Advertisement

ರಿಪ್ಪನ್ ಪೇಟೆಯ ಡಾ. ಪ್ರೇಮ್ ಕುಮಾರ್‌ಗೆ ‘ಕರುನಾಡ ರತ್ನ’ ರಾಜ್ಯಮಟ್ಟದ ಪ್ರಶಸ್ತಿ ಗೌರವ-Riponpete Dr. Prem Kumar was honored with the 'Karunada Ratna' state award

 SUDDILIVE || SHIVAMOGGA

ರಿಪ್ಪನ್ ಪೇಟೆಯ ಡಾ. ಪ್ರೇಮ್ ಕುಮಾರ್‌ಗೆ ‘ಕರುನಾಡ ರತ್ನ’ ರಾಜ್ಯಮಟ್ಟದ ಪ್ರಶಸ್ತಿ ಗೌರವ-Riponpete Dr. Prem Kumar was honored with the 'Karunada Ratna' state award   

Repponpete, doctor



ಹೊಸನಗರ: ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಪರ ಸಾಧನೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಕಲ್ಲೂರು ಗ್ರಾಮದ ಡಾ. ಪ್ರೇಮ್ ಕುಮಾರ್ ಕೆ.ಟಿ. ಅವರಿಗೆ ಪ್ರತಿಷ್ಠಿತ ‘ಕರುನಾಡ ರತ್ನ’ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಮೀಡಿಯಾ ಹೌಸ್ ವತಿಯಿಂದ ರಮೇಶ್ ಎಸ್.ಜಿ. ಅವರ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ನುಡಿ-ನಮನ ಹಬ್ಬ’ ಕಾರ್ಯಕ್ರಮದಲ್ಲಿ ಡಾ. ಪ್ರೇಮ್ ಕುಮಾರ್ ಅವರನ್ನು ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವೈದ್ಯಕೀಯ ವೃತ್ತಿಯಲ್ಲಿನ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಗೌರವ ಘೋಷಿಸಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ ಅನಿರುದ್ಧ್, ಹಿರಿಯ ರಂಗಭೂಮಿ ಕಲಾವಿದ ಮುಖ್ಯಮಂತ್ರಿ ಚಂದ್ರು ಹಾಗೂ ನಟ ಡಾ. ಶ್ರೀನಾಥ್ ಅವರೊಂದಿಗೆ ಡಾ. ಪ್ರೇಮ್ ಕುಮಾರ್ ಪ್ರಶಸ್ತಿ ಸ್ವೀಕರಿಸಿರುವುದು ವಿಶೇಷವಾಗಿದೆ. ಪ್ರಶಸ್ತಿ ಲಭಿಸಿರುವುದಕ್ಕೆ ಅವರ ಸ್ನೇಹಿತರು, ಸಂಬಂಧಿಕರು ಹಾಗೂ ಊರಿನವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಕೃಷಿ ಕುಟುಂಬದಿಂದ ವೈದ್ಯಕೀಯ ಕ್ಷೇತ್ರದ ಸಾಧನೆಯವರೆಗೆ

ಡಾ. ಪ್ರೇಮ್ ಕುಮಾರ್ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದವರು. ಮಧ್ಯಮ ವರ್ಗದ ಕೃಷಿ ಕುಟುಂಬದ ತಿಮ್ಮಪ್ಪ ಗೌಡ ಮತ್ತು ಜಯಂತಿ ದಂಪತಿಯ ಪುತ್ರರಾಗಿರುವ ಅವರು, ಗ್ರಾಮೀಣ ಪರಿಸರದಲ್ಲಿ ಬೆಳೆದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಲ್ಲೂರು ಮತ್ತು ಹೆದ್ದಾರಿಪುರ ಶಾಲೆಗಳಲ್ಲಿ ಹಾಗೂ ರಿಪ್ಪನ್ ಪೇಟೆಯಲ್ಲಿ ಪೂರೈಸಿದ್ದಾರೆ. ನಂತರ ಗರ್ತಿಕೆರೆಯ ಅಮೃತ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ಅವರು, ವೈದ್ಯಕೀಯ ಪದವಿಗೆ ಅರ್ಹತೆ ಪಡೆದು ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದರೂ ಉನ್ನತ ವೈದ್ಯಕೀಯ ಶಿಕ್ಷಣ ಪಡೆದು ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.

ಕ್ರಿಟಿಕಲ್ ಕೇರ್ ಮೆಡಿಸಿನ್‌ನಲ್ಲಿ ವಿಶೇಷ ತರಬೇತಿ

ಡಾ. ಪ್ರೇಮ್ ಕುಮಾರ್ ಕೆ.ಟಿ. ಅವರು ಲಂಡನ್, ಯುನೈಟೆಡ್ ಕಿಂಗ್‌ಡಮ್‌ನ VIRTUED EDUVERSITY University ಮೂಲಕ Certificate in Critical Care Medicine ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ ರಕ್ಷಾ ಆಸ್ಪತ್ರೆ (Raksha Hospital) ಮತ್ತು ನ್ಯಾನೋ ಆಸ್ಪತ್ರೆ (Nano Hospital)ಗಳಲ್ಲಿ ಐಸಿಯು ರೆಸಿಡೆಂಟ್ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ, ನಿರಂತರ ಆರೋಗ್ಯ ಮೇಲ್ವಿಚಾರಣೆ, ತುರ್ತು ಚಿಕಿತ್ಸಾ ನಿರ್ವಹಣೆ ಹಾಗೂ ವೈದ್ಯಕೀಯ ತಂಡದೊಂದಿಗೆ ಸಮನ್ವಯ ಸಾಧಿಸುವುದು ಅವರ ವೃತ್ತಿಪರ ಜವಾಬ್ದಾರಿಗಳಾಗಿವೆ.

ರೋಗಿಗಳ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದು, ತುರ್ತು ಸಂದರ್ಭದಲ್ಲಿ ಸಮಯೋಚಿತವಾಗಿ ಚಿಕಿತ್ಸೆ ನೀಡುವುದು ಮತ್ತು ರೋಗಿಗಳ ಕುಟುಂಬದವರಿಗೆ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿ ಒದಗಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಮಾನವೀಯ ಮೌಲ್ಯಗಳಿಗೆ ಆದ್ಯತೆ

ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಮಾನವ ಜೀವಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ಎಂಬ ಮನೋಭಾವ ಹೊಂದಿರುವ ಡಾ. ಪ್ರೇಮ್ ಕುಮಾರ್, ರೋಗಿಗಳ ನೋವು ಮತ್ತು ಅವರ ಕುಟುಂಬದವರ ಆತಂಕಗಳಿಗೆ ಮಾನವೀಯತೆಯಿಂದ ಸ್ಪಂದಿಸುವುದಕ್ಕೆ ಆದ್ಯತೆ ನೀಡುತ್ತಾರೆ.

ವಿಶೇಷವಾಗಿ ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆಯಲ್ಲಿ ತಾಳ್ಮೆ, ಶಿಸ್ತು, ಜವಾಬ್ದಾರಿ ಹಾಗೂ ವೈದ್ಯಕೀಯ ತಂಡದ ಸಮನ್ವಯ ಅತ್ಯಂತ ಮುಖ್ಯ ಎಂಬುದನ್ನು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಬಡತನ ಅಥವಾ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಯಾರೂ ಆರೋಗ್ಯ ಸೇವೆಯಿಂದ ವಂಚಿತರಾಗಬಾರದು ಎಂಬ ಆಶಯವನ್ನೂ ಅವರು ಹೊಂದಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದು, ಪೋಷಕರ ಕನಸನ್ನು ಸಾಕಾರಗೊಳಿಸಿ, ಬೆಂಗಳೂರಿನ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ಪ್ರೇಮ್ ಕುಮಾರ್ ಅವರಿಗೆ ರಾಜ್ಯಮಟ್ಟದ ‘ಕರುನಾಡ ರತ್ನ’ ಪ್ರಶಸ್ತಿ ಲಭಿಸಿರುವುದು ಕಲ್ಲೂರು ಗ್ರಾಮ ಹಾಗೂ ರಿಪ್ಪನ್ ಪೇಟೆ ಭಾಗದ ಜನರಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ.

Riponpete Dr. Prem Kumar was honored with the 'Karunada Ratna' state award   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು