Advertisement

ಹಾಲಿನ ದರ ನಿಗದಿ ಅಧಿಕಾರ ಕೆಎಂಎಫ್‌ಗೆ ನೀಡಲು ಸಿಎಂ ಒಪ್ಪಿಗೆ: ಖಾಸಗಿ ಹಾಲು, ಮೊಸರಿನ ಗುಣಮಟ್ಟ ಪರೀಕ್ಷೆಗೆ ಆಗ್ರಹ – ನಂದಿನಿ ಗುಣಮಟ್ಟದ ಬಗ್ಗೆ ಹೆಮ್ಮೆ-CM agrees to give milk price fixing powers to KMF: Demand for quality testing of private milk, curd – Nandini is proud of the quality

SUDDILIVE || SHIVAMOGGA

ಹಾಲಿನ ದರ ನಿಗದಿ ಅಧಿಕಾರ ಕೆಎಂಎಫ್‌ಗೆ ನೀಡಲು ಸಿಎಂ ಒಪ್ಪಿಗೆ: ಖಾಸಗಿ ಹಾಲು, ಮೊಸರಿನ ಗುಣಮಟ್ಟ ಪರೀಕ್ಷೆಗೆ ಆಗ್ರಹ – ನಂದಿನಿ ಗುಣಮಟ್ಟದ ಬಗ್ಗೆ ಹೆಮ್ಮೆ-CM agrees to give milk price fixing powers to KMF: Demand for quality testing of private milk, curd – Nandini is proud of the quality    

Milk, price

ಹಾಲಿನ ಖರೀದಿ ದರ ಹಾಗೂ ಹಾಲಿನ ಉತ್ಪನ್ನಗಳ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಹಾಲು ಒಕ್ಕೂಟಗಳು ಮತ್ತು ಕೆಎಂಎಫ್‌ಗೆ ನೀಡುವ ಸಂಬಂಧ ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಈ ಅಧಿಕಾರ ವಿಕೇಂದ್ರೀಕರಣವಾಗಬೇಕು ಎಂದು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಆರ್ ಎಂ‌. ಮಂಜುನಾಥ ಗೌಡ  ಒತ್ತಾಯಿಸಿದ್ದಾರೆ.

ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಿದ ಮುಖಂಡರು, ನೆರೆಯ ರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ಕರ್ನಾಟಕದ ರೈತರಿಗೆ ಸಿಗುತ್ತಿರುವ ದರ ಇನ್ನೂ ಕಡಿಮೆಯಿದೆ ಎಂದು ಅಭಿಪ್ರಾಯಪಟ್ಟರು.

ಹಾಲಿನ ದರ ಇನ್ನೂ ಹೆಚ್ಚಳವಾಗಬೇಕು

ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳ ಹಾಲು ಉತ್ಪಾದಕರಿಗೆ ಹೋಲಿಸಿದರೆ ಕರ್ನಾಟಕದ ರೈತರಿಗೆ ಈ ಹಿಂದೆ ಲೀಟರ್‌ಗೆ 12ರಿಂದ 16 ರೂ.ವರೆಗೆ ಕಡಿಮೆ ದರ ಸಿಗುತ್ತಿತ್ತು. ಹಾಲು ಉತ್ಪಾದಕರ ನಿರಂತರ ಹೋರಾಟ, ಮುಷ್ಕರ ಹಾಗೂ ಒತ್ತಡದ ಪರಿಣಾಮ ಮುಖ್ಯಮಂತ್ರಿ ರೈತರ ಪರವಾಗಿ ನಿರ್ಧಾರ ಕೈಗೊಂಡು ಹೆಚ್ಚುವರಿ ಪ್ರೋತ್ಸಾಹಧನ ನೀಡುವ ಕ್ರಮ ಕೈಗೊಂಡಿದ್ದಾರೆ.

ಪ್ರಸ್ತುತ ರೈತರಿಗೆ ಲೀಟರ್‌ಗೆ 7 ರೂ. ಹೆಚ್ಚುವರಿ ಪ್ರೋತ್ಸಾಹಧನ ಹಾಗೂ ಒಕ್ಕೂಟಕ್ಕೆ 1 ರೂ. ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೂ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಇನ್ನೂ 6ರಿಂದ 7 ರೂ. ಕಡಿಮೆಯಿದೆ. ದೆಹಲಿಯಲ್ಲಂತೂ ಸುಮಾರು 18 ರೂ. ವ್ಯತ್ಯಾಸವಿದೆ ಎಂದು ಅವರು ವಿವರಿಸಿದರು.

ಮುಂದಿನ ದಿನಗಳಲ್ಲಿ ಹಾಲಿನ ದರ ಹೆಚ್ಚಳದ ಕುರಿತು ಮತ್ತೆ ಒತ್ತಡ ತರಲಾಗುವುದು. ಇತರ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಆಯಾ ಹಾಲು ಒಕ್ಕೂಟಗಳಿಗೆ ಮತ್ತು ಕೆಎಂಎಫ್‌ಗೆ ಇದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಒಕ್ಕೂಟಗಳಿಗೆ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಖಾಸಗಿ ಹಾಲು, ಮೊಸರಿನ ಗುಣಮಟ್ಟ ಪರೀಕ್ಷೆಗೆ ಆಗ್ರಹ


ಖಾಸಗಿ ಕಂಪನಿಗಳಾದ ದೊಡ್ಲ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವಿವಿಧ ಖಾಸಗಿ ಬ್ರಾಂಡ್‌ಗಳ ಹಾಲು ಹಾಗೂ ಮೊಸರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಬೇಕು. ನಂದಿನಿ ಹಾಲು ಮತ್ತು ಮೊಸರಿನ ಗುಣಮಟ್ಟವನ್ನೂ ಪರೀಕ್ಷಿಸಲಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಎಲ್ಲ ಬ್ರಾಂಡ್‌ಗಳ ಉತ್ಪನ್ನಗಳ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಗುಣಮಟ್ಟದ ಲೋಪಗಳು ಕಂಡುಬರಬಾರದು. ಮುಂದಿನ ದಿನಗಳಲ್ಲಿ ಮತ್ತೊಂದು ದುರಂತ ಸಂಭವಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿದ್ದರೆ ಗುಣಮಟ್ಟದಲ್ಲಿ ಲೋಪ ಕಂಡುಬರುವ ಹಾಲಿನ ಉತ್ಪನ್ನಗಳನ್ನು ಬಹಿಷ್ಕರಿಸುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅಮೂಲ್‌ಗಿಂತ ನಂದಿನಿ ಗುಣಮಟ್ಟ ಉತ್ತಮ

ನಂದಿನಿ ಬ್ರಾಂಡ್ ದೇಶದ ಪ್ರಮುಖ ಹಾಲಿನ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅಮೂಲ್ ಸೇರಿದಂತೆ ಇತರ ಬ್ರಾಂಡ್‌ಗಳೊಂದಿಗೆ ಹೋಲಿಸಿದರೂ ನಂದಿನಿ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿದೆ ಎಂಬ ವಿಶ್ವಾಸವಿದೆ. ಹಾಲಿನ ಉತ್ಪಾದನೆ ಮತ್ತು ಮಾರಾಟ ಹೆಚ್ಚಾದರೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ಒಕ್ಕೂಟಕ್ಕೆ ಪ್ರತಿದಿನ ಸುಮಾರು 50 ಸಾವಿರ ಲೀಟರ್ ಹೆಚ್ಚುವರಿ ಹಾಲು ಬರುತ್ತಿದೆ. ಹಾಲಿನ ಮಾರಾಟವೂ ಹೆಚ್ಚಾಗಿದೆ. ಹೀಗಾಗಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಖರೀದಿ ದರವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಹಾಲು ಉತ್ಪಾದನೆ ಅಂದುಕೊಂಡಷ್ಟು ಸುಲಭವಲ್ಲ

ಹಾಲು ಉತ್ಪಾದಕರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ರೈತರು ಹಸುಗಳನ್ನು ಸಾಕುವುದು, ಮೇವು ಒದಗಿಸುವುದು, ಕೊಟ್ಟಿಗೆಯನ್ನು ಸ್ವಚ್ಛವಾಗಿಡುವುದು, ಜಾನುವಾರುಗಳ ಆರೋಗ್ಯ ಕಾಪಾಡುವುದು ಸೇರಿದಂತೆ ಪ್ರತಿದಿನ ಸಾಕಷ್ಟು ಶ್ರಮ ವಹಿಸುತ್ತಾರೆ.

ಒಂದು ಪಿಂಡಿ ಹುಲ್ಲಿಗೆ ಸುಮಾರು 150 ರೂ. ವೆಚ್ಚವಾಗುತ್ತಿದೆ. ಜಾನುವಾರುಗಳ ಆಹಾರ, ಹಿಂಡಿ, ಮೇವು ಸೇರಿದಂತೆ ಎಲ್ಲದರ ಬೆಲೆ ಏರಿಕೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ಮೆಕ್ಕೆಜೋಳದ ಲಭ್ಯತೆಯೂ ಕಡಿಮೆಯಾಗಿದೆ. ಪಂಜಾಬ್ ಮತ್ತು ಹರಿಯಾಣದಿಂದಲೂ ಮೆಕ್ಕೆಜೋಳ ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಲು ಮಾರಾಟದಿಂದ ಬರುವ ಹಣಕ್ಕಿಂತ ಜಾನುವಾರುಗಳ ನಿರ್ವಹಣೆಯ ವೆಚ್ಚವೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರೈತರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಹೈನುಗಾರಿಕೆಯಲ್ಲಿ ಸಿಗುವ ಸಗಣಿ ಗೊಬ್ಬರವೊಂದೇ ರೈತರಿಗೆ ಹೆಚ್ಚುವರಿ ಅನುಕೂಲವಾಗುತ್ತಿದೆ ಎಂಬ ಪರಿಸ್ಥಿತಿಯೂ ಇದೆ ಎಂದು ಹೇಳಿದರು.

ಗ್ರಾಹಕರಿಗೂ ಉತ್ತಮ ಗುಣಮಟ್ಟದ ಹಾಲು ಕೈಗೆಟುಕುವ ದರದಲ್ಲಿ ಸಿಗಬೇಕು. ಅದೇ ಸಮಯದಲ್ಲಿ ಹಾಲು ಉತ್ಪಾದಕರಿಗೂ ನ್ಯಾಯಯುತ ಬೆಲೆ ದೊರೆಯಬೇಕು. ಎರಡೂ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದು ಅಗತ್ಯ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಬೃಹತ್ ಅಭಿನಂದನಾ ಸಮಾವೇಶ

ಹಾಲು ಉತ್ಪಾದಕರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮತ್ತು ಹಾಲು ಒಕ್ಕೂಟಗಳು ಬೆಂಬಲವಾಗಿ ನಿಂತಿರುವುದಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿನ ವಿಭಾಗದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.

ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸಚಿವರು ಮತ್ತು ಪ್ರಮುಖರನ್ನು ಆಹ್ವಾನಿಸಿ, ಹಾಲು ಉತ್ಪಾದಕರ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು. ರಾಜ್ಯದ ಲಕ್ಷಾಂತರ ಹಾಲು ಉತ್ಪಾದಕರ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ಹೈನುಗಾರಿಕೆಯ ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸುವ ಉದ್ದೇಶವೂ ಇದೆ ಎಂದು ಹೇಳಿದರು.

ಒಟ್ಟಿನಲ್ಲಿ ಹಾಲಿನ ದರ ನಿಗದಿ ಅಧಿಕಾರವನ್ನು ಕೆಎಂಎಫ್ ಮತ್ತು ಹಾಲು ಒಕ್ಕೂಟಗಳಿಗೆ ನೀಡುವುದು, ರೈತರಿಗೆ ನ್ಯಾಯಯುತ ಬೆಲೆ ದೊರಕಿಸುವುದು ಹಾಗೂ ಮಾರುಕಟ್ಟೆಯಲ್ಲಿರುವ ಎಲ್ಲ ಬ್ರಾಂಡ್‌ಗಳ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.

CM agrees to give milk price fixing powers to KMF: Demand for quality testing of private milk, curd – Nandini is proud of the quality  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು