಲಟ್ನ ಎರಡು ಲ್ಯಾಂಡಿಂಗ್ಗಳು ಅಲ್ಲಿಯೇ ಮುಗಿಯುತ್ತವೆ. ಅದೇ ಪೈಲಟ್ ಬೆಂಗಳೂರು-ಜಮ್ಮು ಕಾಶ್ಮೀರ ಮಾರ್ಗದಲ್ಲಿ ಕಾರ್ಯನಿರ್ವಹಿಸಿದರೆ, ದೂರದ ಪ್ರಯಾಣದಲ್ಲಿಯೂ ಎರಡು ಲ್ಯಾಂಡಿಂಗ್ಗಳೇ ಆಗುತ್ತವೆ ಎಂದು ವಿವರಿಸಿದರು.
ಈ ಕಾರಣದಿಂದ ಹತ್ತಿರದ ವಿಮಾನ ನಿಲ್ದಾಣಗಳಿಗೆ ಸೇವೆ ನೀಡುವುದರಿಂದ ವಿಮಾನಯಾನ ಕಂಪನಿಗಳಿಗೆ ನಷ್ಟವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಇಂಡಿಗೋ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಕೆಲವು ಮಾರ್ಗಗಳಲ್ಲಿ ಸೇವೆ ಸ್ಥಗಿತಗೊಳಿಸಿವೆ ಎಂದು ಸಮರ್ಥಿಸಿಕೊಂಡರು.
ಆದರೆ ಮಾಧ್ಯಮದವರು ವಿಮಾನಯಾನ ಸಂಸ್ಥೆಗಳ ಲಾಭ-ನಷ್ಟದ ಲೆಕ್ಕಾಚಾರ ಅಲ್ಲ ಪ್ರಯಾಣಿಕರ ಬೇಡಿಕೆ ಕುರಿತು ಪ್ರಶ್ನಿಸಿದಾಗ, ಅಧ್ಯಕ್ಷರು ದಿಡೀರ್ ಎಂದು ಕುರ್ಚಿಯಿಂದ ಎದ್ದು ನಿಂತು ಮಾತನಾಡಲು ಆರಂಭಿಸಿದರು. ಕೊನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಹೇಳಿ ಸುಮ್ಮನಾದರು.
ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡಿದ್ದಾರೆ. ಹೀಗಿರುವಾಗ ವಿಮಾನ ಸೇವೆ ನಿಂತುಹೋಗುವುದು ಪ್ರಧಾನಿಯವರಿಗೂ ಮುಜುಗರ ತರುವ ವಿಚಾರ. ಅವರ ಗೌರವಕ್ಕಾಗಿಯಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ವಿಮಾನ ಸೇವೆ ಮುಂದುವರಿಯುವಂತೆ ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಕೈಗಾರಿಕಾ ಸಚಿವರು ಕೂಡ ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಮ್ಮಿಂದ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ವಿಮಾನಯಾನ ಸೇವೆ ಮುಂದುವರಿಸುವ ಜವಾಬ್ದಾರಿ ಮುಂದಿನ ಹಂತದಲ್ಲಿ ಸಂಬಂಧಪಟ್ಟವರ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಹಿತಿ ತಿಳಿಯದೆ ಮಾತನಾಡಿ ಮುಜುಗರಕ್ಕೀಡಾದರೇ?
ಒಂದೆಡೆ ವಿಮಾನ ನಿಲ್ದಾಣವನ್ನೇ ಬಂದ್ ಮಾಡಿ ರೈತರ ಜಮೀನು ವಾಪಸ್ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಮತ್ತೊಂದೆಡೆ ವಿಮಾನ ಸೇವೆ ಪುನರಾರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನು ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳಿಗೆ ನೀಡಿರುವ ಅನುದಾನ ಮತ್ತು ಶಿವಮೊಗ್ಗಕ್ಕೆ ಬಿಡುಗಡೆಯಾಗಿರುವ ಹಣದ ವಿಚಾರದಲ್ಲಿಯೂ ಮಾಧ್ಯಮದವರ ಪ್ರಶ್ನೆಗೆ ತಕ್ಷಣ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗದೆ ನಂತರ ಮಾಹಿತಿ ಪಡೆದು ಮಾತನಾಡುವುದಾಗಿ ಹೇಳಿದ್ದಾರೆ.
ಹಾಗಾದರೆ ಶಿವಮೊಗ್ಗ ವಿಮಾನ ನಿಲ್ದಾಣದ ಅನುದಾನ ಹಾಗೂ ವಿಮಾನಯಾನ ಸ್ಥಗಿತದ ಹಿಂದಿನ ನೈಜ ಕಾರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ಶಾಸಕ ಬೇಳೂರು ಗೋಪಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರೇ? ತಮ್ಮದೇ ಹೇಳಿಕೆಗಳಿಗೆ ತಾವೇ ಸ್ಪಷ್ಟನೆ ನೀಡುವ ಪರಿಸ್ಥಿತಿ ನಿರ್ಮಾಣವಾಯಿತೇ? ಎಂಬ ಚರ್ಚೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
MLA from Belur who said to close Shivamogga airport and return farmers' land backfires! | Embarrassed at press conference



0 ಕಾಮೆಂಟ್ಗಳು