Advertisement

ಶಿಕ್ಷಣ ಹಕ್ಕು ಕಾಯಿದೆ ಸಮಗ್ರ ಜಾರಿಗೆ ಆಗ್ರಹ; ನ.26ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ-Demand for comprehensive implementation of the Right to Education Act; Indefinite Satyagraha from November 26

SUDDILIVE || SHIVAMOGGA

 ಶಿಕ್ಷಣ ಹಕ್ಕು ಕಾಯಿದೆ ಸಮಗ್ರ ಜಾರಿಗೆ ಆಗ್ರಹ; ನ.26ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ-Demand for comprehensive implementation of the Right to Education Act; Indefinite Satyagraha from November 26

Rights, education

ಶಿವಮೊಗ್ಗ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರವೇ ಸಂಪೂರ್ಣ ಹೊಣೆಗಾರಿಕೆ ವಹಿಸಬೇಕು. ಶಾಲಾ ದತ್ತು ಹಾಗೂ ಮೆಂಟರ್ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನ.26ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಲಾಗುತ್ತಿದೆ.

ಸಂವಿಧಾನ ದಿನವಾದ ನ.26ರಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಯಲಿದೆ.

‘ಸರ್ಕಾರಿ ಶಾಲೆ ಉಳಿಯಲಿ, ಬೆಳೆಯಲಿ; ನೆರೆಹೊರೆಯ ಸಮಾನ ಶಾಲೆಯಾಗಲಿ’ ಎಂಬ ಆಶಯದೊಂದಿಗೆ ಹೋರಾಟ ರೂಪಿಸಿರುವ ವೇದಿಕೆ, ಶಿಕ್ಷಣವು ದಾನ ಅಥವಾ ಧರ್ಮದ ವಿಷಯವಲ್ಲ. ಅದು ಸಂವಿಧಾನ ನೀಡಿರುವ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಎಂದು ತಿಳಿಸಿದೆ.

2002ರ 86ನೇ ಸಂವಿಧಾನ ತಿದ್ದುಪಡಿ ಮೂಲಕ ಅನುಚ್ಛೇದ 21ಎ ಸೇರ್ಪಡೆಗೊಳಿಸಿ, 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾನ್ಯ ಮಾಡಲಾಗಿದೆ. ಇದರ ಅನುಷ್ಠಾನಕ್ಕಾಗಿ ರೂಪುಗೊಂಡ ಶಿಕ್ಷಣ ಹಕ್ಕು ಕಾಯಿದೆ-2009, 2010ರಲ್ಲಿ ಜಾರಿಗೆ ಬಂದಿದೆ.

ಕಾಯಿದೆಯ ಆಶಯದಂತೆ ಪ್ರತಿಯೊಂದು ಮಗುವೂ ಶಾಲೆಗೆ ದಾಖಲಾಗಬೇಕು, ನಿರಂತರವಾಗಿ ಕಲಿಯಬೇಕು ಹಾಗೂ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಬೇಕು. ಇದನ್ನು ಖಚಿತಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಅಗತ್ಯ ಶಿಕ್ಷಕರು, ಮೂಲಸೌಕರ್ಯ, ಕಲಿಕೋಪಕರಣಗಳು ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಎಲ್ಲ ಮಕ್ಕಳನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣದ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾಕಾರಗೊಳಿಸಿ, ನ್ಯಾಯಯುತ ಹಾಗೂ ಮಾನವೀಯ ಸಮಾಜ ನಿರ್ಮಿಸಲು ಸಾಧ್ಯ. ಆದರೆ ಶಿಕ್ಷಣ ಹಕ್ಕು ಕಾಯಿದೆ ಸಮಗ್ರವಾಗಿ ಜಾರಿಯಾಗದೆ ಇರುವುದರಿಂದ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದು ವೇದಿಕೆ ಆರೋಪಿಸಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡ ಶಿಕ್ಷಣ ಹಕ್ಕು ಕಾಯಿದೆಯ ಆಶಯವನ್ನು ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣವಾಗಿ ಜಾರಿಗೆ ತರದಿರುವುದು ವಿಷಾದನೀಯ ಎಂದು ವೇದಿಕೆ ತಿಳಿಸಿದೆ.

ಸರ್ಕಾರ ಗುಣಮಟ್ಟದ ಶಿಕ್ಷಣ ಒದಗಿಸುವ ಬದಲಿಗೆ ದಾನ, ಧರ್ಮ ಮತ್ತು ದತ್ತು ಯೋಜನೆಗಳ ಮೂಲಕ ಖಾಸಗಿ ಸಂಸ್ಥೆಗಳ ಔದಾರ್ಯಕ್ಕೆ ಅವಲಂಬಿಸಬಾರದು. ಸರ್ಕಾರಿ ಶಾಲೆಗಳನ್ನು ಖಾಸಗಿ ಆಡಳಿತ ಮಂಡಳಿ ಅಥವಾ ಕಾರ್ಪೊರೇಟ್ ಸಂಸ್ಥೆಗಳ ಸುಪರ್ದಿಗೆ ನೀಡುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸಾರ್ವಜನಿಕ ಶಿಕ್ಷಣ ಸರ್ಕಾರದ ಖಚಿತ ಹೊಣೆಗಾರಿಕೆಯಾಗಿರಬೇಕು ಎಂದು ಒತ್ತಾಯಿಸಿದೆ.

ಪ್ರಮುಖ ಬೇಡಿಕೆಗಳು

1. ಮೂರು ತಿಂಗಳೊಳಗೆ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಜಾರಿಗೆ ತರಬೇಕು.

2. ಶಾಲಾ ದತ್ತು ಮತ್ತು ಮೆಂಟರ್ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕು.

ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರವೇ ವಹಿಸಬೇಕು. ಸಾರ್ವಜನಿಕ ಹಣಕಾಸು ಮತ್ತು ಉತ್ತರದಾಯಕ ಆಡಳಿತದ ಮೂಲಕ ಶಾಲೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.

ಈ ಎರಡು ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರವೇ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ, ಸ್ಪಷ್ಟ ಕಾಲಮಿತಿಯೊಂದಿಗೆ ಲಿಖಿತ ಭರವಸೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದೆ.

ಸರ್ಕಾರಿ ಶಾಲೆಗಳ ಉಳಿವಿಗಾಗಿ ನಡೆಯುತ್ತಿರುವ ಈ ಶಾಂತಿಯುತ ಹೋರಾಟಕ್ಕೆ ಪೋಷಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಕನ್ನಡಪರ ಸಂಘಟನೆಗಳು, ದಲಿತ ಮತ್ತು ಆದಿವಾಸಿ ಸಮುದಾಯಗಳೊಂದಿಗೆ ಕೆಲಸ ಮಾಡುವ ಸಂಘಟನೆಗಳು, ಯುವ ಸಂಘಟನೆಗಳು ಹಾಗೂ ನಾಗರಿಕರು ತನು, ಮನ, ಧನದ ಬೆಂಬಲ ನೀಡಬೇಕು ಎಂದು ಸಮನ್ವಯ ವೇದಿಕೆ ಮನವಿ ಮಾಡಿದೆ.

Demand for comprehensive implementation of the Right to Education Act; Indefinite Satyagraha from November 26

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು