SUDDILIVE || SHIVAMOGGA
ಭದ್ರಾ ನೀರಿಗಾಗಿ ನ.25ರಂದು ರೈತರ ಬೃಹತ್ ಹೋರಾಟ: 300 ಟ್ರ್ಯಾಕ್ಟರ್, 10 ಸಾವಿರ ರೈತರು ಭಾಗಿ ನಿರೀಕ್ಷೆ; ಕೆ.ಟಿ. ಗಂಗಾಧರ್ ಘೋಷಣೆ-Farmers' massive protest for Bhadra water on November 25: 300 tractors, 10 thousand farmers expected to participate; KT Gangadhar announces
ಶಿವಮೊಗ್ಗ: ಭದ್ರಾ ಎಡ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆ ರಕ್ಷಣೆಗೆ ತಕ್ಷಣ 20 ದಿನಗಳ ಕಾಲ ನೀರು ಹರಿಸಬೇಕು. ಬೇಸಿಗೆಯ ಐದು ತಿಂಗಳಿಗೂ ನೀರು ನಿರ್ವಹಣೆಯ ಖಚಿತ ಕ್ಯಾಲೆಂಡರ್ ರೂಪಿಸಬೇಕು ಎಂದು ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯ ಕೆ.ಟಿ. ಗಂಗಾಧರ್ ಆಗ್ರಹಿಸಿದ್ದಾರೆ.
ಭದ್ರಾ ಜಲಾಶಯದ ನೀರಿನ ಹಂಚಿಕೆ ಹಾಗೂ ಅಚ್ಚುಕಟ್ಟು ಪ್ರದೇಶದ ಬೆಳೆಗಳ ರಕ್ಷಣೆ ವಿಚಾರವಾಗಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ನವೆಂಬರ್ 25ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರು, ಜನ ಜಾನುವಾರು ಹಾಗೂ ಕೃಷಿ ಯಂತ್ರೋಪಕರಣಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 300 ಟ್ರ್ಯಾಕ್ಟರ್ಗಳು ಹಾಗೂ 10 ಸಾವಿರಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರೈತರ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಮಾಧ್ಯಮಗಳಿಗೆ ರೈತ ಸಂಘದ ಧನ್ಯವಾದ
ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಿನ ಸಮಸ್ಯೆ, ಬರಗಾಲ, ಬೆಳೆಗಳ ರಕ್ಷಣೆ ಹಾಗೂ ಸರ್ಕಾರದ ನೀರಿನ ನಿರ್ವಹಣೆಯ ಕುರಿತು ಶಿವಮೊಗ್ಗದ ಮಾಧ್ಯಮಗಳು ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ವರದಿಗಳನ್ನು ಪ್ರಕಟಿಸಿವೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ರೈತರ ಪರವಾಗಿ ನಿಂತು ವಿಶೇಷ ವರದಿಗಳು ಹಾಗೂ ಲೇಖನಗಳ ಮೂಲಕ ಸಮಸ್ಯೆಯನ್ನು ಮುನ್ನೆಲೆಗೆ ತಂದಿವೆ. ಇದಕ್ಕಾಗಿ ರೈತರ ಪರವಾಗಿ ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಗಂಗಾಧರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭದ್ರಾ ಎಡದಂಡೆ ನಾಲಾ ಅಚ್ಚುಕಟ್ಟು ಹಿತರಕ್ಷಣಾ ಸಮಿತಿ ಅಧ್ಯಕ್ಷ ರಘುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಶಿವಮೊಗ್ಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಜಗದೀಶ್ ನಾಯಕ, ಕೃಷ್ಣಮೂರ್ತಿ, ರೈತ ಸಂಘದ ಶಿವಮೊಗ್ಗ ಸಂಚಾಲಕ ಮೇಸ್ತಾರ್, ಸಹಕಾರ ಮಿತ್ರ ಗೋಂದಿ ಜಯರಾಮ್, ಸಮಿತಿಯ ವೆಂಕಟೇಶ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ರೈತರಷ್ಟೇ ಅಲ್ಲ, ಇಡೀ ಕೃಷಿ ಆರ್ಥಿಕತೆಯ ಪ್ರಶ್ನೆ
ನೀರಿನ ಹೋರಾಟವನ್ನು ಕೇವಲ ಅಡಿಕೆ ಬೆಳೆಗಾರರು ಅಥವಾ ಭತ್ತದ ಬೆಳೆಗಾರರ ಸಮಸ್ಯೆಯಾಗಿ ನೋಡಬಾರದು. ಎಡ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿಯನ್ನು ಅವಲಂಬಿಸಿರುವ ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರು, ಜಾನುವಾರುಗಳು, ಪವರ್ ಟಿಲ್ಲರ್, ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳ ಬದುಕಿನ ಪ್ರಶ್ನೆ ಇದಾಗಿದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಅಡಿಕೆ ಕೇವಲ ಒಂದು ಕೃಷಿ ಬೆಳೆ ಅಲ್ಲ. ಅದೊಂದು ದೊಡ್ಡ ಉದ್ಯಮವಾಗಿದೆ. ಅಡಿಕೆ ಮಂಡಿ ವರ್ತಕರು, ಬಂಡವಾಳ ಹೂಡಿಕೆದಾರರು, ಅಡಿಕೆ ಸಾಗಣೆದಾರರು, ಅಡಿಕೆ ಆರಿಸುವ ಕಾರ್ಮಿಕರು, ಗ್ರೇಡರ್ಸ್ ಸೇರಿದಂತೆ ಲಕ್ಷಾಂತರ ಜನರು ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಹೀಗಾಗಿ ಅಡಿಕೆ ಬೆಳೆ ನಾಶವಾದರೆ ಅದರ ಪರಿಣಾಮ ರೈತರಿಗಷ್ಟೇ ಸೀಮಿತವಾಗುವುದಿಲ್ಲ. ಇಡೀ ಜಿಲ್ಲೆಯ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.
ನೀರಿನ ನಿರ್ವಹಣೆಯಲ್ಲಿ ಸರ್ಕಾರ ತಾರತಮ್ಯದ ಧೋರಣೆ ಅನುಸರಿಸುತ್ತಿದ್ದು, ಬೆಳೆಗಳ ಮಹತ್ವವನ್ನು ಕಡೆಗಣಿಸುತ್ತಿದೆ. ನೀರಾವರಿ ಇಲಾಖೆ, ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಮಸ್ಯೆಯ ಗಂಭೀರತೆಯನ್ನು ಮೊದಲೇ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು, ನೀರಾವರಿ ಸಚಿವರು ರೈತರ ಪರವಾಗಿ ಮಾತನಾಡಲಿಲ್ಲ
ನೀರಿನ ಕೊರತೆ ಮತ್ತು ಬರಗಾಲದ ಪರಿಸ್ಥಿತಿಯ ಕುರಿತು ಸರ್ಕಾರವೇ ಘೋಷಣೆ ಮಾಡಿದೆ. ರಾಜ್ಯದಲ್ಲಿ ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದು, ನೀರಿನ ತುರ್ತು ಪರಿಸ್ಥಿತಿ ಇದೆ ಎಂದು ಸರ್ಕಾರ ಹೇಳಿದೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದಾಗಿಯೂ ಅವರು ಪ್ರಸ್ತಾಪಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ತನ್ನ ಇಲಾಖೆಗಳ ಮೂಲಕ ವಾಸ್ತವಿಕ ವರದಿಗಳನ್ನು ತರಿಸಿಕೊಂಡು, ರೈತರ ಬೇಡಿಕೆ ನ್ಯಾಯಯುತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು. ರೈತರ ಪರವಾಗಿ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರು ಸ್ಪಷ್ಟವಾಗಿ ಮಾತನಾಡಬೇಕಿತ್ತು. ಆದರೆ ಈವರೆಗೆ ಯಾರೂ ರೈತರ ಪರವಾಗಿ ಧ್ವನಿ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಅವರು ಕಾಡಾ ಐಸಿಸಿ ಅಧ್ಯಕ್ಷರೂ ಆಗಿರುವುದರಿಂದ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದೆವು. ಆಗ ಅವರು, 'ಪ್ರಜ್ಞೆ ಇಲ್ಲದಿದ್ದರೆ ಆಗುವುದಿಲ್ಲ ಗಂಗಣ್ಣ, ಏನಾದರೂ ಮಾಡಬೇಕು' ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು ಎಂದು ಗಂಗಾಧರ್ ವಿವರಿಸಿದರು.
ದಾವಣಗೆರೆ ಭಾಗದ ಬಲದಂಡೆ ನೀರಿನ ವಿಚಾರವಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಲಾಗಿತ್ತು. ರೈತ ಸಂಘದ ತಂಡ ಮೂರು-ನಾಲ್ಕು ಕಾರುಗಳಲ್ಲಿ ತೆರಳಿ ಪರಿಸ್ಥಿತಿಯನ್ನು ವಿವರಿಸಿತ್ತು. ಅವರೂ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು ಎಂದರು.
ನಂತರ ಮಾಜಿ ಸಚಿವರಾದ ಶಾಂತರಾಮ ಗೌಡ, ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ರವೀಂದ್ರನಾಥ್ ಅವರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದೇವೆ. ನರಸಿಂಹಪ್ಪ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿಸಿ ಪರಿಸ್ಥಿತಿಯನ್ನು ವಿವರಿಸಿದ್ದೇವೆ ಎಂದು ತಿಳಿಸಿದರು.
ಮೇಲ್ಭದ್ರಾ ಯೋಜನೆಗೆ ನೀರು ಹರಿಸುವ ವಿಚಾರದಲ್ಲಿ ಸಂಘರ್ಷ
ಭದ್ರಾ ಜಲಾಶಯದಿಂದ ಮೇಲ್ಭದ್ರಾ ಯೋಜನೆಗೆ ನೀರು ಹರಿಸುವ ವಿಚಾರದಲ್ಲಿ ರೈತ ಸಂಘ ಪ್ರತಿಭಟನೆ ನಡೆಸಿತ್ತು. ನೀರನ್ನು ಬಲವಂತವಾಗಿ ಮೇಲ್ಭದ್ರಾ ಯೋಜನೆಗೆ ಹರಿಸುವುದನ್ನು ತಡೆಯಲು ಮುಂದಾದಾಗ ರೈತ ಮುಖಂಡರನ್ನು ಬಂಧಿಸಿ ಎಂ.ಪಿ.ಎಂ. ಗೆಸ್ಟ್ಹೌಸ್ಗೆ ಕರೆದೊಯ್ದು ಸಂಜೆವರೆಗೆ ಇರಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎಂದು ಗಂಗಾಧರ್ ಹೇಳಿದರು.
ಇದಾದ ಬಳಿಕ ಗ್ರಾಮಗಳಿಗೆ ತೆರಳಿ ಸಭೆಗಳನ್ನು ನಡೆಸಿ ರೈತರನ್ನು ಸಂಘಟಿಸಲಾಯಿತು. ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಸೇರಿದಂತೆ ರೈತರು ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ತಮ್ಮ ಆಕ್ರೋಶವನ್ನು ತಲುಪಿಸಿದರು.
ನಂತರ ಸರ್ಕಾರ ಹತ್ತು ದಿನಗಳ ಕಾಲ ನೀರು ಹರಿಸಿತು. ಅಡಿಕೆ ಬೆಳೆ ಉಳಿಸಿಕೊಳ್ಳಲು ತಾತ್ಕಾಲಿಕವಾಗಿ ಬಂದ ನೀರನ್ನು ರೈತರು ಬಳಸಿಕೊಂಡರು. ಆದರೆ ಅದರಲ್ಲಿಯೂ ಗೊಂದಲಗಳು ಉಂಟಾಗಿ ಇದೀಗ ಬಲದಂಡೆ ನಾಲೆಗೆ ನೀರು ಸ್ಥಗಿತಗೊಂಡಿದೆ. ಎಡದಂಡೆ ನಾಲೆಗೆ ಮಾತ್ರ ನೀರು ಬರುತ್ತಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿಗಳೇ ಮಾತುಕತೆ ನಡೆಸಿ ಬಲದಂಡೆ ನಾಲೆಯ ನೀರು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿಯನ್ನೂ ಅವರು ಪ್ರಸ್ತಾಪಿಸಿದರು. ಸರ್ಕಾರದ ಒಳಗಿನ ಗೊಂದಲಗಳು ರೈತರಿಗೆ ಅಗತ್ಯವಿಲ್ಲ. ರೈತರಿಗೆ ಬೇಕಾಗಿರುವುದು ಬೆಳೆ ಉಳಿಸುವಷ್ಟು ನೀರು ಮತ್ತು ಸ್ಪಷ್ಟವಾದ ನಿರ್ಧಾರ ಎಂದು ಹೇಳಿದರು.
ಜಲಾಶಯದ ನೀರು ಕಂದಾಯ ಇಲಾಖೆಯ ನಿಯಂತ್ರಣದಲ್ಲಿದೆ
ಭದ್ರಾ ಜಲಾಶಯದ ನೀರಿನ ನಿರ್ವಹಣೆಯಲ್ಲಿ ಮತ್ತೊಂದು ಗಂಭೀರ ಸಮಸ್ಯೆಯಿದೆ. ಪ್ರಸ್ತುತ ಜಲಾಶಯದ ನೀರು ನೀರಾವರಿ ಇಲಾಖೆಯ ನೇರ ನಿಯಂತ್ರಣದಲ್ಲಿಲ್ಲ. ನೀರಿನ ನಿರ್ವಹಣೆಯ ಜವಾಬ್ದಾರಿ ಕಂದಾಯ ಇಲಾಖೆಯ ಕಸ್ಟೋಡಿಯನ್ ವ್ಯವಸ್ಥೆಯಡಿ ಪ್ರಾದೇಶಿಕ ಆಯುಕ್ತರ ನಿಯಂತ್ರಣದಲ್ಲಿದೆ ಎಂದು ಗಂಗಾಧರ್ ಹೇಳಿದರು.
ಹೀಗಾಗಿ ನೀರಾವರಿ ಇಲಾಖೆ ನೀರು ಬಿಡಲು ನಿರ್ಧರಿಸಿದರೂ ಕಂದಾಯ ಇಲಾಖೆಯ ನಿಯಂತ್ರಣ ಮತ್ತು ಅನುಮತಿ ಅಗತ್ಯವಾಗುತ್ತಿದೆ. ಈ ಕಾರಣದಿಂದಲೇ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ನೀರಿನ ನಿರ್ವಹಣೆ ಹಾಗೂ ವಿತರಣೆಯಲ್ಲಿ ಇರುವ ಗೊಂದಲವನ್ನು ಸರ್ಕಾರ ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ತಕ್ಷಣ 20 ದಿನ ನೀರು ಹರಿಸಿ; ಬೇಸಿಗೆಗೆ 100 ದಿನಗಳ ನೀರಿನ ಭರವಸೆ ನೀಡಿ
ನವೆಂಬರ್ 25ರಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗುವುದು. ಈಗಾಗಲೇ ಹರಿಸಿರುವ ನೀರನ್ನು ಸೇರಿಸಿಕೊಂಡು ಒಟ್ಟು 20 ದಿನಗಳ ಕಾಲ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು. ರೈತರು ಉಳಿದ ನೀರನ್ನು ಪರಿಸ್ಥಿತಿಗೆ ಅನುಗುಣವಾಗಿ ಜೋಪಾನವಾಗಿ ಬಳಸಿಕೊಳ್ಳುತ್ತಾರೆ ಎಂದು ಹೇಳಿದರು.
ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಐಸಿಸಿ ಸಭೆ ನಡೆಸಿ ಉಳಿದ ನೀರಿನ ಹಂಚಿಕೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೇ ಐಸಿಸಿ ಅಧ್ಯಕ್ಷರಾಗಿದ್ದಾರೆ. ಆ ಸಭೆಯಲ್ಲಿ ರೈತರ ಪರವಾಗಿ ಚರ್ಚಿಸಿ ನೀರಿನ ಹಂಚಿಕೆ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಅದಕ್ಕೂ ಮೊದಲು ಸರ್ಕಾರ ಮುಂದಿನ ನೀರು ನಿರ್ವಹಣೆಯ ಕ್ಯಾಲೆಂಡರ್ ರೂಪಿಸುವ ಭರವಸೆ ನೀಡಬೇಕು ಎಂದರು.
ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ಸೇರಿದಂತೆ ಬೇಸಿಗೆಯ ಐದು ತಿಂಗಳು ಕನಿಷ್ಠ ಒಂದು ತಿಂಗಳಲ್ಲಿ 20 ದಿನಗಳಂತೆ ಒಟ್ಟು 100 ದಿನಗಳ ಕಾಲ ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಇದಕ್ಕೆ ಅಗತ್ಯವಿರುವ ನೀರನ್ನು ಈಗಿನಿಂದಲೇ ಯೋಜನಾಬದ್ಧವಾಗಿ ನಿರ್ವಹಿಸಬೇಕು. ಇಲ್ಲವಾದರೆ ಎಡದಂಡೆ ಮತ್ತು ಬಲದಂಡೆ ಎರಡೂ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.
ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ವರ್ಗಾಯಿಸುವುದಕ್ಕೆ ವಿರೋಧ
ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ವರ್ಗಾಯಿಸುವ ಕುರಿತು ನಿರ್ಧಾರ ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವನ್ನೂ ಕೆ.ಟಿ. ಗಂಗಾಧರ್ ವ್ಯಕ್ತಪಡಿಸಿದರು.
ಭದ್ರಾ ಜಲಾಶಯವನ್ನು ಈಗಿರುವ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥೆಯಲ್ಲಿಯೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ವರ್ಗಾಯಿಸಬಾರದು. ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬಯಲುಸೀಮೆಯ ಅಭಿವೃದ್ಧಿ ಯೋಜನೆಗಳು, ಎತ್ತಿನಹೊಳೆ ಸೇರಿದಂತೆ ಹಲವು ಯೋಜನೆಗಳಿವೆ. ಮಲೆನಾಡಿನ ಭಾಗದ ಭದ್ರಾ ಜಲಾಶಯದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವುದರಿಂದ ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾಗುವ ಆತಂಕವಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮೇಲ್ಭದ್ರಾ ಯೋಜನೆಗೆ ನೀರು ನೀಡುವುದಕ್ಕೆ ವಿರೋಧವಿಲ್ಲ; ಕೊರತೆಯ ಸಂದರ್ಭದಲ್ಲಿ ಟ್ರಯಲ್ಗೆ ವಿರೋಧ
ಮೇಲ್ಭದ್ರಾ ಯೋಜನೆಗೆ ನೀರು ನೀಡುವುದನ್ನು ರೈತ ಸಂಘ ವಿರೋಧಿಸುವುದಿಲ್ಲ. ಆದರೆ ನೀರಿನ ತೀವ್ರ ಕೊರತೆಯಿರುವ ಸಂದರ್ಭದಲ್ಲಿ ಕಾಲುವೆಗಳನ್ನು ಪರೀಕ್ಷಿಸುವ ನೆಪದಲ್ಲಿ ನೀರು ಹರಿಸುವುದನ್ನು ಖಂಡಿತವಾಗಿಯೂ ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೇಲ್ಭದ್ರಾ ಯೋಜನೆಯ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತದೆಯೇ ಎಂಬುದನ್ನು ಪರೀಕ್ಷಿಸುವ ಟ್ರಯಲ್ ರನ್ ನಡೆಸುವುದು ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ ಪಾವತಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೀರು ಹರಿಸುವುದನ್ನು ನೀರಿನ ಅಭಾವವಿರುವ ಸಮಯದಲ್ಲಿ ಮಾಡಬಾರದು. ನೀರಿನ ಕೊರತೆ ಇರುವಾಗಲೇ ಬೆಳೆಗಳನ್ನು ಒಣಗಿಸಿ ಟ್ರಯಲ್ ನಡೆಸುವುದು ಸರಿಯಾದ ಆಡಳಿತ ಕ್ರಮವಲ್ಲ ಎಂದು ಟೀಕಿಸಿದರು.
ಆದರೆ ಮೇಲ್ಭದ್ರಾ ಯೋಜನೆಗೆ ನೀಡಬೇಕಾದ ನೀರನ್ನು ನೀಡಲೇಬೇಕು. ಅದಕ್ಕೆ ಸಂಬಂಧಿಸಿದ ಬದ್ಧತೆ ಇದೆ. ತುಂಗಾ ನದಿಯ ಹೆಚ್ಚುವರಿ ನೀರನ್ನು ಭದ್ರಾ ಜಲಾಶಯಕ್ಕೆ ತಂದು, ಅದನ್ನು ಸಮತೋಲನ ಜಲಾಶಯವಾಗಿ ಬಳಸುವ ಯೋಜನೆಯೂ ಇದೆ. ಕಡೂರಿಗೆ ಇನ್ನೂ ಸುಮಾರು ಒಂದೂವರೆ ಟಿಎಂಸಿ ನೀರು ನೀಡಬೇಕಿದೆ. ತರೀಕೆರೆ ಭಾಗಕ್ಕೂ ನೀರು ಒದಗಿಸಬೇಕಿದೆ. ಈ ನೀರು ತುಂಗಾ ನದಿಯಿಂದ ಭದ್ರಾ ಜಲಾಶಯದ ಮೂಲಕ ಮೇಲ್ಭದ್ರಾ ಭಾಗಕ್ಕೆ ಹೋಗಬೇಕಿದೆ ಎಂದರು.
ತುಂಗಾದಿಂದ ಭದ್ರಾಕ್ಕೆ ನೀರು ತರುವ ಯೋಜನೆ ಪೂರ್ಣಗೊಳಿಸಲು ಒತ್ತಾಯ
ತುಂಗಾ ನದಿಯಿಂದ ನೀರನ್ನು ಎತ್ತಿ ಮುತ್ತಿನಕೊಪ್ಪದ ಸಮೀಪದ ಪ್ರದೇಶಕ್ಕೆ ಸಾಗಿಸಿ, ಅಲ್ಲಿಂದ ಸಮೀಪದ ಗುಡ್ಡಕ್ಕೆ ಪಂಪ್ ಮಾಡಿ, ನಂತರ ಸುಮಾರು 11 ಕಿ.ಮೀ. ದೂರ ಗುರುತ್ವಾಕರ್ಷಣೆಯ ಮೂಲಕ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ ಎಂದು ಗಂಗಾಧರ್ ವಿವರಿಸಿದರು.
ಈ ಯೋಜನೆಯಡಿ ಲಿಫ್ಟ್ ವ್ಯವಸ್ಥೆಗಳು, ಭೂಗತ ಕಾಲುವೆಗಳು ಹಾಗೂ ವಿದ್ಯುತ್ ಸಂಪರ್ಕದ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಆದರೆ ಗುತ್ತಿಗೆದಾರರಿಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗಳ ಬಿಲ್ ಬಾಕಿ ಇರುವುದರಿಂದ ಕಾಮಗಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.
ಈ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಿ ₹5,300 ಕೋಟಿ ನೆರವು ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದರಿಂದ ರೈತರು ಬಹಳ ಸಂತೋಷಪಟ್ಟಿದ್ದರು. ಆದರೆ ಇದುವರೆಗೆ ಮೇಲ್ಭದ್ರಾ ಯೋಜನೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಭಾಷಣ ಮಾಡುವುದಷ್ಟೇ ಅಲ್ಲದೆ, ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ತರುವ ಯೋಜನೆಗೂ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮೇಲ್ಭದ್ರಾ ಯೋಜನೆ ಕೇವಲ ನೀರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಯೋಜನೆಯಲ್ಲ. ಬಯಲುಸೀಮೆಯಲ್ಲಿ ನೀರು ವ್ಯರ್ಥವಾಗದಂತೆ ಸ್ಪ್ರಿಂಕ್ಲರ್, ಡ್ರಿಪ್, ಮೈಕ್ರೋ ಸ್ಪ್ರಿಂಕ್ಲರ್ ಹಾಗೂ ಇನ್ಲೈನ್ ಡ್ರಿಪ್ ಸೇರಿದಂತೆ ನಾಲ್ಕು ವಿಧಾನಗಳ ಮೂಲಕ ನೀರನ್ನು ಸಮರ್ಪಕವಾಗಿ ಬಳಸುವ ಮಹತ್ವದ ಯೋಜನೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದರು.
ಇತ್ತೀಚೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನೂ ಆಹ್ವಾನಿಸಿ ತುಂಗಾದಿಂದ ಭದ್ರಾಕ್ಕೆ ನೀರು ತರುವ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ. ತುಂಗಾದಿಂದ ಪಾದಯಾತ್ರೆಯನ್ನೂ ನಡೆಸಿದ್ದೇವೆ. ಆದರೆ ಸಚಿವರು ಸ್ಥಳಕ್ಕೆ ಆಗಮಿಸಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿಲ್ಲ. ಡಿಸೆಂಬರ್ನಲ್ಲಿ ತುಂಗಾದಿಂದ ನೀರು ಎತ್ತಲಾಗುವುದು ಎಂಬ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ನೀರಾವರಿ ಸಚಿವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತರ ನಡುವಿನ ಭತ್ತ-ಅಡಿಕೆ ಸಂಘರ್ಷಕ್ಕೆ ಸರ್ಕಾರದ ಸಮನ್ವಯದ ಕೊರತೆಯೇ ಕಾರಣ
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ರೈತರ ನಡುವೆಯೇ ಭತ್ತ ಮತ್ತು ಅಡಿಕೆ ಬೆಳೆಗಾರರ ನಡುವೆ ಸಂಘರ್ಷ ಉಂಟಾಗಿರುವ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಗಂಗಾಧರ್, ರೈತರ ನಡುವೆ ಪರಸ್ಪರ ದ್ವೇಷವಿಲ್ಲ. ಸರ್ಕಾರದ ನೀರಿನ ನಿರ್ವಹಣೆಯಲ್ಲಿನ ಸಮನ್ವಯದ ಕೊರತೆಯೇ ಸಮಸ್ಯೆಗೆ ಕಾರಣವಾಗಿದೆ ಎಂದರು.
ಮಳೆಗಾಲದಲ್ಲಿ ನೀರು ಉಳಿಸಿಕೊಳ್ಳುವ ಉದ್ದೇಶದಿಂದ ಭತ್ತದ ಬೆಳೆಗಾರರು ತ್ಯಾಗ ಮಾಡಬೇಕು ಎಂದು ಮನವಿ ಮಾಡಿದಾಗ ಅವರು ಸಹಕರಿಸಿದ್ದರು. ಮಳೆಗಾಲದಲ್ಲಿ ಭತ್ತದ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರುವುದಿಲ್ಲವಾದರೂ ಬೇಸಿಗೆಯಲ್ಲಿ ನೀರನ್ನು ಉಳಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು ಎಂಬ ಆಶಯದಿಂದ ಅವರು ನೀರು ಬಿಟ್ಟುಕೊಡಲು ಒಪ್ಪಿದ್ದರು. ಐಸಿಸಿ ಸಭೆಯಲ್ಲಿಯೂ ಈ ಕುರಿತು ತೀರ್ಮಾನವಾಗಿತ್ತು.
ಆದರೆ ಆ ತೀರ್ಮಾನದಂತೆ ಸರ್ಕಾರ ನಡೆದುಕೊಳ್ಳಲಿಲ್ಲ. ಬದಲಾಗಿ ಮೇಲ್ಭದ್ರಾ ಯೋಜನೆಗೆ ನೀರನ್ನು ಒತ್ತಾಯಪೂರ್ವಕವಾಗಿ ಹರಿಸಿದಾಗ ಸಮಸ್ಯೆ ಆರಂಭವಾಯಿತು. ಹಂಚಿಕೆಯಾಗಬೇಕಿದ್ದ ನೀರಿನ ವಿಚಾರದಲ್ಲಿ ಗೊಂದಲ ಉಂಟಾದ ಬಳಿಕವೇ ಭತ್ತ ಮತ್ತು ಅಡಿಕೆ ಬೆಳೆಗಾರರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿತು ಎಂದು ವಿವರಿಸಿದರು.
ಭತ್ತದ ರೈತರು ಹಿಂದೆ ಸಹಕರಿಸಿರುವುದನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ. ಅವರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬೇಕು. ರೈತರ ನಡುವೆ ಸಂಘರ್ಷ ಉಂಟಾಗದಂತೆ ಸರ್ಕಾರ ಸ್ಪಷ್ಟವಾದ ನೀರಿನ ಹಂಚಿಕೆ ಹಾಗೂ ಸಮನ್ವಯದ ವ್ಯವಸ್ಥೆ ರೂಪಿಸಬೇಕಿತ್ತು ಎಂದರು.
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಕೆಲವು ಶಾಸಕರು ರಾಜೀನಾಮೆ ನೀಡುವ ಮಾತುಗಳನ್ನಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯವನ್ನು ನಿರಾಕರಿಸುವುದಿಲ್ಲ. ಆದರೆ ರಾಜಕಾರಣ ಜನಪರವಾಗಿರಬೇಕು, ದುಡಿಯುವ ಕೈಗಳ ಪರವಾಗಿರಬೇಕು. ಸೇಡು ತೀರಿಸಿಕೊಳ್ಳುವ ರಾಜಕಾರಣವಾಗಬಾರದು ಎಂದು ಹೇಳಿದರು.
ಈ ಸಮಸ್ಯೆಯನ್ನು ರಾಜಕೀಯ ಪಕ್ಷಗಳ ನಡುವಿನ ಸಂಘರ್ಷವಾಗಿ ನೋಡಬಾರದು. ಇದು ಸರ್ಕಾರ ಮತ್ತು ರೈತರ ನಡುವಿನ ಸಮಸ್ಯೆಯಾಗಿದೆ. ರೈತರ ಬದುಕು ಹಾಗೂ ಬೆಳೆಗಳ ರಕ್ಷಣೆಯೇ ನಮ್ಮ ಮುಖ್ಯ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಸಾಲದ ಸುಳಿಯಲ್ಲಿ ರೈತರು; ಬೆಳೆ ನಾಶವಾದರೆ ಬದುಕೇ ಅತಂತ್ರ
ಅಡಿಕೆ ಬೆಳೆ ಒಣಗುತ್ತಿರುವ ದೃಶ್ಯಗಳನ್ನು ರೈತರು ಮೊಬೈಲ್ ಮೂಲಕ ಕಳುಹಿಸುತ್ತಿದ್ದಾರೆ. ನೀರಿನ ಸಮಸ್ಯೆ ಹೀಗೆಯೇ ಮುಂದುವರಿದರೆ ರೈತರ ಬದುಕು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಗಂಗಾಧರ್ ಆತಂಕ ವ್ಯಕ್ತಪಡಿಸಿದರು.
ರೈತರು ಸಾಲ ಮಾಡಿ ಮನೆ ಕಟ್ಟಿದ್ದಾರೆ, ಕೃಷಿಗೆ ಬಂಡವಾಳ ಹೂಡಿದ್ದಾರೆ, ವಾಹನಗಳನ್ನು ಖರೀದಿಸಿದ್ದಾರೆ. ಪ್ರತಿ ತಿಂಗಳು ಸಾಲದ ಕಂತು ಕಟ್ಟಬೇಕಿದೆ. ಅಡಿಕೆ ಬೆಳೆ ಬಂದರೆ ಆದಾಯ ದೊರೆಯುತ್ತದೆ, ಅಡಿಕೆ ಖರೀದಿದಾರರು ಹಾಗೂ ವ್ಯಾಪಾರಿಗಳ ಮೂಲಕ ಹಣ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಬದುಕುತ್ತಿದ್ದಾರೆ. ಆದರೆ ಬೆಳೆ ಇಲ್ಲದಿದ್ದರೆ ಸಾಲ ತೀರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.
ಇಂದಿನ ಜೀವನಮಟ್ಟ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಖರ್ಚುಗಳೂ ಹೆಚ್ಚಾಗಿವೆ. ಹಿಂದೆಗಿಂತ ಉತ್ತಮ ಜೀವನಮಟ್ಟವನ್ನು ಕಾಪಾಡಿಕೊಳ್ಳಬೇಕಾದ ಒತ್ತಡ ರೈತರ ಮೇಲಿದೆ. ಬೆಳೆ ನಾಶವಾದರೆ ರೈತರು ಆರ್ಥಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.
ಶಿವಮೊಗ್ಗ ನಗರದ ಜನತೆಗೆ ಕ್ಷಮೆಯಾಚನೆ; ವ್ಯಾಪಾರಸ್ಥರ ಸಹಕಾರಕ್ಕೆ ಮನವಿ
ನವೆಂಬರ್ 25ರ ಹೋರಾಟದಿಂದ ಶಿವಮೊಗ್ಗ ನಗರದಲ್ಲಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು, ಕಾರು ಮತ್ತು ಬೈಕ್ ಸವಾರರು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗಬಹುದು. ಇದಕ್ಕಾಗಿ ಮುಂಚಿತವಾಗಿ ಕ್ಷಮೆಯಾಚಿಸುತ್ತೇವೆ ಎಂದು ಗಂಗಾಧರ್ ಹೇಳಿದರು.
ಶಿವಮೊಗ್ಗ ನಗರದ ವಾಣಿಜ್ಯ ಸಂಘ, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ವ್ಯಾಪಾರಸ್ಥರು ರೈತರ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗದ ನಗರ ಆರ್ಥಿಕತೆಯೂ ಕೃಷಿ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ಅಡಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದರೆ ಅದರ ಪರಿಣಾಮ ವ್ಯಾಪಾರ ವಹಿವಾಟುಗಳ ಮೇಲೂ ಬೀರುತ್ತದೆ. ಆದ್ದರಿಂದ ರೈತರ ಸಮಸ್ಯೆಯನ್ನು ನಗರದ ಜನರೂ ತಮ್ಮ ಸಮಸ್ಯೆಯೆಂದು ಪರಿಗಣಿಸಬೇಕು ಎಂದು ಹೇಳಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಉದ್ದೇಶ ರೈತರಿಗಿಲ್ಲ. ಆದರೆ ತಮ್ಮ ಹಕ್ಕು ಮತ್ತು ಬದುಕನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ಅನ್ಯಾಯದ ವಿರುದ್ಧ ಶಾಂತಿಯುತ ಹೋರಾಟ ನಡೆಸುವುದೇ ಪ್ರಜೆಗಳಿಗೆ ಇರುವ ಮಾರ್ಗ. ಸರ್ಕಾರವೇ ಕೈಚೆಲ್ಲಿದಾಗ ಜನರು ತಮ್ಮ ಅನಾನುಕೂಲವನ್ನು ಸರ್ಕಾರಕ್ಕೆ ತಿಳಿಸುವ ವಿಧಾನವೇ ಹೋರಾಟ ಎಂದು ಶಾಂತವೇರಿ ಗೋಪಾಲಗೌಡರ ವಿಚಾರವನ್ನು ಉಲ್ಲೇಖಿಸಿದರು.
ನ.25ರಂದು ಜಿಲ್ಲಾಧಿಕಾರಿ ಕಚೇರಿಗೆ ರೈತರ ಮಹಾಪಡೆ
ನವೆಂಬರ್ 25ರಂದು ನಡೆಯುವ ಹೋರಾಟಕ್ಕೆ ಎಡದಂಡೆ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರು, ಕೃಷಿಯನ್ನು ಅವಲಂಬಿಸಿರುವ ಕುಟುಂಬಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೆ.ಟಿ. ಗಂಗಾಧರ್ ಮನವಿ ಮಾಡಿದರು.
ಸುಮಾರು 300 ಟ್ರ್ಯಾಕ್ಟರ್ಗಳು ಮತ್ತು 10 ಸಾವಿರ ರೈತರು ಭಾಗವಹಿಸುವ ನಿರೀಕ್ಷೆಯಿದೆ. ರೈತರ ಬದುಕು, ಜಾನುವಾರುಗಳ ರಕ್ಷಣೆ, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳು ಮತ್ತು ಭತ್ತದ ಬೆಳೆ ಉಳಿಸುವುದು ಈ ಹೋರಾಟದ ಉದ್ದೇಶವಾಗಿದೆ.
ಸರ್ಕಾರ ತಕ್ಷಣ 20 ದಿನಗಳ ಕಾಲ ನೀರು ಹರಿಸಬೇಕು, ಬೇಸಿಗೆಯ ಐದು ತಿಂಗಳಿಗೂ 100 ದಿನಗಳ ನೀರು ನಿರ್ವಹಣೆಯ ಕ್ಯಾಲೆಂಡರ್ ಪ್ರಕಟಿಸಬೇಕು, ಭದ್ರಾ ಜಲಾಶಯದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಬಾರದು ಹಾಗೂ ತುಂಗಾದಿಂದ ಭದ್ರಾಕ್ಕೆ ನೀರು ತರುವ ಮೇಲ್ಭದ್ರಾ ಸಂಬಂಧಿತ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ಅವರು ತಿಳಿಸಿದರು.
'ಇದು ರಾಜಕೀಯ ಹೋರಾಟವಲ್ಲ, ರೈತರ ಬದುಕಿನ ಹೋರಾಟ. ರೈತರ ಬೆಳೆಗಳು ಉಳಿಯಬೇಕು, ಕೃಷಿ ಕಾರ್ಮಿಕರ ಬದುಕು ಉಳಿಯಬೇಕು, ಶಿವಮೊಗ್ಗದ ಕೃಷಿ ಆರ್ಥಿಕತೆ ಉಳಿಯಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮುಂದುವರಿಸುವುದು ಅನಿವಾರ್ಯ' ಎಂದು ಕೆ.ಟಿ. ಗಂಗಾಧರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಅಚ್ಚುಕಟ್ಟು ಹಿತರಕ್ಷಣಾ ಸಮಿತಿಯ ಮುಖಂಡರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.



0 ಕಾಮೆಂಟ್ಗಳು