SUDDILIVE || SHIVAMOGGA
ಖಾತೆ ಮಾಡಿಕೊಡಲು ಲಂಚದ ಬೇಡಿಕೆ ಆರೋಪ; ತಹಶೀಲ್ದಾರ್ ಕಚೇರಿ ಎದುರು ಅರಳಿ ಮರವೇರಿ ರೈತನ ಭರ್ಜರಿ ಪ್ರತಿಭಟನೆ!Arali Maraveri farmer stages massive protest in front of Tahsildar's office, accused of demanding bribe to open account!
ಶಿವಮೊಗ್ಗ: ವರ್ಷಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ ಜಮೀನಿನ ಖಾತೆ ಮಾಡಿಕೊಡದಿರುವುದು ಹಾಗೂ ಖಾತೆ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತರೊಬ್ಬರು ತಹಶೀಲ್ದಾರ್ ಕಚೇರಿ ಎದುರೇ ಅರಳಿ ಮರವೇರಿ ಭರ್ಜರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ರಾಮೇನಕೊಪ್ಪದ ನಾಗರಾಜ್ ಎಂಬ ರೈತ ಪ್ರತಿಭಟನೆ ನಡೆಸಿದವರು. ಜಿಲ್ಲಾಧಿಕಾರಿಗಳ ಆದೇಶದಂತೆ ರಾಮೇನಕೊಪ್ಪದ ನಾಗರಾಜ್ ಸೇರಿದಂತೆ ಒಟ್ಟು 11 ರೈತರಿಗೆ ಜಮೀನಿನ ಖಾತೆ ಮಾಡಿಕೊಡಬೇಕಿತ್ತು. ಆದರೆ, ಈ ಕೆಲಸವನ್ನು ಮಾಡಿಕೊಡಲು ಅಂದಿನ ತಹಶೀಲ್ದಾರ್ ರಾಜೀವ್ ಅವರು ಲಂಚದ ಬೇಡಿಕೆ ಇಟ್ಟಿದ್ದರು ಎಂದು ನಾಗರಾಜ್ ಆರೋಪಿಸಿದ್ದಾರೆ.
ಖಾತೆ ಮಾಡಿಸಿಕೊಳ್ಳಲು ರೈತರು ಹಲವು ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಈ ನಡುವೆ ಮೂರು ಲಕ್ಷ ರೂಪಾಯಿ ಲಂಚ ನೀಡಿದರೂ ಖಾತೆ ಮಾಡಿಕೊಟ್ಟಿಲ್ಲ ಎಂಬುದು ರೈತರ ಗಂಭೀರ ಆರೋಪವಾಗಿದೆ.
ಇದೀಗ ತಹಶೀಲ್ದಾರ್ ರಾಜೀವ್ ಅವರು ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ನಾಗರಾಜ್ ಸೇರಿದಂತೆ 11 ರೈತರು ತಮ್ಮ ಖಾತೆ ಸಮಸ್ಯೆಗೆ ಪರಿಹಾರ ಪಡೆಯಲು ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದಾರೆ. ಆದರೆ, ವರ್ಷಗಟ್ಟಲೆ ಅಲೆದಾಡಿದರೂ ಕೆಲಸವಾಗದಿರುವುದು ಹಾಗೂ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಅಧಿಕಾರಿ ವರ್ಗಾವಣೆಯಾಗಿ ತೆರಳಿರುವುದರಿಂದ ಆಕ್ರೋಶಗೊಂಡ ನಾಗರಾಜ್ ತಹಶೀಲ್ದಾರ್ ಕಚೇರಿ ಎದುರಿನ ಆವರಣದಲ್ಲಿರುವ ಅರಳಿ ಮರವೇರಿ ಪ್ರತಿಭಟನೆ ಆರಂಭಿಸಿದ್ದಾರೆ.
ರೈತ ಮರ ಹತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮರದ ಮೇಲಿದ್ದ ನಾಗರಾಜ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶವಿದ್ದರೂ 11 ರೈತರ ಖಾತೆ ಸಮಸ್ಯೆ ಬಗೆಹರಿಯದಿರುವುದು ಮತ್ತು ಮೂರು ಲಕ್ಷ ರೂಪಾಯಿ ಲಂಚ ನೀಡಿದರೂ ಕೆಲಸವಾಗಿಲ್ಲ ಎಂಬ ಆರೋಪ ಇದೀಗ ಆಡಳಿತ ವ್ಯವಸ್ಥೆಯ ವಿರುದ್ಧ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಗಾವಣೆಯೊಂದೇ ಸಮಸ್ಯೆಗೆ ಪರಿಹಾರವಲ್ಲ; ರೈತರ ಜಮೀನಿನ ಖಾತೆ ಮಾಡಿಕೊಡುವುದರ ಜೊತೆಗೆ ಲಂಚದ ಆರೋಪದ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.



0 ಕಾಮೆಂಟ್ಗಳು