Advertisement

ಸೂಳೆಬೈಲಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮುಚ್ಚುವಂತೆ ಆಗ್ರಹ- Demand to close illegal stone mining in Sulebail

 SUDDILIVE || SHIVAMOGGA

ಸೂಳೆಬೈಲಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮುಚ್ಚುವಂತೆ ಆಗ್ರಹ- Demand to close illegal stone mining in Sulebail  

Stone, quarry

ಗಣಿಗಾರಿಕೆಯಿಂದ ಆಗುತ್ತಿರುವ ಅನಾಹುತಗಳಿಗೆ ಕಡಿವಾಣ ಹಾಕಿ, ಆಳವಾದ ಕಲ್ಲುಗುಂಡಿಗಳನ್ನು ತೆಗೆಯುತ್ತಿರುವದರಿಂದ ಮುಚ್ಚಬೇಕು; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು – ಕಾರ್ಮಿಕ ರಕ್ಷಣಾ ವೇದಿಕೆ ಆಗ್ರಹ


ಶಿವಮೊಗ್ಗ: ನಗರದ ಸೂಳೆಬೈಲು ಪ್ರದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಕಲ್ಲು ಗಣಿಗಾರಿಕೆಯಿಂದ ಕಾರ್ಮಿಕರ ಜೀವಕ್ಕೆ ಅಪಾಯ ಎದುರಾಗಿದ್ದು, ಜನವಸತಿ ಪ್ರದೇಶದ ಜನರೂ ಧೂಳು, ಸ್ಫೋಟದ ಶಬ್ದ ಹಾಗೂ ಪರಿಸರ ಮಾಲಿನ್ಯದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ವಾಟಾಳ್ ಮಂಜು ಅವರ ಎದುರು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷರು, ಸೂಳೆಬೈಲು ಭಾಗದಲ್ಲಿ ಈ ಹಿಂದೆ ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆಯಲಾಗಿತ್ತಾದರೂ, ಅದರ ಅವಧಿ ಮುಗಿದ ಬಳಿಕವೂ ಗಣಿಗಾರಿಕೆ ಮುಂದುವರಿದಿದೆ ಎಂದು ಆರೋಪಿಸಿದರು. ಸರ್ಕಾರದ ಸುತ್ತೋಲೆಯ ಪ್ರಕಾರ 60 ಅಡಿ ಆಳದವರೆಗೆ ಮಾತ್ರ ಕಲ್ಲು ತೆಗೆಯಲು ಅವಕಾಶವಿದೆ ಎನ್ನಲಾಗಿದ್ದು, ಆದರೆ ಕೆಲವರು ಈಗಾಗಲೇ 100ರಿಂದ 150 ಅಡಿ ಆಳದವರೆಗೆ ಗಣಿಗಾರಿಕೆ ನಡೆಸುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಅತಿಯಾದ ಆಳದಲ್ಲಿ ಕಲ್ಲು ತೆಗೆಯುತ್ತಿರುವುದರಿಂದ ಕಾರ್ಮಿಕರ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದೆ ಎಂದು ದೂರಿದರು.

ಗಣಿಗಾರಿಕೆ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ದು ಆಳವಾದ ಗುಂಡಿಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಈ ವೇಳೆ ಅನೇಕ ಕಾರ್ಮಿಕರು ಮೃತಪಟ್ಟಿದ್ದರೂ, ಅವರ ಸಾವಿನ ನೈಜ ಮಾಹಿತಿ ಹೊರಬರುತ್ತಿಲ್ಲ ಎಂಬ ಗಂಭೀರ ಆರೋಪವನ್ನೂ ಮಾಡಿದರು. ಗಣಿಗಾರಿಕೆ ಪ್ರದೇಶದಲ್ಲಿ ಸಂಭವಿಸುವ ಸಾವುಗಳನ್ನು ಹೊರಗಡೆ ನಡೆದ ಅಪಘಾತಗಳೆಂದು ಬಿಂಬಿಸಿ, ಟ್ರ್ಯಾಕ್ಟರ್‌ನಿಂದ ಬಿದ್ದಿದ್ದಾರೆ ಅಥವಾ ಲಾರಿಯಿಂದ ಬಿದ್ದಿದ್ದಾರೆ ಎಂದು ಹೇಳುವ ಮೂಲಕ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಇಂತಹ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಪೊಲೀಸ್ ಇಲಾಖೆಯ ಕೆಲವರೂ ಗಣಿಗಾರಿಕೆ ನಡೆಸುವವರೊಂದಿಗೆ ಕೈಜೋಡಿಸುತ್ತಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟ ಅವರು, ಅಮಾಯಕ ಕಾರ್ಮಿಕರಿಗೆ ನ್ಯಾಯ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನವಸತಿ ಪ್ರದೇಶದಲ್ಲೇ ರಾತ್ರಿ ವೇಳೆ ಬ್ಲಾಸ್ಟಿಂಗ್ ಆರೋಪ

ಸೂಳೆಬೈಲು ಈಗ ನಗರ ಪ್ರದೇಶವಾಗಿ ಬೆಳೆದಿದ್ದು, ಇಲ್ಲಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಜನವಸತಿ ಪ್ರದೇಶಗಳಿವೆ. ವಯೋವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಜನರು ವಾಸಿಸುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ರಾತ್ರಿ ವೇಳೆಯೂ ಕಲ್ಲು ಗಣಿಗಾರಿಕೆ ನಡೆಸಿ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಹಗಲು ವೇಳೆಯಲ್ಲಿ ಜಲ್ಲಿ ಸಾಗಿಸುವ ವಾಹನಗಳ ಸಂಚಾರದಿಂದ ವ್ಯಾಪಕ ಧೂಳು ಹರಡುತ್ತಿದ್ದು, ಸ್ಥಳೀಯರು ಧೂಳು ಮತ್ತು ಅಲರ್ಜಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.

ಈ ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ, ಸಂಬಂಧಪಟ್ಟವರು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಳೆಗಾಲದಲ್ಲಿ ಕಲ್ಲು ಗುಂಡಿಗಳಿಂದ ಪ್ರಾಣಾಪಾಯದ ಆತಂಕ

ಗಣಿಗಾರಿಕೆ ನಡೆಸಿ ಹಾಗೆಯೇ ಬಿಡಲಾಗಿರುವ ಆಳವಾದ ಗುಂಡಿಗಳು ಮತ್ತೊಂದು ಅಪಾಯಕ್ಕೆ ಕಾರಣವಾಗಿವೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ದನಕರುಗಳು, ವಯೋವೃದ್ಧರು ಹಾಗೂ ಆಟವಾಡುವ ಮಕ್ಕಳು ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಗಣಿಗಾರಿಕೆ ನಡೆಸಿದವರು ತಾವು ತೆಗೆದಿರುವ ಗುಂಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಕ್ಷಣ ಗಣಿಗಾರಿಕೆ ಸ್ಥಗಿತಗೊಳಿಸಿ, ಕಾನೂನು ಕ್ರಮಕ್ಕೆ ಆಗ್ರಹ

ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಳೆಬೈಲಿನಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವವರ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಈಗಾಗಲೇ ತೆಗೆಯಲಾಗಿರುವ ಆಳವಾದ ಗುಂಡಿಗಳನ್ನು ಮುಚ್ಚಿಸಬೇಕು. ಕಾರ್ಮಿಕರ ಸಾವುಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕಾರ್ಮಿಕ ರಕ್ಷಣಾ ವೇದಿಕೆ ಆಗ್ರಹಿಸಿತು.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ಮುಖಂಡರು ಎಚ್ಚರಿಕೆ ನೀಡಿದರು.

ಸೂಳೆಬೈಲು ಪ್ರದೇಶದ ಜನರ ಸುರಕ್ಷತೆ, ಕಾರ್ಮಿಕರ ಜೀವ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಒತ್ತಾಯವಾಗಿದೆ.

Demand to close illegal stone mining in Sulebail 

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು