SUDDILIVE || SHIVAMOGGA
ಸಿಟ್ಟು ಬಂದು ಶಿವಮೊಗ್ಗದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಟ್ಟುಹೋಗಿದ್ದ ಹೆಂಡತಿ ಮತ್ತು ಮಕ್ಕಳು ನಾಪತ್ತೆ-Wife and children who were left near Anjaneya Swamy temple in Shivamogga in anger go missing
ಶಿವಮೊಗ್ಗ: ಶಿವಮೊಗ್ಗ ನಗರದ ಹೊಳೆಹೊನ್ನೂರು ತಿರುವಿನ ಬಳಿಯಿರುವ ಆಂಜನೇಯ ದೇವಸ್ಥಾನದ ಬಳಿ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆಯ ತಂದೆ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾಣೆಯಾದವರ ಪತ್ತೆಗೆ ಮನವಿ ಮಾಡಿದ್ದಾರೆ.
ಕಾಣೆಯಾದ ಮಹಿಳೆಯನ್ನು 26 ವರ್ಷದ ನಜ್ಮು ಸ್ಸೆಹರ್ ಎಂದು ಗುರುತಿಸಲಾಗಿದೆ. ಇವರೊಂದಿಗೆ 8, 6 ಮತ್ತು 4 ವರ್ಷದ ಮೂವರು ಮಕ್ಕಳು ಕಾಣೆಯಾಗಿದ್ದಾರೆ.
ದೇವಸ್ಥಾನದ ಬಳಿ ಬಿಟ್ಟು ಹೋದ ಅಳಿಯ
ಕಾಣೆಯಾದ ಮಹಿಳೆಯ ತಂದೆ ಸೈಯದ್ ರಾಜಿಕ್ ಅಹ್ಮದ್ ಅವರು ನೀಡಿರುವ ದೂರಿನ ಪ್ರಕಾರ, ತಮ್ಮ ಮಗಳನ್ನು ಸುಮಾರು 9 ವರ್ಷಗಳ ಹಿಂದೆ ಶಿವಮೊಗ್ಗದ ಜಾವಳ್ಳಿ ಗ್ರಾಮದ ರಿಜ್ವಾನ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಮಗಳು ಮತ್ತು ಅಳಿಯನ ನಡುವೆ ಆಗಾಗ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದ ಹಿರಿಯರು ಮಧ್ಯಸ್ಥಿಕೆ ವಹಿಸಿ, ಇಬ್ಬರೂ ಒಟ್ಟಾಗಿ ಜೀವನ ನಡೆಸುವಂತೆ ಹಲವು ಬಾರಿ ಬುದ್ಧಿವಾದ ಹೇಳಿದ್ದರು. ಆದರೂ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ 8.30ರ ಸುಮಾರಿಗೆ ಘಟನೆ
ನವೆಂಬರ್ 27ರಂದು ಅಳಿಯ ರಿಜ್ವಾನ್ ಸಿಟ್ಟಿನಲ್ಲಿ ತನ್ನ ಹೆಂಡತಿ ಮತ್ತು ಮೂವರು ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಶಿವಮೊಗ್ಗದದಿಂದ ಚಿಕ್ಕಲ್ ಗೆ ಹೋಗುವ ಹೊಳೆಹೊನ್ನೂರು ತಿರುವಿನ ಬಳಿಯಿರುವ ಆಂಜನೇಯ ದೇವಸ್ಥಾನದ ಬಳಿ ರಾತ್ರಿ ಸುಮಾರು 8.30ರ ವೇಳೆಗೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆಯ ತಾಯಿಗೆ ಕರೆ ಮಾಡಿದ ಅಳಿಯ, ಮಗಳು ಮತ್ತು ಮಕ್ಕಳನ್ನು ಆಂಜನೇಯ ದೇವಸ್ಥಾನದ ಬಳಿ ಬಿಟ್ಟು ಹೋಗುತ್ತಿರುವುದಾಗಿ ತಿಳಿಸಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಹುಡುಕಾಟ
ಮಗಳು ಮತ್ತು ಮಕ್ಕಳು ಕಾಣೆಯಾಗಿರುವ ವಿಷಯ ತಿಳಿದ ತಂದೆ ಹಾಗೂ ಸಂಬಂಧಿಕರು ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ವಿವಿಧ ಕಡೆ ಹುಡುಕಾಟ ನಡೆಸಿದ್ದಾರೆ. ಸಂಬಂಧಿಕರ ಮನೆಗಳಲ್ಲಿಯೂ ವಿಚಾರಣೆ ನಡೆಸಿದರೂ ಮಹಿಳೆ ಮತ್ತು ಮಕ್ಕಳು ಪತ್ತೆಯಾಗಿಲ್ಲ.
ಮಹಿಳೆ ಯಾವುದೋ ಮಾನಸಿಕ ಚಿಂತೆಗೆ ಒಳಗಾಗಿ ಮಕ್ಕಳೊಂದಿಗೆ ತೆರಳಿರಬಹುದು ಎಂದು ಶಂಕಿಸಿರುವ ತಂದೆ, ಕಾಣೆಯಾದ ಮಗಳು ಮತ್ತು ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ನವೆಂಬರ್ 28ರಂದು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಣೆಯಾದ ಮಹಿಳೆ ಮತ್ತು ಮಕ್ಕಳ ಪತ್ತೆಗೆ ಮುಂದಾಗಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ
- ವಯಸ್ಸು: 26 ವರ್ಷ
- ಎತ್ತರ: ಸುಮಾರು 5.5 ಅಡಿ
- ಮುಖ: ಕೋಲು ಮುಖ
- ಮೈಬಣ್ಣ: ಬಿಳಿ
- ಮೈಕಟ್ಟು: ಸಾಧಾರಣ
- ಭಾಷೆ: ಕನ್ನಡ ಮತ್ತು ಉರ್ದು ಓದಲು, ಬರೆಯಲು ಬರುತ್ತದೆ.
Wife and children who were left near Anjaneya Swamy temple in Shivamogga in anger go missing




0 ಕಾಮೆಂಟ್ಗಳು