SUDDILIVE || SHIVAMOGGA
ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ, ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನೀಡಿ; ಸಚಿವ ಯು.ಟಿ. ಖಾದರ್ಗೆ ಶಾಸಕ ಚೆನ್ನಿ ಆಗ್ರಹ- MLA Channabasappa urges Health Minister U.T. Khader to address mismanagement at Meggan Hospital and provide a separate district hospital for Shivamogga
ಇಂದು ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ನಡೆದ ಇಲಾಖಾ ಪ್ರಗತಿಪರಿಶೀಲನ ಸಭೆಯಲ್ಲಿ ಶಾಸಕ ಚೆನ್ನಬಸಪ್ಪ ಮತ್ತೆ ಜಿಲ್ಲಾ ಆಸ್ಪತ್ರೆ ಕೊಡಿ ಎಂದಿದ್ದಾರೆ. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಕಾಲೇಜಾಗಿ ಪರಿವರ್ತನೆಯಾದ ಬಳಿಕ ಬಡ ಮತ್ತು ಸಾಮಾನ್ಯ ಜನರಿಗೆ ನಿರೀಕ್ಷಿತ ಮಟ್ಟದ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಅಗತ್ಯ ಸೇವೆಗಳ ಕೊರತೆ ಇರುವುದರಿಂದ ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಶಾಸಕ ಎಸ್.ಎನ್. ಚೆನ್ನಿ ಬಸಪ್ಪ ಅವರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆಯ ಕಾರ್ಯನಿರ್ವಹಣೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ವೈದ್ಯರ ನೇಮಕಾತಿ, ಜಿಲ್ಲಾ ಆಸ್ಪತ್ರೆಯ ಅಗತ್ಯ ಹಾಗೂ ರೋಗಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಶಾಸಕ ಚೆನ್ನಿ ಬಸಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಗಮನ ಸೆಳೆದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡವರಿಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ: ಶಾಸಕ ಚೆನ್ನಿ
ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಕಾಲೇಜಾಗಿ ಪರಿವರ್ತನೆಯಾದ ನಂತರ ಸಾರ್ವಜನಿಕರಿಗೆ, ಅದರಲ್ಲೂ ಬಡವರಿಗೆ ಸಿಗಬೇಕಾದ ವೈದ್ಯಕೀಯ ಸೌಲಭ್ಯಗಳು ಕಡಿಮೆಯಾಗಿವೆ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಈ ಹಿಂದೆಯೂ ಸಾಕಷ್ಟು ಚರ್ಚೆ ನಡೆಸಿದ್ದೇವೆ ಎಂದು ಶಾಸಕ ಚೆನ್ನಿ ಬಸಪ್ಪ ಹೇಳಿದರು.
ಆಸ್ಪತ್ರೆಯಿಂದ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡುವ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ಈಗಾಗಲೇ ಅಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಬೇರೆಡೆಗೆ ಕಳುಹಿಸಿದರೆ ವೈದ್ಯರು ರಾಜೀನಾಮೆ ನೀಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ತಿಳಿಸಿದರು.
ಹಿಂದೆ ತಾವು ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡ ಈ ವಿಷಯವನ್ನು ಸಚಿವರ ಗಮನಕ್ಕೆ ತಂದಿದ್ದೆ. ಮೆಗ್ಗಾನ್ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು ಹಾಗೂ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಚರ್ಚೆ ನಡೆಸಲಾಗಿತ್ತು. ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಬಡವರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗಬೇಕಾದ ಸೌಲಭ್ಯಗಳೂ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳಿವೆ ಎಂದರು.
ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅತ್ಯಗತ್ಯವಾಗಿದೆ. ಇದು ಯಾವುದೇ ಪಕ್ಷದ ವಿಚಾರವಲ್ಲ. ಎಲ್ಲರೂ ಪಕ್ಷಭೇದ ಮರೆತು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಈ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಬೇಕು. ವೈದ್ಯಕೀಯ ಕಾಲೇಜು ಇರುವುದರಿಂದಲೇ ಜನರಿಗೆ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಜಿಲ್ಲಾ ಆಸ್ಪತ್ರೆಯ ಮೇಲುಸ್ತುವಾರಿ ಸಮಿತಿ ರಚನೆಯಾಗಿದೆಯೇ?
ಮೆಗ್ಗಾನ್ ಆಸ್ಪತ್ರೆಯ ಆಡಳಿತ ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಶೀಲಿಸಲು ವಿಶೇಷ ಆಡಳಿತ ಮಂಡಳಿ ಅಥವಾ ಮೇಲುಸ್ತುವಾರಿ ಸಮಿತಿ ರಚಿಸುವಂತೆ ಈ ಹಿಂದೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಸಚಿವರು ಪತ್ರವನ್ನೂ ಕಳುಹಿಸಿದ್ದರು. ಆದರೆ ಈವರೆಗೂ ಅಂತಹ ಸಮಿತಿ ರಚನೆಯಾಗಿದೆಯೇ ಎಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ಶಾಸಕ ಚೆನ್ನಿ ಪ್ರಶ್ನಿಸಿದರು.
ಆಸ್ಪತ್ರೆಯಲ್ಲಿ ಗವರ್ನಿಂಗ್ ಕೌನ್ಸಿಲ್ ಇದೆ ಎಂದು ಅಧಿಕಾರಿಗಳು ತಿಳಿಸಿದಾಗ, ಅದು ಪ್ರತ್ಯೇಕ ಜಿಲ್ಲಾ ಆಸ್ಪತ್ರೆಯ ಕುಂದುಕೊರತೆಗಳ ನಿರ್ವಹಣೆ ಹಾಗೂ ಸಾರ್ವಜನಿಕರ ದೂರುಗಳನ್ನು ಪರಿಶೀಲಿಸುವ ಸಮಿತಿಗೆ ಪರ್ಯಾಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವ ಆರೋಗ್ಯ ರಕ್ಷಣಾ ಸಮಿತಿಯಂತಹ ವ್ಯವಸ್ಥೆ ಇರಬೇಕು. ಅಂತಹ ವ್ಯವಸ್ಥೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಲ್ಲದಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಿತಿ ರಚನೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಒತ್ತಾಯಿಸಿದರು.
ಈ ಕುರಿತು ಸಚಿವ ಯು.ಟಿ. ಖಾದರ್ ಅವರು ಆಸ್ಪತ್ರೆಯ ಅಧೀಕ್ಷಕ ಡಾ. ತಿಮ್ಮಪ್ಪ ಅವರಿಗೆ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಮತ್ತು ಸಮಿತಿ ರಚನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪರಿಶೀಲಿಸುವಂತೆ ತಿಳಿಸಿದರು.
ವೈದ್ಯರು ಪೂರ್ಣಾವಧಿ ಕರ್ತವ್ಯ ನಿರ್ವಹಿಸಬೇಕು; ಎಸ್ಒಪಿ ರೂಪಿಸಲು ಸೂಚನೆ
ಸಭೆಯಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರು ಪೂರ್ಣಾವಧಿ ಕರ್ತವ್ಯ ನಿರ್ವಹಿಸುವುದರ ಬಗ್ಗೆಯೂ ಸಚಿವರು ಗಮನ ಹರಿಸಿದರು. ಯಾವ ವೈದ್ಯರಿಗೆ ಯಾವ ಜವಾಬ್ದಾರಿ ನೀಡಲಾಗಿದೆಯೋ ಅವರು ಪೂರ್ಣಾವಧಿ ಅಲ್ಲಿಯೇ ಲಭ್ಯವಿರಬೇಕು. ಶಿಫ್ಟ್ಗಳ ಹೆಸರಿನಲ್ಲಿ ಒಬ್ಬೊಬ್ಬರು ಬಂದು ಹೋಗುವ ಅಥವಾ ನಿಗದಿತ ಕರ್ತವ್ಯ ನಿರ್ವಹಿಸದೆ ಇರುವ ಪರಿಸ್ಥಿತಿ ಇರಬಾರದು. ವೈದ್ಯರ ಹಾಜರಾತಿ ಮತ್ತು ಕರ್ತವ್ಯ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದು ಸೂಚಿಸಿದರು.
ವೈದ್ಯಕೀಯ ವಿಶ್ಲೇಷಣೆ ಹಾಗೂ ಆಸ್ಪತ್ರೆಯ ಕಾರ್ಯನಿರ್ವಹಣೆಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಸಂಬಂಧ ಸ್ಪಷ್ಟವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಬೇಕು. ಆಪರೇಷನ್ ಥಿಯೇಟರ್ನ ದಾಖಲೆಗಳನ್ನೂ ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.
ಮೆಗ್ಗಾನ್ ಆಸ್ಪತ್ರೆಯ ಒತ್ತಡದ ಬಗ್ಗೆ ಡಿ.ಎಸ್. ಅರುಣ್ ಪ್ರಸ್ತಾಪ
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಅತ್ಯಧಿಕವಾಗಿದ್ದು, ಆಸ್ಪತ್ರೆಯ ಮೇಲೆ ಸಾಕಷ್ಟು ಒತ್ತಡವಿದೆ ಎಂದು ಹೇಳಿದರು.
ತಾವು ಪ್ರತಿ ವಾರ ಒಂದು ದಿನ ಆಸ್ಪತ್ರೆಗೆ ಭೇಟಿ ನೀಡುತ್ತೇವೆ. ವಿವಿಧ ಏಳು ಸಂಸ್ಥೆಗಳ ಸಹಯೋಗದಲ್ಲಿ ಪ್ರತಿದಿನ ಅನ್ನದಾಸೋಹ ನಡೆಸಲಾಗುತ್ತಿದೆ. ಪ್ರತಿದಿನ ಸುಮಾರು 300ರಿಂದ 400 ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಆಹಾರ ಒದಗಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರೋಗಿಗಳನ್ನು ಭೇಟಿ ಮಾಡಿ ಮಾತನಾಡಿದಾಗ ಆಸ್ಪತ್ರೆಯಲ್ಲಿ ಸಾಕಷ್ಟು ಒತ್ತಡವಿರುವುದು ಕಂಡುಬರುತ್ತದೆ ಎಂದರು.
ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 1,000ರಿಂದ 2,000ಕ್ಕೂ ಅಧಿಕ ಹೊರರೋಗಿಗಳು ಬರುತ್ತಿದ್ದು, ಒಳರೋಗಿಗಳ ದಾಖಲಾತಿಯೂ ಸುಮಾರು 200ರಷ್ಟಿರುತ್ತದೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯಕೀಯ ಉಪಕರಣಗಳಿದ್ದರೂ ಅವುಗಳನ್ನು ನಿರ್ವಹಿಸಲು ಅಗತ್ಯವಾದ ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ಆರ್ಥೋಪೆಡಿಕ್ಸ್ ಮತ್ತು ಪೀಡಿಯಾಟ್ರಿಕ್ಸ್ ವಿಭಾಗಗಳಲ್ಲಿ ತಲಾ ಮೂರು ಘಟಕಗಳಿದ್ದು, ಚಿಕ್ಕಮಗಳೂರು ಮತ್ತು ಕಾರವಾರ ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಪ್ರತಿ ಘಟಕದಲ್ಲಿಯೂ ಸುಮಾರು ಹತ್ತು ಮಂದಿ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಕೆಲವು ಗಂಭೀರ ಪ್ರಕರಣಗಳಲ್ಲಿ, ವಿಶೇಷವಾಗಿ ತಲೆಗೆ ತೀವ್ರ ಗಾಯಗಳಾದಾಗ ಅಥವಾ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಾಗ ಮಾತ್ರ ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಏರ್ಲಿಫ್ಟ್ ವ್ಯವಸ್ಥೆಯನ್ನೂ ಬಳಸಿಕೊಳ್ಳಲಾಗುತ್ತದೆ. ಇನ್ನು ಕೆಲವರು ಸ್ವಯಂಪ್ರೇರಣೆಯಿಂದ ಬೇರೆ ಆಸ್ಪತ್ರೆಗಳಿಗೆ ತೆರಳುತ್ತಾರೆ ಎಂದರು.
80 ಸಾವಿರ ಇಎಸ್ಐ ಕಾರ್ಡ್ದಾರರಿಗೆ ಮೆಗ್ಗಾನ್ನಲ್ಲಿ ಪ್ರತ್ಯೇಕ ಕೌಂಟರ್ ಅಗತ್ಯ
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಇಎಸ್ಐ ಕಾರ್ಡ್ದಾರರಿದ್ದಾರೆ. ಇಎಸ್ಐ ಯೋಜನೆಯಡಿ ಚಿಕಿತ್ಸೆ ಪಡೆಯುವವರಿಗೆ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುವುದನ್ನು ಕಡಿಮೆ ಮಾಡಬೇಕು ಎಂಬ ನಿರ್ದೇಶನವಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಆದರೆ ಇಎಸ್ಐ ಕಾರ್ಡ್ದಾರರು ಮೆಗ್ಗಾನ್ ಆಸ್ಪತ್ರೆಗೆ ಬಂದಾಗ ಎಲ್ಲಿ ಹೋಗಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಉದ್ಯೋಗಿಗಳು ಹಾಗೂ ಉದ್ಯೋಗದಾತರು ಇಎಸ್ಐ ಯೋಜನೆಗೆ ಹಣ ಪಾವತಿಸುತ್ತಿದ್ದರೂ ಅವರಿಗೆ ನಿರೀಕ್ಷಿತ ಮಟ್ಟದ ಸೇವೆ ದೊರೆಯುತ್ತಿಲ್ಲ. ಆದ್ದರಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಎಸ್ಐ ರೋಗಿಗಳಿಗಾಗಿ ಪ್ರತ್ಯೇಕ ಕೌಂಟರ್ ತೆರೆಯಬೇಕು. ಇದರಿಂದ 80 ಸಾವಿರ ಕಾರ್ಡ್ದಾರರಿಗೆ ಅನುಕೂಲವಾಗಲಿದೆ ಎಂದು ಡಿ.ಎಸ್. ಅರುಣ್ ಸಲಹೆ ನೀಡಿದರು.
ಈ ಕುರಿತು ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಹಾಗೂ ಪರಿಹಾರ ಕ್ರಮಗಳನ್ನು ಪರಿಶೀಲಿಸುವಂತೆ ಸೂಚಿಸಿದರು.
ಮೆಗ್ಗಾನ್ನಲ್ಲಿ 17 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಣೆ
ಆಸ್ಪತ್ರೆಯ ಡಯಾಲಿಸಿಸ್ ಸೇವೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ 17 ಡಯಾಲಿಸಿಸ್ ಯಂತ್ರಗಳಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸುಮಾರು 40 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಆದರೆ ಡಯಾಲಿಸಿಸ್ ಸೇವೆಗಳ ಅಗತ್ಯವಿರುವ ರೋಗಿಗಳಿಗೆ ಕಾಯುವ ಪರಿಸ್ಥಿತಿ ಇದೆಯೇ, ಬೇರೆ ತಾಲೂಕುಗಳಿಂದ ಬರುವ ರೋಗಿಗಳಿಗೆ ಯಾವ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬುದರ ಕುರಿತು ಸಚಿವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಡಯಾಲಿಸಿಸ್ ಸೌಲಭ್ಯಗಳ ಕೊರತೆಯನ್ನು ಮುಚ್ಚಿಡದೆ ವಾಸ್ತವಿಕ ಪರಿಸ್ಥಿತಿಯನ್ನು ಅಧಿಕಾರಿಗಳು ತಿಳಿಸಬೇಕು. ಅಗತ್ಯವಿರುವ ಯಂತ್ರಗಳು ಮತ್ತು ಸೌಲಭ್ಯಗಳ ಕುರಿತು ಸ್ಪಷ್ಟವಾದ ಬೇಡಿಕೆ ಸಲ್ಲಿಸಬೇಕು. ಸಂಬಂಧಪಟ್ಟ ಸಚಿವರಿಗೆ ಶಿಫಾರಸು ಮಾಡಲು ಅನುಕೂಲವಾಗುವಂತೆ ವಿವರವಾದ ಪ್ರಸ್ತಾವನೆ ನೀಡಬೇಕು ಎಂದು ಸೂಚಿಸಲಾಯಿತು.
ತೀರ್ಥಹಳ್ಳಿ ಮತ್ತು ಭದ್ರಾವತಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿಯೂ ಡಯಾಲಿಸಿಸ್ ವ್ಯವಸ್ಥೆ ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಳೆಯ ಡಯಾಲಿಸಿಸ್ ಯಂತ್ರಗಳ ಬದಲಾವಣೆಗೆ ಪ್ರಸ್ತಾವನೆ
ಕೆಲವು ಡಯಾಲಿಸಿಸ್ ಯಂತ್ರಗಳು ಸುಮಾರು 10 ವರ್ಷಗಳಷ್ಟು ಹಳೆಯದಾಗಿವೆ. ಅವುಗಳ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಿಎಸ್ಆರ್ ನಿಧಿಯ ಮೂಲಕ ಒದಗಿಸಲಾಗಿದ್ದ ಯಂತ್ರಗಳ ಪೈಕಿ ಹಳೆಯದಾಗಿರುವ ಯಂತ್ರಗಳನ್ನು ಬದಲಾಯಿಸುವ ಅಗತ್ಯವಿದೆ. ಈ ಸಂಬಂಧ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.
ಕೆಲವು ಕೇಂದ್ರಗಳಲ್ಲಿ ಮೂರು ಪಾಳಿಗಳಲ್ಲಿ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಯಂತ್ರಗಳ ನಿರ್ವಹಣೆ ಮತ್ತು ಬದಲಾವಣೆಗೆ ಸಂಬಂಧಿಸಿದಂತೆ ಸಮರ್ಪಕ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.




0 ಕಾಮೆಂಟ್ಗಳು