SUDDILIVE || SHIVAMOGGA
ಆತ್ಮಹತ್ಯೆ ಪ್ರಕರಣದಲ್ಲಿ ಮೂಲ ಬಾರ್ ಮಾಲೀಕ ಮತ್ತು ಕ್ಯಾಶಿಯರ್ ವಿರುದ್ಧ FIR-FIR against Moola bar owner and cashier in suicide case
ಶಿವಮೊಗ್ಗ: ಬಾರ್‌ನಲ್ಲಿ ಮಾಡಿದ ಸಾಲದ ಹಣ ವಸೂಲಿ ವಿಚಾರವಾಗಿ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಅವಮಾನಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಬಂಧ ಮೂಲ ಬಾರ್ ಮಾಲೀಕ ಹಾಗೂ ಕ್ಯಾಶಿಯರ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿರುವ ಮೂಲ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸಾಲದ ವಿಚಾರವಾಗಿ ಗಲಾಟೆ ನಡೆದಿದ್ದು, ಹಲ್ಲೆ ಮತ್ತು ಅವಮಾನದಿಂದ ಮನನೊಂದಿದ್ದ ಶರತ್ ಬಾಬು (41) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಲೀಲಾವತಿ ಪೊಲೀಸರಿಗೆ ದೂರು ನೀಡಿದ್ದಾರೆ.
₹35 ಸಾವಿರ ಸಾಲ ಮಾಡಿರುವುದಾಗಿ ಪತ್ನಿಗೆ ಕರೆ
ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಶರತ್ ಬಾಬು ಅವರು ಜೈಲ್ ರಸ್ತೆಯಲ್ಲಿರುವ ಮೂಲ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಆಗಾಗ್ಗೆ ತೆರಳುತ್ತಿದ್ದರು. ನವೆಂಬರ್ 11ರ ರಾತ್ರಿ ಸುಮಾರು 9 ಗಂಟೆಗೆ ಬಾರ್‌ನ ಕ್ಯಾಶಿಯರ್ ಲಿಂಗರಾಜು, ಶರತ್ ಬಾಬು ಅವರ ಪತ್ನಿ ಲೀಲಾವತಿ ಅವರಿಗೆ ದೂರವಾಣಿ ಕರೆ ಮಾಡಿದ್ದಾನೆ.
ನಿಮ್ಮ ಪತಿ ನಮ್ಮ ವೈನ್ ಸ್ಟೋರ್‌ನಲ್ಲಿ ₹35 ಸಾವಿರ ಸಾಲ ಮಾಡಿ ಮದ್ಯ ಸೇವಿಸಿದ್ದು, ಹಣ ಪಾವತಿಸದ ಕಾರಣ ಅವರ ಬೈಕ್ ಅನ್ನು (KA 14 HE 1392) ಇಟ್ಟುಕೊಂಡಿದ್ದೇವೆ. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ ಕಳುಹಿಸಿರುವುದಾಗಿ ತಿಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
₹8-10 ಸಾವಿರ ಮಾತ್ರ ಸಾಲ ಮಾಡಿದ್ದೇನೆ ಎಂದಿದ್ದ ಶರತ್
ವಿಷಯ ತಿಳಿದ ಬಳಿಕ ಮಕ್ಕಳನ್ನು ಕಳುಹಿಸಿ ಪತ್ನಿ ಶರತ್ ಬಾಬು ಅವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಮನೆಗೆ ಬಂದಾಗ ಅವರ ಹಣೆಯ ಬಳಿ ರಕ್ತಗಾಯವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಶರತ್ ಬಾಬು ಅವರು, ತಾವು ಕೇವಲ ₹8 ಸಾವಿರದಿಂದ ₹10 ಸಾವಿರದವರೆಗೆ ಮಾತ್ರ ಸಾಲ ಮಾಡಿರುವುದಾಗಿ ಪತ್ನಿಗೆ ತಿಳಿಸಿದ್ದಾರೆ. ಆದರೆ ಬಾರ್ ಮಾಲೀಕ ಹಾಗೂ ಕ್ಯಾಶಿಯರ್ ಲಿಂಗರಾಜು ತಮ್ಮ ಮೇಲೆ ಹಲ್ಲೆ ನಡೆಸಿ ಬೈಕ್ ಇಟ್ಟುಕೊಂಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗದಿದ್ದರೆ ಎಲ್ಲಿಯಾದರೂ ಹೋಗಿ ಸಾಯಿ ಎಂದು ಹೇಳಿ ಅವಮಾನಿಸಿದ್ದಾರೆ ಎಂದು ಪತ್ನಿಯ ಬಳಿ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.
ಮನೆಯ ಕೊನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬಾರ್‌ನವರ ವರ್ತನೆ, ಹಲ್ಲೆ ಮತ್ತು ಅವಮಾನದಿಂದ ಶರತ್ ಬಾಬು ತೀವ್ರವಾಗಿ ಮನನೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನವೆಂಬರ್ 12ರಂದು ಸಂಜೆ 7.30ರಿಂದ ರಾತ್ರಿ 8.05ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಕೊನೆಯ ಕೋಣೆಯಲ್ಲಿ ಕಬ್ಬಿಣದ ಪಕಾಸಿಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಾರ್ ಮಾಲೀಕ, ಕ್ಯಾಶಿಯರ್ ವಿರುದ್ಧ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಲೀಲಾವತಿ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ ಬಾರ್‌ನ ಮಾಲೀಕ ಹಾಗೂ ಕ್ಯಾಶಿಯರ್ ಲಿಂಗರಾಜು ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 352, 351(2), 115(2), 108 ಹಾಗೂ 3(5) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಧ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಶಿಯರ್ ಲಿಂಗರಾಜು ರವರ ಬಂಧನವಾಗಿದ್ದು ನ್ಯಾಯಾಂಗ ಬಂಧನವಾಗಿದೆ. ಮೂಲ ಬಾರ್ ಮಾಲೀಕರು ಪರಾರಿಯಾಗಿದ್ದಾರೆ.
FIR against Moola bar owner and cashier in suicide case



0 ಕಾಮೆಂಟ್‌ಗಳು