SUDDILIVE || SHIVAMOGGA
ಶಿವಮೊಗ್ಗ: ಹಣ ನೀಡದಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ; ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ-Shivamogga: Man Gets 7 Years of Rigorous Imprisonment for Stabbing Man to Death After Money Dispute
ಶಿವಮೊಗ್ಗ: ಹಣ ನೀಡಲು ನಿರಾಕರಿಸಿದ ವ್ಯಕ್ತಿಯೊಂದಿಗೆ ಜಗಳವಾಡಿ, ಎರಡು ಚಾಕುಗಳಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದ ಆರೋಪಿಗೆ ಶಿವಮೊಗ್ಗದ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
2025ರ ಏಪ್ರಿಲ್ 27ರಂದು ರಾತ್ರಿ ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿರುವ ಸಿಎಂ ಬಾರ್ ಸಮೀಪ ಈ ಕೊಲೆ ಪ್ರಕರಣ ನಡೆದಿತ್ತು.
ಅಂದು ಶಶಿನಾಯ್ಕ್ ಮತ್ತು ನಾಗೇಶ್ ನಾಯ್ಕ್ ಅವರು ಬಿ.ಎಚ್. ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿ ಫೈರೋಜ್ ಖಾನ್ (39) ಎಂಬಾತ ಹಣ ನೀಡುವಂತೆ ಕೇಳಿದ್ದಾನೆ. ತಮ್ಮ ಬಳಿ ಹಣವಿಲ್ಲ ಎಂದು ಶಶಿನಾಯ್ಕ್ ತಿಳಿಸಿದಾಗ ಆರೋಪಿ ಅವರೊಂದಿಗೆ ಜಗಳವಾಡಿದ್ದಾನೆ.
ನಂತರ ತನ್ನ ಬ್ಯಾಗಿನಲ್ಲಿದ್ದ ಎರಡು ಚಾಕುಗಳನ್ನು ತೆಗೆದು ಶಶಿನಾಯ್ಕ್ ಅವರ ಕುತ್ತಿಗೆ, ಭುಜ, ಹೊಟ್ಟೆ ಹಾಗೂ ಬೆನ್ನಿನ ಭಾಗಗಳಿಗೆ ಇರಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 127/2025ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 352, 351(2), 109(1), 103(1) ಹಾಗೂ 238ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪತ್ರ ಸಲ್ಲಿಕೆ
ಪ್ರಕರಣದ ಅಂದಿನ ತನಿಖಾಧಿಕಾರಿಗಳಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ರವಿ ಪಾಟೀಲ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು. ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು 2026ರ ನವೆಂಬರ್ 19ರಂದು ತೀರ್ಪು ಪ್ರಕಟಿಸಿದ್ದಾರೆ.
ಆರೋಪಿ ಫೈರೋಜ್ ಖಾನ್ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
Shivamogga: Man Gets 7 Years of Rigorous Imprisonment for Stabbing Man to Death After Money Dispute



0 ಕಾಮೆಂಟ್ಗಳು