SUDDILIVE || SHIVAMOGGA
ತಾಳಗುಂದ ನಾಡಕಚೇರಿಯಲ್ಲಿ ಕನಕ ಜಯಂತಿ ಆಚರಣೆಗೆ ನಿರ್ಲಕ್ಷ್ಯದ ಆರೋಪ; ಗ್ರಾಮಸ್ಥರು, ಡಿಎಸ್ಎಸ್ ಆಕ್ಷೇಪ-Allegations of negligence in Kanaka Jayanti celebrations in Talagund Nadakacheri; Villagers, DSS object
ಶಿಕಾರಿಪುರ: ರಾಜ್ಯಾದ್ಯಂತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕಿದ್ದ ದಿನದಂದು ತಾಳಗುಂದ ನಾಡಕಚೇರಿಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಜಯಂತಿ ಆಚರಿಸಿದ್ದು, ಉಳಿದ ಸಿಬ್ಬಂದಿ ಗೈರಾಗಿರುವುದಕ್ಕೆ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಆಕ್ಷೇಪ ವ್ಯಕ್ತಪಡಿಸಿದೆ.
ನವೆಂಬರ್ 27, 2026ರಂದು ಕನಕದಾಸರ ಜಯಂತಿ ಆಚರಣೆಗೆ ಸರ್ಕಾರದ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಶಿಕಾರಿಪುರ ತಾಲೂಕು ತಾಳಗುಂದ ಹೋಬಳಿಯ ನಾಡಕಚೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಭಾಗವಹಿಸಿ ಜಯಂತಿ ಆಚರಿಸದಿರುವುದು ಖಂಡನೀಯ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಡಕಚೇರಿಯಲ್ಲಿ 14 ಗ್ರಾಮ ಲೆಕ್ಕಾಧಿಕಾರಿಗಳು, 20 ಡಿ-ಗ್ರೂಪ್ ನೌಕರರು ಸೇರಿದಂತೆ ಸಿಬ್ಬಂದಿ ಇದ್ದರೂ, ಜಯಂತಿ ಆಚರಣೆಯಲ್ಲಿ ಕೆಲವೇ ಮಂದಿ ಭಾಗವಹಿಸಿದ್ದಾರೆ ಎಂದು ದೂರಲಾಗಿದೆ. ಗ್ರಾಮಸ್ಥರು ನಾಡಕಚೇರಿಗೆ ಭೇಟಿ ನೀಡಿದಾಗ, ತಾಳಗುಂದದ ಗ್ರಾಮ ಲೆಕ್ಕಾಧಿಕಾರಿ ಕರಿಬಸವರಾಜು ಹಾಗೂ ಗ್ರಾಮ ಸಹಾಯಕ ಬಸವರಾಜು ಅವರು ಮಾತ್ರ ಕನಕದಾಸರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿರುವುದು ಕಂಡುಬಂದಿದೆ. ಉಳಿದ ಸಿಬ್ಬಂದಿ ಗೈರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳನ್ನು ಆಚರಿಸುವಲ್ಲಿ ನಾಡಕಚೇರಿಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿರುವುದು ಇದೇ ಮೊದಲಲ್ಲ. ವಿವಿಧ ಸರ್ಕಾರಿ ಕಾರ್ಯಕ್ರಮಗಳ ಸಂದರ್ಭದಲ್ಲಿಯೂ ಕೆಲವರು ಮಾತ್ರ ಭಾಗವಹಿಸುತ್ತಿದ್ದು, ಉಳಿದವರು ಗೈರಾಗುತ್ತಿರುವುದು ನಿರಂತರವಾಗಿ ಕಂಡುಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಳಗುಂದ ಗ್ರಾಮದಲ್ಲಿ ಕನಕದಾಸರ ಜಯಂತಿಯಂತಹ ಸರ್ಕಾರಿ ಕಾರ್ಯಕ್ರಮವನ್ನು ನಿರ್ಲಕ್ಷಿಸಿರುವುದು ಊರಿಗೆ ಕಪ್ಪುಚುಕ್ಕೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಡಿಎಸ್ಎಸ್ ಸಂಘಟನಾ ಸಂಚಾಲಕ ಶಶಿಕುಮಾರ್, ಸರ್ಕಾರಿ ಕಾರ್ಯಕ್ರಮಗಳನ್ನು ಗೌರವದಿಂದ ಆಚರಿಸುವುದು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ. ಆದರೆ ತಾಳಗುಂದ ನಾಡಕಚೇರಿಯಲ್ಲಿ ಕೆಲವೇ ಸಿಬ್ಬಂದಿ ಜಯಂತಿ ಆಚರಿಸಿರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರು ಹಾಗೂ ಡಿಎಸ್ಎಸ್ ಮುಖಂಡರು ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು, ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳ ಆಚರಣೆಯಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಾಡಕಚೇರಿಯಲ್ಲಿ ಸಿಬ್ಬಂದಿ ಇದ್ದರೂ ಕನಕದಾಸರ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂಬ ಗ್ರಾಮಸ್ಥರ ಆರೋಪಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.




0 ಕಾಮೆಂಟ್ಗಳು