Advertisement

ವಿಪ್ರ ನೇರ ಸಾಲ ಯೋಜನೆಗೆ ಉತ್ತಮ ಸ್ಪಂದನೆ: 1,333 ಅರ್ಜಿಗಳ ಪೈಕಿ 1,200 ಮಂದಿಗೆ ಸಾಲ ವಿತರಣೆ-Vipra Direct Loan Scheme receives good response: Loans disbursed to 1,200 out of 1,333 applications

SUDDILIVE || SHIVAMOGGA

ವಿಪ್ರ ನೇರ ಸಾಲ ಯೋಜನೆಗೆ ಉತ್ತಮ ಸ್ಪಂದನೆ: 1,333 ಅರ್ಜಿಗಳ ಪೈಕಿ 1,200 ಮಂದಿಗೆ ಸಾಲ ವಿತರಣೆ-Vipra Direct Loan Scheme receives good response: Loans disbursed to 1,200 out of 1,333 applications

Vipra, loan

ಶಿವಮೊಗ್ಗ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಪ್ರ ನೇರ ಸಾಲ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕಳೆದ ಒಂದು ವರ್ಷದಲ್ಲಿ ಸಲ್ಲಿಕೆಯಾದ 1,333 ಅರ್ಜಿಗಳ ಪೈಕಿ 1,200 ಮಂದಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಬಾಕಿ ಉಳಿದ ಅರ್ಜಿದಾರರಿಗೂ ಸಾಲ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿಯ ನಿರ್ದೇಶಕ ಪಿ.ಎಂ. ಮಾಲತೇಶ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮಂಡಳಿಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಕಳೆದ ಒಂದು ವರ್ಷದ ಕಾರ್ಯಚಟುವಟಿಕೆಗಳು ತೃಪ್ತಿ ತಂದಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ  ಹೇಳಿದ್ದಾರೆ.

ವಿಪ್ರ ನೇರ ಸಾಲ ಯೋಜನೆ ಅತ್ಯಂತ ಜನಪ್ರಿಯತೆ ಗಳಿಸಿದ್ದು, ಆರ್ಥಿಕವಾಗಿ ಹಿಂದುಳಿದ ಅನೇಕ ಬ್ರಾಹ್ಮಣ ಕುಟುಂಬಗಳಿಗೆ ಆಸರೆಯಾಗಿದೆ. ಸಾಲ ಪಡೆದ ಫಲಾನುಭವಿಗಳು ಹಣವನ್ನು ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಪ್ರಾಮಾಣಿಕವಾಗಿ ಬಳಸಿಕೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ. ಅಷ್ಟೇ ಅಲ್ಲದೆ, ಪಡೆದ ಸಾಲವನ್ನು ನಿಯಮಿತವಾಗಿ ಮರುಪಾವತಿ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಲದ ಜೊತೆಗೆ ₹40 ಸಾವಿರ ಸಬ್ಸಿಡಿ

ವಿಪ್ರ ನೇರ ಸಾಲ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಸಾಲದ ಜೊತೆಗೆ ₹40 ಸಾವಿರ ಸಬ್ಸಿಡಿ ಸೌಲಭ್ಯ ಒದಗಿಸಲಾಗುತ್ತಿದೆ. ಉಳಿದ ₹1.60 ಲಕ್ಷ ಮೊತ್ತಕ್ಕೆ ಶೇ.4ರಷ್ಟು ಬಡ್ಡಿದರ ವಿಧಿಸಲಾಗುತ್ತಿದ್ದು, ಈ ಸೌಲಭ್ಯವು ಫಲಾನುಭವಿಗಳು ಸ್ವಂತ ಉದ್ಯೋಗ ಆರಂಭಿಸಲು ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಮಾಲತೇಶ್ ವಿವರಿಸಿದ್ದಾರೆ.

ಆಧಾರ್ ಸೀಡಿಂಗ್, ಬ್ಯಾಂಕ್ ಖಾತೆಯಿಂದಾಗಿ ತಾಂತ್ರಿಕ ಸಮಸ್ಯೆ

ಸಲ್ಲಿಕೆಯಾದ ಕೆಲವು ಅರ್ಜಿಗಳಿಗೆ ಸಾಲದ ಹಣ ವರ್ಗಾವಣೆ ಮಾಡಲು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಕೆಲವು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡಿಸದಿರುವುದು ಹಾಗೂ ಅಂಚೆ ಕಚೇರಿಯ ₹2 ಲಕ್ಷ ಮಿತಿ ಹೊಂದಿರುವ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಾಗ ತಾಂತ್ರಿಕ ತೊಂದರೆ ಎದುರಾಗಿರುವುದು ವಿಳಂಬಕ್ಕೆ ಕಾರಣವಾಗಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಿ ಬಾಕಿ ಉಳಿದ ಫಲಾನುಭವಿಗಳಿಗೂ ಸೌಲಭ್ಯ ತಲುಪಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ನೀತಿ ಸಂಹಿತೆಯ ಕಾರಣದಿಂದ ಸೌಲಭ್ಯ ಒದಗಿಸುವಲ್ಲಿ ವಿಳಂಬವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.

ಹಿರಿಯ ನಾಯಕರ ಮಾರ್ಗದರ್ಶನ, ಮುಖ್ಯಮಂತ್ರಿಗಳ ಸಹಕಾರ

ರಾಜ್ಯದ ಬ್ರಾಹ್ಮಣ ಸಮಾಜದ ಹಿರಿಯರು ಹಾಗೂ ಮಾರ್ಗದರ್ಶಕರಾದ ಆರ್.ವಿ. ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಅವರ ಮಾರ್ಗದರ್ಶನದಲ್ಲಿ ಮಂಡಳಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಅವರ ವಿಶೇಷ ಆಸಕ್ತಿ ಮತ್ತು ಸಲಹೆಗಳಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಮಂಡಳಿಯ ಕಾರ್ಯಕ್ರಮಗಳ ಯಶಸ್ಸಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪೂರ್ಣ ಸಹಕಾರ ದೊರೆಯುತ್ತಿದೆ. ರಾಜ್ಯದ ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ಸಹಕಾರ ನೀಡುತ್ತಿರುವ ಎಲ್ಲ ನಾಯಕರಿಗೂ ರಾಜ್ಯದ ಬ್ರಾಹ್ಮಣ ಸಮಾಜದ ಒಕ್ಕೂಟದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಪಿ.ಎಂ. ಮಾಲತೇಶ್ ತಿಳಿಸಿದ್ದಾರೆ.

ಮಂಡಳಿಯ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದರ ಜೊತೆಗೆ, ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡುವುದು ಮಂಡಳಿಯ ಪ್ರಮುಖ ಉದ್ದೇಶವಾಗಿದೆ.

Vipra Direct Loan Scheme receives good response: Loans disbursed to 1,200 out of 1,333 applications


ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು