Advertisement

ಶಿವಮೊಗ್ಗದಲ್ಲಿ 7 ಕಡೆ ಗೋಪೂಜೆ; ಕಟುಕನ ಮನವೊಲಿಸಿ ಗೋ ಸಂರಕ್ಷಿಸುವ ಅಗತ್ಯವಿದೆ ಎಂದ ಶಾಸಕ ಚೆನ್ನಿ- Cow worship at 7 places in Shivamogga; MLA Chenni says there is a need to convince the butcher and protect the cow

 SUDDILIVE || SHIVAMOGGA

ಶಿವಮೊಗ್ಗದಲ್ಲಿ 7 ಕಡೆ ಗೋಪೂಜೆ; ಕಟುಕನ ಮನವೊಲಿಸಿ ಗೋ ಸಂರಕ್ಷಿಸುವ ಅಗತ್ಯವಿದೆ ಎಂದ ಶಾಸಕ ಚೆನ್ನಿ-  Cow worship at 7 places in Shivamogga; MLA Chenni says there is a need to convince the butcher and protect the cow 
Gopuje, deepawali


ಶಿವಮೊಗ್ಗ:
ದೀಪಾವಳಿ ಹಬ್ಬದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಶಿವಮೊಗ್ಗ ನಗರದ ಏಳು ಕಡೆ ಗೋಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋಟೆ ಆಂಜನೇಯ ದೇವಸ್ಥಾನ, ರವೀಂದ್ರನಗರ ಗಣಪತಿ ದೇವಸ್ಥಾನ, ಬೊಮ್ಮನಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿಸಲಾಯಿತು.

ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ಅವರ ಪತ್ನಿ ಗೋಪೂಜೆ ನೆರವೇರಿಸಿದರು. ಗೋವುಗಳ ಕಾಲಿಗೆ ನಮಸ್ಕರಿಸಿ ಆರತಿ ಬೆಳಗುವ ಮೂಲಕ ಗೋಮಾತೆಯ ಮಹತ್ವವನ್ನು ಸ್ಮರಿಸಲಾಯಿತು.

ಗೋ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಗೋಪೂಜೆ ಬಳಿಕ ಮಾತನಾಡಿದ ಶಾಸಕ ಎಸ್.ಎನ್. ಚೆನ್ನಬಸಪ್ಪ, ದೀಪಾವಳಿ ಹಬ್ಬವು ಹಿಂದೂ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮೂರು ದಿನಗಳ ಕಾಲ ಆಚರಿಸುವ ದೀಪಾವಳಿಯಲ್ಲಿ ನೀರು ತುಂಬುವ ಹಬ್ಬ, ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ ಹಾಗೂ ಗೋಪೂಜೆಯಂತಹ ಆಚರಣೆಗಳು ನಮ್ಮ ಸಂಸ್ಕೃತಿಯ ಭಾಗವಾಗಿವೆ ಎಂದರು.

ನಮ್ಮ ಪರಂಪರೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನ ನೀಡಲಾಗಿದೆ. ಗೋವುಗಳನ್ನು ಉಳಿಸುವುದು, ಅವುಗಳ ಸಂತತಿಯನ್ನು ಬೆಳೆಸುವುದು ಹಾಗೂ ಗೋ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ಗೋ ಸಂರಕ್ಷಣೆ ಎಂದರೆ ರಾಷ್ಟ್ರದ ಸಂಪತ್ತನ್ನು ಸಂರಕ್ಷಿಸುವ ಕಾರ್ಯವೂ ಆಗಿದೆ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ ಗೋಪೂಜೆ ಕಾರ್ಯಕ್ರಮ ಯಶಸ್ವಿಯಾಗಿದೆ. ಶಿವಮೊಗ್ಗ ನಗರದಲ್ಲಿ ಏಳು ಕಡೆ ಗೋಪೂಜೆ ನಡೆದಿದ್ದು, ಅನೇಕರು ತಮ್ಮ ಮನೆಗಳಲ್ಲಿಯೂ ಗೋಮಾತೆಯನ್ನು ಪೂಜಿಸುತ್ತಿದ್ದಾರೆ. ಗೋವುಗಳ ಬಗ್ಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಗೌರವ ಹಾಗೂ ಸಂರಕ್ಷಣೆಯ ಭಾವನೆ ಮೂಡಬೇಕು ಎಂದು ತಿಳಿಸಿದರು.

ಗೋಶಾಲೆಗಳಲ್ಲಿ ನೂರಾರು ಗೋವುಗಳ ರಕ್ಷಣೆ
Gopooja, deepawali

ಇತ್ತೀಚೆಗೆ ತಾವು ಎರಡು ಗೋಶಾಲೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೂರಾರು ಗೋವುಗಳನ್ನು ಕಂಡಿದ್ದಾಗಿ ಶಾಸಕ ಚೆನ್ನಬಸಪ್ಪ ತಿಳಿಸಿದರು.

ಗೋಶಾಲೆಗಳಲ್ಲಿ ಸಾಕಲು ಸಾಧ್ಯವಾಗದೆ ಬಿಟ್ಟುಹೋದ ಗೋವುಗಳಿರುವುದನ್ನು ಗಮನಿಸಿದ್ದೇವೆ. ಇತ್ತೀಚೆಗೆ ನಡೆದ ಹಬ್ಬದ ಸಂದರ್ಭದಲ್ಲಿ ಹಿಂದೂ ಯುವಕರು ಗೋವುಗಳನ್ನು ರಕ್ಷಿಸಿ, ಪೊಲೀಸ್ ಇಲಾಖೆಯ ಮೂಲಕ ಗೋಶಾಲೆಗಳಿಗೆ ತಂದು ಒಪ್ಪಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಘಟನೆ ತಮಗೆ ನೋವುಂಟುಮಾಡಿದೆ ಎಂದು ಹೇಳಿದರು.

ಗೋವುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ತಂದು ಬಿಡುವ ಮೂಲಕ ಯುವಕರು ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಗೋ ಸಂರಕ್ಷಣೆಯ ಜೊತೆಗೆ ಗೋವುಗಳ ಹಂತಕರಿಗೆ ಎಚ್ಚರಿಕೆ ನೀಡುವ ಸಂದೇಶವೂ ಈ ಕಾರ್ಯದಲ್ಲಿ ಅಡಗಿದೆ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಗೋಶಾಲೆಗಳಿದ್ದು, ಇನ್ನೂ ಹೆಚ್ಚಿನ ಗೋವುಗಳನ್ನು ರಕ್ಷಿಸಿ ಅಲ್ಲಿಗೆ ತಂದು ಬಿಡಲಾಗುತ್ತಿದೆ. ಗೋವುಗಳನ್ನು ರಕ್ಷಿಸಿದ ಹಿಂದೂ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಗೋ ಸಂರಕ್ಷಣೆಗೆ ಕಾನೂನು ಪರಿಣಾಮಕಾರಿ ಜಾರಿಯಾಗಲಿ

ಗೋ ಸಂರಕ್ಷಣೆಗೆ ರಾಜ್ಯದಲ್ಲಿ ಕಾನೂನು ಇದ್ದು, ವಿಧಾನಸಭೆಯಲ್ಲಿ ವಿಶೇಷ ಕಾನೂನನ್ನು ಅಂಗೀಕರಿಸಲಾಗಿದೆ. ಅದರ ಪರಿಣಾಮಕಾರಿ ಅನುಷ್ಠಾನ ಮಾಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಜೊತೆಗೆ ಹಿಂದೂ ಸಮಾಜವೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಗೋ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಚೆನ್ನಬಸಪ್ಪ ಹೇಳಿದರು.

ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ಹಿಂದೂ ಯುವಕರು ತೊಡಗಿಸಿಕೊಂಡಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆಗಳಿವೆ. ಆದರೆ ಗೋ ಸಂರಕ್ಷಣೆಗೆ ಕೈಜೋಡಿಸುವ ಯುವಕರ ಕಾರ್ಯವನ್ನು ಸಮಾಜ ಗುರುತಿಸಬೇಕು ಎಂದು ತಿಳಿಸಿದರು.

Gopuja, deepawali

ಕಾಂಗ್ರೆಸ್ ವಿರುದ್ಧ ಶಾಸಕ ಚೆನ್ನಬಸಪ್ಪ ವಾಗ್ದಾಳಿ

ಗೋ ಸಂರಕ್ಷಣೆಯ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಶಾಸಕ ಚೆನ್ನಬಸಪ್ಪ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಗಮನಿಸಿದರೆ ಗೋವಿನ ಹತ್ಯೆಗೆ ಅವಕಾಶ ನೀಡಿದ ಉದಾಹರಣೆಗಳಿವೆ ಎಂದು ಆರೋಪಿಸಿದ ಅವರು, ಗೋ ಸಂರಕ್ಷಣೆಗೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯನಿರ್ವಹಿಸುತ್ತಿವೆ ಎಂದರು.

ಗೋಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಯಾರು ಎಂಬ ವಿಚಾರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಬಿಜೆಪಿ ಮುಖಂಡರು ಚರ್ಚಿಸಲಿ ಎಂದು ಸವಾಲು ಹಾಕಿದರು.

ಗೋಮೂತ್ರದ ವಿಚಾರವಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಯೋಗೀಶ್ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋಮೂತ್ರದ ಬಗ್ಗೆ ಮಾತನಾಡುವವರು ಅದರ ಮಹತ್ವವನ್ನು ಅರಿತುಕೊಳ್ಳಬೇಕು. ಗೋಮೂತ್ರ ಹಾಗೂ ಗೋಮಯವನ್ನು ಹಿಂದೂ ಸಂಪ್ರದಾಯದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಹಿಂದಿನ ಆಡಳಿತದಲ್ಲಿ ಗೋವಿನ ಹತ್ಯೆಗೆ ಕಾರಣವಾಗಿರುವ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ ಶಾಸಕ ಚೆನ್ನಬಸಪ್ಪ, ಗೋ ಸಂರಕ್ಷಣೆಯ ವಿಚಾರದಲ್ಲಿ ರಾಜಕೀಯ ಮಾಡದೆ ಗೋವುಗಳನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕೊನೆಯಲ್ಲಿ ಇಡೀ ಹಿಂದೂ ಸಮಾಜಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ ಶಾಸಕ ಚೆನ್ನಬಸಪ್ಪ, ಗೋಮಾತೆಯ ರಕ್ಷಣೆ ಹಾಗೂ ಗೋ ಸಂರಕ್ಷಣೆಯ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.

ಈ ವೇಳೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್, ವಿಬಾಗೀಯ ಸಹಕಾರ್ಯದರ್ಶಿ ರಾಜೇಶ್ ಗೌಡ, ಜಿಲ್ಲಾ ಸಹ ಸಂಯೋಜಕ್ ಹಾಗೂ ವಕೀಲರಾದ ಸುರೇಶ್ ಬಾಬು, ಅಂಕುಶ್ ಮೊದಲಾದವರು ಭಾಗಿಯಾಗಿದ್ದರು. 

Cow worship at 7 places in Shivamogga; MLA Chenni says there is a need to convince the butcher and protect the cow 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು