Advertisement

ಯಡಿಯೂರಪ್ಪ ಕುಟುಂಬಕ್ಕೆ ಸಚಿವ ಮಧು ಬಂಗಾರಪ್ಪ ಬಹಿರಂಗ ಸವಾಲು-Minister Madhu Bangarappa issues an open challenge to Yediyurappa's family.

SUDDILIVE || SHIVAMOGGA

ಯಡಿಯೂರಪ್ಪ ಕುಟುಂಬಕ್ಕೆ ಸಚಿವ ಮಧು ಬಂಗಾರಪ್ಪ ಬಹಿರಂಗ ಸವಾಲು-Minister Madhu Bangarappa issues an open challenge to Yediyurappa's family.   

Madhu, bangarapa


ಶಿವಮೊಗ್ಗ: ಶಿಕಾರಿಪುರ ರಾಜಕೀಯ ಬೆಳವಣಿಗೆಗಳು, ಕೆರೆ ಒತ್ತುವರಿ ತೆರವು, ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಅವರನ್ನು ಗುರಿಯಾಗಿಸಿಕೊಂಡು ಹಲವು ಆರೋಪಗಳನ್ನು ಮಾಡಿದರು.

ಶಿಕಾರಿಪುರವನ್ನು ತಮ್ಮದೇ ಆಸ್ತಿ ಎಂಬಂತೆ ಭಾವಿಸಿದ್ದವರಿಗೆ ಜನರು ತಿರುಗಿಬೀಳುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಜನರ ಪ್ರತಿಕ್ರಿಯೆಯಿಂದ ಸಂಸದರು ಅಚ್ಚರಿಗೊಳಗಾಗಿದ್ದಾರೆ. ರಾಜಕೀಯವಾಗಿ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಗೌರವ ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ತಾವು ನಡೆದುಕೊಳ್ಳುತ್ತಿರುವುದಾಗಿ ಮಧು ಬಂಗಾರಪ್ಪ ಹೇಳಿದರು.

ಅಡಿಕೆ ಬೆಳೆಗಾರರ ವಿಚಾರದಲ್ಲಿ ಸಂಸದರ ಪಾತ್ರದ ಬಗ್ಗೆ ಪ್ರಶ್ನೆ

ತಾಳಗುಪ್ಪ ಕೆರೆ ಸೇರಿದಂತೆ ವಿವಿಧೆಡೆ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ ಸಚಿವರು, ಬಡವರ ಹೊಟ್ಟೆಯ ಮೇಲೆ ಹೊಡೆಯುವ ರೀತಿಯಲ್ಲಿ ಬೆಳಗಿನ ಜಾವ ಮೂರು ಗಂಟೆಯಿಂದಲೇ ಪೊಲೀಸರನ್ನು ಕರೆದುಕೊಂಡು ಹೋಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆಕ್ಷೇಪಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರೇ ಅಧಿಕಾರದಲ್ಲಿದ್ದಾಗ ಕೆರೆ ಪ್ರದೇಶಗಳಲ್ಲಿ ಅಡಿಕೆ ಮರಗಳನ್ನು ಬೆಳೆಸಲಾಗಿತ್ತು, ಜೋಳವನ್ನೂ ಬೆಳೆಯಲಾಗಿತ್ತು. ಆಗ ಈ ಒತ್ತುವರಿಗಳ ಬಗ್ಗೆ ಏಕೆ ಕ್ರಮ ಕೈಗೊಳ್ಳಲಿಲ್ಲ? ಈಗ ಬಡವರ ಮೇಲೆ ಮಾತ್ರ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದರು.

ಅಡಿಕೆ ಬೆಳೆಗಾರರ ವಿಚಾರದಲ್ಲಿ ಸಂಸದರ ರಕ್ಷಣೆ ಯಾರಿಗೆ ಸಿಕ್ಕಿದೆ ಎಂಬುದನ್ನೂ ಜನರಿಗೆ ತಿಳಿಸಬೇಕಿದೆ. ಬೆಳೆಗಾರರ ಸಮಸ್ಯೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕಿಂತ ಅವರ ಬದುಕಿನ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಯಡಿಯೂರಪ್ಪ ಕುಟುಂಬಕ್ಕೆ ಬಹಿರಂಗ ಸವಾಲು

ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ ಮಧು ಬಂಗಾರಪ್ಪ, ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಜೈಲಿಗೆ ಹೋಗಿದ್ದ ವಿಚಾರದ ಬಗ್ಗೆ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

ಹಳೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಭಾಷಣ ಮಾಡುವುದಕ್ಕಿಂತ ತಮ್ಮ ಕುಟುಂಬದ ರಾಜಕೀಯ ಇತಿಹಾಸದ ಬಗ್ಗೆಯೂ ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಮಾಜಿ ಶಾಸಕ ಹರತಾಳು ಹಾಲಪ್ಪ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಹಿಂದೆ ತಮ್ಮ ಕುಟುಂಬದೊಂದಿಗೆ ಹಾಲಪ್ಪ ಹೊಂದಿದ್ದ ಸಂಬಂಧವನ್ನು ನೆನಪಿಸಿಕೊಂಡರು. ತಮ್ಮ ತಂದೆ ಎಸ್. ಬಂಗಾರಪ್ಪ ಅವರ ರಾಜಕೀಯ ಪ್ರಭಾವ ಮತ್ತು ಸಹಕಾರದಿಂದಲೇ ಹಾಲಪ್ಪ ಅವರಿಗೆ ರಾಜಕೀಯವಾಗಿ ಅವಕಾಶ ಸಿಕ್ಕಿತ್ತು. ಆದರೆ ಇಂದು ಅದೇ ಕುಟುಂಬದ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಂಗಾರಪ್ಪ ಅವರ ಕೊಡುಗೆ ನೆನಪಿಸಿದ ಸಚಿವರು

ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಪಂಪ್‌ಸೆಟ್ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಸಚಿವರು, ಬಂಗಾರಪ್ಪ ಅವರ ಕೊಡುಗೆಗಳನ್ನು ಮರೆಯಬಾರದು ಎಂದರು.

ಬಂಗಾರಪ್ಪ ಅವರ ಹೆಸರು ಮತ್ತು ಫೋಟೋವನ್ನು ರಾಜಕೀಯಕ್ಕೆ ಅನುಕೂಲವಾದಾಗ ಬಳಸಿಕೊಂಡು, ಮತ್ತೊಂದೆಡೆ ಅವರ ವಿರುದ್ಧ ಮಾತನಾಡುವುದು ಯಾವ ರೀತಿಯ ರಾಜಕೀಯ ಎಂದು ಪ್ರಶ್ನಿಸಿದರು.

ಶಾಲೆಗಳಲ್ಲಿ ರಾಜಕೀಯ ಭಾಷಣಕ್ಕೆ ಆಕ್ಷೇಪ

ಶಾಲೆಗಳಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿ ಮಕ್ಕಳನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯಬಾರದು ಎಂದು ಮಧು ಬಂಗಾರಪ್ಪ ಎಚ್ಚರಿಸಿದರು.

ಶಾಲಾ ಕಾರ್ಯಕ್ರಮಗಳಲ್ಲಿ ರಾಜಕೀಯ ಭಾಷಣ ಮಾಡಿರುವ ವಿಚಾರವನ್ನು ಉಲ್ಲೇಖಿಸಿದ ಅವರು, ಶಿಕ್ಷಣ ಇಲಾಖೆಯ ಸಚಿವನಾಗಿ ಇಂತಹ ಬೆಳವಣಿಗೆಗಳನ್ನು ಸುಮ್ಮನೆ ನೋಡಿಕೊಂಡು ಕೂರುವುದಿಲ್ಲ ಎಂದರು.

ಪಠ್ಯಪುಸ್ತಕ ಪರಿಷ್ಕರಣೆಯ ಉದ್ದೇಶ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಹೊರತು ಯಾವುದೇ ರಾಜಕೀಯ ಉದ್ದೇಶವಲ್ಲ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ತಮ್ಮ ಇಲಾಖೆಯ ಅಭಿವೃದ್ಧಿಯ ಲೆಕ್ಕ ಕೇಳಿರುವವರಿಗೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದರು.

ಮೆಗಾನ್ ಆಸ್ಪತ್ರೆಕ್ಕಿಂತ ಏರ್ ಪೋರ್ಟ್ ಅಗತ್ಯವೇ?

ಸಂಸದರು ಅಭಿವೃದ್ಧಿಯ ವಿಚಾರವಾಗಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಜನರಿಗೆ ನೀಡಿದ ಕೊಡುಗೆಗಳು ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಬೇಕು. ಶಿವಮೊಗ್ಗಕ್ಕೆ ಮೆಗಾ ಆಸ್ಪತ್ರೆಯಂತಹ ಆರೋಗ್ಯ ಸೌಲಭ್ಯಗಳ ಅಗತ್ಯವೂ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಒಟ್ಟಾರೆ, ಶಿಕಾರಿಪುರ ರಾಜಕೀಯ ಬೆಳವಣಿಗೆ, ಕೆರೆ ಒತ್ತುವರಿ ತೆರವು, ಅಡಿಕೆ ಬೆಳೆಗಾರರ ಸಮಸ್ಯೆ ಮತ್ತು ಯಡಿಯೂರಪ್ಪ ಕುಟುಂಬದ ರಾಜಕೀಯ ಇತಿಹಾಸವನ್ನು ಮುಂದಿಟ್ಟುಕೊಂಡು ಮಧು ಬಂಗಾರಪ್ಪ ನಡೆಸಿದ ವಾಗ್ದಾಳಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ವಿಮಾನ ಸಂಪರ್ಕ ಕಲ್ಪಿಸುವ ವಿಚಾರದಲ್ಲೂ ಈ ರೀತಿಯ ನೆರವಿನ ಅಗತ್ಯವಿದೆ. ಈ ಹಿಂದೆ ಇಂಡಿಗೋ ಸಂಸ್ಥೆಗೆ BGF ನೆರವು ನೀಡುವ ಪ್ರಸ್ತಾವನೆಗಳಿದ್ದವು. ಇದೀಗ ಮತ್ತೆ ಶಿವಮೊಗ್ಗಕ್ಕೆ ಈ ನೆರವು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು.

ಈ ಸಂಬಂಧ ಕ್ಯಾಬಿನೆಟ್‌ನಲ್ಲಿ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಿಮಾನ ನಿಲ್ದಾಣದ ನಿರ್ವಹಣೆಗೆ ದೊಡ್ಡ ಮೊತ್ತದ ವೆಚ್ಚವಾಗುವುದಿಲ್ಲ. ಸುಮಾರು ಒಂದು ಕೋಟಿ ರೂ. ಆಸುಪಾಸಿನಲ್ಲಿ ನಿರ್ವಹಣಾ ವೆಚ್ಚ ಇರಬಹುದು. ಅದನ್ನು ನಿರ್ವಹಿಸುವುದು ಸಾಧ್ಯ. ಆದರೆ ದೀರ್ಘಕಾಲ ವಿಮಾನ ಸೇವೆಗಳನ್ನು ಮುಂದುವರಿಸಲು ಕೇಂದ್ರ ಸರ್ಕಾರದ ಸಹಕಾರವೂ ಅಗತ್ಯ. ಉಡಾನ್ ಯೋಜನೆಯಂತಹ ನೆರವು ದೊರೆತರೆ ಹೆಚ್ಚಿನ ವಿಮಾನ ಸೇವೆಗಳನ್ನು ಆರಂಭಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪಕ್ಷದ ಶಿಫಾರಸುಗಳಲ್ಲಿ ತಪ್ಪುಗಳಿದ್ದರೆ ಪರಿಶೀಲನೆ

ಪಕ್ಷದ ಶಿಫಾರಸುಗಳ ಮೂಲಕ ವಿವಿಧ ಸೌಲಭ್ಯಗಳನ್ನು ನೀಡುವ ವಿಚಾರದಲ್ಲಿಯೂ ಲೋಪದೋಷಗಳಾಗಬಾರದು. ಸಾವಿರಾರು ಜನರು ಬೇಡಿಕೆ ಸಲ್ಲಿಸಿದಾಗ ಎಲ್ಲರಿಗೂ ಸೌಲಭ್ಯ ನೀಡಲು ಸಾಧ್ಯವಾಗದಿರಬಹುದು. ಆದರೆ ಆಯ್ಕೆಯಾದವರಲ್ಲಿ ಅರ್ಹರಿಗೆ ಮಾತ್ರ ಅವಕಾಶ ಸಿಗಬೇಕು.

ಸೇವೆ ಮಾಡದವರಿಗೆ, ಅರ್ಹತೆ ಇಲ್ಲದವರಿಗೆ ಅಥವಾ ತಪ್ಪು ಮಾಹಿತಿಯ ಆಧಾರದ ಮೇಲೆ ಶಿಫಾರಸು ನೀಡಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ತಪ್ಪುಗಳು ಪಕ್ಷದ ಮಟ್ಟದಲ್ಲಿ ನಡೆದಿದ್ದರೆ ಜಿಲ್ಲಾಧ್ಯಕ್ಷರು, ಹಿರಿಯ ಮುಖಂಡರು ಮತ್ತು ಸಂಬಂಧಪಟ್ಟ ಪದಾಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಿಂದ ಶಿಫಾರಸು ಮಾಡುವಾಗ ಜಿಲ್ಲಾಧ್ಯಕ್ಷರು ಸೇರಿದಂತೆ ಹಿರಿಯರು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಪಕ್ಷದ ಹೆಸರಿಗೆ ಧಕ್ಕೆಯಾಗದಂತೆ ಅರ್ಹರಿಗೆ ಮಾತ್ರ ಅವಕಾಶ ಕಲ್ಪಿಸುವುದು ಮುಖ್ಯ ಎಂದು ತಿಳಿಸಿದರು.

Minister Madhu Bangarappa issues an open challenge to Yediyurappa's family.   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು