SUDDILIVE || SHIVAMOGGA
ನೀರು ಹರಿಸಲು ಕ್ರಮಕೈಗೊಳ್ಳದಿದ್ದರೆ ಸಚಿವ ಮಧು ಬಂಗಾರ್ಪನವರ ಮನೆಯನ್ನ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರ ಎಚ್ಚರಿಕೆ- Protesters Warn of Gheraoing Minister Madhu Bangarappa’s Residence if No Action Is Taken to Release Water to Bhadra Canals
ಶಿವಮೊಗ್ಗ: ಭದ್ರಾ ನಾಲೆಗಳಿಗೆ 20 ದಿನಗಳ ಕಾಲ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಶಿವಮೊಗ್ಗ ನಗರದ ಶಿವಪ್ಪನಾಯಕ ಬ್ಯಾರಿ ಮಾಲ್ ಬಳಿಯಿರುವ ಸಚಿವ ಮಧು ಬಂಗಾರಪ್ಪ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಭದ್ರಾ ಜಲಾಶಯದಿಂದ ನೀರು ಹರಿಸದಿರುವುದರಿಂದ ಅಡಿಕೆ ತೋಟಗಳು ಒಣಗುವ ಭೀತಿ ಎದುರಾಗಿದೆ. ಕೂಡಲೇ ನಾಲೆಗಳಿಗೆ ನೀರು ಹರಿಸಿ ರೈತರ ತೋಟಗಳನ್ನು ಉಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಲಾಶಯಗಳಿಗೆ ಬೀಗ ಹಾಕಿಕೊಂಡು ಕುಳಿತಿದ್ದೀರಾ? – ವೀರೇಶ್
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ವೀರೇಶ್, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೆ, ಎಲ್ಲಾ ಜಲಾಶಯಗಳಿಗೆ ಬೀಗ ಹಾಕಿಕೊಂಡು ಕುಳಿತಿದ್ದೀರಾ ಎಂದು ಪ್ರಶ್ನಿಸಿದರು. ಮಂತ್ರಿಗಿರಿ ಎಂದರೆ ರೈತರ ಕಣ್ಣಲ್ಲಿ ನೀರು ತರಿಸುವುದಲ್ಲ ಕಣ್ಣೀರು ವರೆಸಬೇಕು. ತಕ್ಷ ಣ ನೀರು ಹರಿಸಲು ಕ್ರಮ ಆಗದಿದ್ದ ಸಚಿವ ಮಧು ಬಂಗಾರಪ್ಪನವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರೈತರ ಬೆಳೆಗಳು ಒಣಗುತ್ತಿದ್ದು, ಜನಪ್ರತಿನಿಧಿಗಳು ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ರೈತರನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಂಘರ್ಷಕ್ಕೆ ತಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ತಾಪಂ ಚುನಾವಣೆ ವೇಳೆ ಮತಯಾಚಿಸಲು ಬಂದಾಗ ಹಸಿರು ಟವೆಲ್ ನ ಶಕ್ತಿ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.
50-60 ವರ್ಷಗಳಿಂದ ತೋಟ ಮಾಡಿಕೊಂಡು ಬಂದಿದ್ದೇವೆ
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, "ನಾವು 50-60 ವರ್ಷಗಳಿಂದ ತೋಟ ಮಾಡಿಕೊಂಡು ಬಂದಿದ್ದೇವೆ. ಚಿತ್ರದುರ್ಗಕ್ಕೆ ಭದ್ರಾ ನೀರು ಬೇಡ ಎಂದು ಹೇಳಿದರೂ ನೀರನ್ನು ತೆಗೆದುಕೊಂಡು ಹೋದಾಗಲೂ ನಾವು ಸುಮ್ಮನಿದ್ದೆವು. ಆದರೆ ಈಗ ನಮ್ಮ ತೋಟಗಳಿಗೆ ನೀರು ಸಿಗದಿರುವುದು ಅನ್ಯಾಯವಾಗಿದೆ" ಎಂದು ಹೇಳಿದರು.
ಟ್ರಯಲ್ಗಾಗಿ ನೀರು ಬಿಡುವುದಾಗಿ ಹೇಳಿ ನಾಲ್ಕು ದಿನ ನೀರು ಹರಿಸಿದ ಬಳಿಕ ಮತ್ತೆ ಬಂದ್ ಮಾಡಲಾಗಿದೆ. ಈಗ ದನಕರುಗಳಿಗೂ ನೀರು ನೀಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
90 ದಿನಗಳಲ್ಲಿ 3 ಟಿಎಂಸಿ ನೀರು ಸಂಗ್ರಹಿಸಿದರೂ ಬಲದಂಡೆಗೆ ನೀರಿಲ್ಲ
90 ದಿನಗಳ ಕಾಲ 3 ಟಿಎಂಸಿ ನೀರನ್ನು ಸಂಗ್ರಹಿಸಿ ದಾವಣಗೆರೆ ಭಾಗದ ಬೆಳೆಗಾರರಿಗೆ ನೀರು ನೀಡಲಾಗಿದೆ. ಆದರೆ ಭದ್ರಾ ಬಲದಂಡೆ ನಾಲೆಗೆ ಒಂದು ಹನಿ ನೀರನ್ನೂ ಹರಿಸಿಲ್ಲ ಎಂದು ಮಂಜುನಾಥ್ ಆರೋಪಿಸಿದರು.
ಈಗ ನೀರು ಹರಿಸಲು ತೀರ್ಮಾನಿಸಿದರೂ ಎಡದಂಡೆ ನಾಲೆಯ ಬೆಳೆಗಾರರಿಗೆ 45 ದಿನಗಳವರೆಗೆ ನೀರು ಸಿಗುವುದಿಲ್ಲ. ಹೀಗಾಗಿ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾ ಹೇಳಿಕೆ ನೀಡುವುದಷ್ಟೇ ಅಲ್ಲದೆ, ಜಿಲ್ಲಾಧಿಕಾರಿ ಕಚೇರಿಗೆ ಬಂದು ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಸದರು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರ ಪರವಾಗಿ ಧ್ವನಿ ಎತ್ತಬೇಕು. ಕನಿಷ್ಠ 20 ದಿನಗಳ ಕಾಲ ನೀರು ಹರಿಸಿದರೆ ಕೆಲವು ತೋಟಗಳನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನವರಿ 10ರೊಳಗೆ ನೀರು ಹರಿಸದಿದ್ದರೆ ಅಡಿಕೆ ಮರ ಉಳಿಯಲ್ಲ
ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ನೀರು ಹರಿಸದಿದ್ದರೆ ಜನವರಿ 10ರೊಳಗೆ ಅಡಿಕೆ ಮರಗಳು ಉಳಿಯುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಹೊನ್ನಾಳಿ ಶಾಸಕ ಶಾಂತನಗೌಡರು ಐಸಿಸಿ ಸಭೆ ನಡೆಸಿ ನೀರು ಹರಿಸದಂತೆ ತೀರ್ಮಾನಿಸಿದರೆ, ರೈತರ ಬೆಳೆಗಳ ರಕ್ಷಣೆಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಮಂಜುನಾಥ್, ಚಿತ್ರದುರ್ಗಕ್ಕೆ ನೀರು ಹರಿಸುವ ಸಂದರ್ಭದಲ್ಲಿ ಶಾಸಕರು ರಾಜೀನಾಮೆ ನೀಡಿರಲಿಲ್ಲ. ಈಗ ರೈತರ ನೀರಿನ ವಿಚಾರದಲ್ಲಿ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಈ ವಿಚಾರವಾಗಿ ಶಾಸಕರ ಅಭಿಮಾನಿಯೊಬ್ಬರು ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿರುವುದನ್ನೂ ಪ್ರಸ್ತಾಪಿಸಿದ ಅವರು, ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ರಾಜಕೀಯ ದೃಷ್ಟಿಯಿಂದ ನೋಡದೆ ಜಿಲ್ಲೆಯ ಬಲದಂಡೆ ಮತ್ತು ಎಡದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದ ಬೆಳೆಗಾರರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಅವರ ಕೈಯಲ್ಲಿ ಅಡಿಕೆ ಬೆಳೆಗಾರರ ಭವಿಷ್ಯವಿದೆ. ಕೂಡಲೇ ಭದ್ರಾ ನಾಲೆಗಳಿಗೆ ನೀರು ಹರಿಸಿ ಅಡಿಕೆ ತೋಟಗಳನ್ನು ಉಳಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.
ಇದೇ ವೇಳೆ ಶಾಸಕರ ಕಚೇರಿ ಎದುರಿನ ನೆಹರು ರಸ್ತೆಯನ್ನು ಟ್ರ್ಯಾಕ್ಟರನ್ನು ರಸ್ತೆಗೆ ಅಡ್ಡ ನಿಲ್ಲಿಸಿ ರೈತರು ರಸ್ತೆ ತಡೆಗೂ ಮುಂದಾಗಿದ್ದಾರೆ ಲಭ್ಯವಾಗಿದೆ. ಇದೇ ವೇಳೆ ಯಶವಂತ್ ರಾವ್ ಘೋರ್ಪಡೆ ಅವರ ಸವಿವರ ಕಚೇರಿ ಮುತ್ತಿಗೆಯೂ ಮುಕ್ತಾಯಗೊಂಡಿದೆ.
Protesters Warn of Gheraoing Minister Madhu Bangarappa’s Residence if No Action Is Taken to Release Water to Bhadra Canals




0 ಕಾಮೆಂಟ್ಗಳು