SUDDILIVE || SHIVAMOGGA
ಕೋರ್ಟ್ ವೃತ್ತದಿಂದ ಟ್ರ್ಯಾಕ್ಟರ್ ತೆರವುಗೊಳಿಸಿದ ರೈತರು; ಇಂದು ನೀರು ಬಿಡದಿದ್ದರೆ ನಾಳೆ ಶಿವಮೊಗ್ಗ ಬಂದ್ ಎಚ್ಚರಿಕೆ!Farmers Remove Tractors from Court Circle; Warn of Shivamogga Citywide Shutdown Tomorrow if Water Is Not Released Today!
ಶಿವಮೊಗ್ಗ: ಭದ್ರಾ ಎಡ ಮತ್ತು ಬಲ ನಾಲೆಗಳಲ್ಲಿ ಕನಿಷ್ಠ 20 ದಿನ ನೀರು ಹರಿಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ರೈತರು ಸದ್ಯ ಕೋರ್ಟ್ ವೃತ್ತದಿಂದ ಜಾಗ ಖಾಲಿ ಮಾಡಿದ್ದಾರೆ. ವೀರಭದ್ರ ಚಿತ್ರಮಂದಿರದ ಬಳಿಯ ಸಿಗ್ನಲ್ನಲ್ಲಿಯೂ ರೈತರು ತಮ್ಮ ಟ್ರ್ಯಾಕ್ಟರ್ಗಳನ್ನು ತೆರವುಗೊಳಿಸುತ್ತಿದ್ದಾರೆ.
ಇಂದು (ನವೆಂಬರ್ 25) ನೀರು ಹರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ನಾಳೆ (ನವೆಂಬರ್ 26) ಶಿವಮೊಗ್ಗ ನಗರವನ್ನೇ ಬಂದ್ ಮಾಡುವ ನಿರ್ಧಾರವನ್ನು ರೈತರು ಕೈಗೊಂಡಿದ್ದಾರೆ. ಈ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರೊಂದಿಗೆ ಮಾತನಾಡಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ನಂತರ ರೈತರು ಕೋರ್ಟ್ ವೃತ್ತದಿಂದ ಟ್ರ್ಯಾಕ್ಟರ್ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ಮಹಾವೀರ ವೃತ್ತದಲ್ಲಿ ಟ್ರ್ಯಾಕ್ಟರ್ಗಳಿಂದ ರಸ್ತೆ ತಡೆ
ಭದ್ರಾ ಎಡ ಮತ್ತು ಬಲ ನಾಲೆಗಳ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಯುತ್ತಿತ್ತು. ನಾಲೆಗಳಲ್ಲಿ ಕನಿಷ್ಠ 20 ದಿನ ನೀರು ಹರಿಸುವಂತೆ ಆಗ್ರಹಿಸಿದ ರೈತರು, ಮಹಾವೀರ ವೃತ್ತದಲ್ಲಿ ಸರಪಳಿ ರಚಿಸಿಕೊಂಡು ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದ್ದರು.
ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಅಧಿಕಾರಿಗಳ ಮಾಹಿತಿ ಒಪ್ಪದ ರೈತರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು, ರೈತರ ಬೇಡಿಕೆಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇದಕ್ಕೆ ಒಪ್ಪದ ರೈತರು, ಪತ್ರ ವ್ಯವಹಾರ ಬೇಡ, ತಕ್ಷಣ ನಾಲೆಗಳಿಗೆ ನೀರು ಹರಿಸಿ ಎಂದು ಪಟ್ಟು ಹಿಡಿದರು.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕೂಡಲೇ ನೀರು ಹರಿಸುವಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ಡಿಸಿ ಕಚೇರಿ ಎದುರು ಡಿವೈಡರ್ ಮೇಲೆ ಹತ್ತಿದ ಟ್ರ್ಯಾಕ್ಟರ್
ಪ್ರತಿಭಟನೆ ತೀವ್ರಗೊಂಡ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ವಿಭಜಕದ (ಡಿವೈಡರ್) ಮೇಲೆ ರೈತರೊಬ್ಬರು ಟ್ರ್ಯಾಕ್ಟರ್ ಹತ್ತಿಸಿ ರಸ್ತೆ ದಾಟಿಸಿದರು. ಟ್ರ್ಯಾಕ್ಟರ್ ಡಿವೈಡರ್ ಮೇಲೆ ಚಲಿಸಿದ ಪರಿಣಾಮ ಅಲ್ಲಿದ್ದ ಕಬ್ಬಿಣದ ರಾಡ್ಗಳು ಮುರಿದು ತುಂಡಾಗಿವೆ.
ಇದಲ್ಲದೆ, ವೃತ್ತದಲ್ಲಿ ಟ್ರ್ಯಾಕ್ಟರ್ಗಳನ್ನು ಚಲಾಯಿಸುತ್ತಾ 'ಸ್ವಾಭಿಮಾನಿ ಶಿವಮೊಗ್ಗ' ಎಂಬ ಘೋಷಣೆಗಳನ್ನು ರೈತರು ಕೂಗಿದರು.
ಇಂದು ನಿರ್ಧಾರ ಕೈಗೊಳ್ಳದಿದ್ದರೆ ನಾಳೆ ನಗರ ಬಂದ್
ಭದ್ರಾ ನಾಲೆಗಳಲ್ಲಿ ಕನಿಷ್ಠ 20 ದಿನ ನೀರು ಹರಿಸುವುದು ರೈತರ ಪ್ರಮುಖ ಬೇಡಿಕೆಯಾಗಿದೆ. ಕೃಷಿ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇಂದು ನೀರು ಬಿಡುವ ಕುರಿತು ತೀರ್ಮಾನ ಪ್ರಕಟಿಸದಿದ್ದರೆ ನಾಳೆ ಶಿವಮೊಗ್ಗ ನಗರ ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಟ್ರ್ಯಾಕ್ಟರ್ಗಳನ್ನು ತೆರವುಗೊಳಿಸುತ್ತಿದ್ದರೂ, ಸರ್ಕಾರದ ಮುಂದಿನ ನಿರ್ಧಾರದ ಮೇಲೆ ರೈತರ ಹೋರಾಟದ ಮುಂದಿನ ಸ್ವರೂಪ ನಿರ್ಧಾರವಾಗಲಿದೆ.
ಬೆಕ್ಕಿನಕಲ್ಮಠ, ಚರ್ಚ್ ಸರ್ಕಲ್ ನಲ್ಲೂ ಪ್ರತಿಭಟನೆ ಮುಂದುವರೆದಿದೆ. ವೀರಭದ್ರ ಚಲನಚಿತ್ರ ಮಂದಿರದ ಸಿಗ್ನಲ್ ಬಳಿಯಿದ್ದ ರೈತರು ವಾಪಾಸ್ ಡಿಸಿ ಕಚೇರಿಗೆ ತೆರಳಿದ್ದಾರೆ. ಇನ್ನೆರಡುಕಡೆಯ ಪ್ರತಿಭಟನೆ ಮುಂದುವರೆದಿದೆ.
Farmers Remove Tractors from Court Circle; Warn of Shivamogga Citywide Shutdown Tomorrow if Water Is Not Released Today!



0 ಕಾಮೆಂಟ್ಗಳು