SUDDILIVE || SHIVAMOGGA
ಅಪ್ರಾಪ್ತನಿಗೆ ಬೈಕ್ ನೀಡಿದ ಮಾಲೀಕನಿಗೆ ₹25 ಸಾವಿರ ದಂಡ: ಶಿವಮೊಗ್ಗ ಕೋರ್ಟ್ ಖಡಕ್ ತೀರ್ಪು- Shivamogga court fines owner ₹25,000 for giving bike to minor
ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ ವಾಹನದ ಮಾಲೀಕನಿಗೆ ಶಿವಮೊಗ್ಗ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ. ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡುವ ಪೋಷಕರು ಹಾಗೂ ವಾಹನ ಮಾಲೀಕರಿಗೆ ಈ ತೀರ್ಪು ಎಚ್ಚರಿಕೆಯಾಗಿದೆ.
ಶಿವಮೊಗ್ಗ ನಗರದ ಕುವೆಂಪುನಗರದಲ್ಲಿ ಸಂಚಾರ ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕ ಬೈಕ್ ಚಲಾಯಿಸುತ್ತಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೈಕ್ ನೀಡಿದ್ದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಹೆಚ್.ಎನ್. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯ ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗ ನ್ಯಾಯಾಲಯವು ವಾಹನದ ಮಾಲೀಕನಿಗೆ 25,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪೋಷಕರಿಗೆ ಎಚ್ಚರಿಕೆ
18 ವರ್ಷ ತುಂಬದ ಮಕ್ಕಳಿಗೆ ಬೈಕ್ ಅಥವಾ ಇತರ ಮೋಟಾರು ವಾಹನಗಳನ್ನು ಚಲಾಯಿಸಲು ನೀಡುವುದು ಕಾನೂನುಬಾಹಿರ. ಅಪ್ರಾಪ್ತರಿಗೆ ವಾಹನ ನೀಡಿದರೆ ವಾಹನದ ಮಾಲೀಕರು ಅಥವಾ ಪೋಷಕರೇ ಕಾನೂನು ಕ್ರಮ ಹಾಗೂ ದಂಡಕ್ಕೆ ಹೊಣೆಗಾರರಾಗಬೇಕಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳ ಕೈಗೆ ವಾಹನ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.
Shivamogga court fines owner ₹25,000 for giving bike to minor



0 ಕಾಮೆಂಟ್‌ಗಳು