ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರದಲ್ಲಿ ಆಟೋ ಚಾಲಕರುಗಳು ಆಟೋ ಮೀಟರ್ ಗಳನ್ನು ಬಳಸದೆ, ಹೆಚ್ಚಿನ ದರವನ್ನು ಕೇಳುತ್ತಿರುವ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ನಿನ್ನೆ ಮತ್ತೊಂದು ಸುತ್ತಿನ ಜಾಗೃತಿ ಅಭಿಯಾನ ನಡೆಸಲಾಗಿದೆ.
ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ರವರ ಮೇಲ್ವಿಚಾರಣೆಯಲ್ಲಿ ಶಿವಮೊಗ್ಗ ಸಂಚಾರ ವೃತ್ತ ನಿರೀಕ್ಷಕ ಸಂತೋಷ್, ರವರ ನೇತೃತ್ವದಲ್ಲಿ ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡವು ಶಿವಮೊಗ್ಗ ನಗರದಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿದೆ.
ಆಟೋಗಳನ್ನು ತಡೆದು, ಸಾರ್ವಜನಿಕರು ಪ್ರಯಾಣಿಸುವ ಸಮಯದಲ್ಲಿ ಆಟೋಗಳಲ್ಲಿ ಮೀಟರ್ ಬಳಕೆ ಮಾಡುತ್ತಿರುವ ಬಗ್ಗೆ ತಪಾಸಣೆ ಮಾಡಲಾಗಿದೆ, ಮೀಟರ್ ಬಳಕೆ ಮಾಡದೇ ಇದ್ದವರ ವಿರುದ್ಧ ಆಟೋ ಚಾಲಕರ ವಿರುದ್ದ IMV ಕಾಯ್ದೆಯಡಿ ಒಟ್ಟು 100 ಪ್ರಕರಣಗಳನ್ನು ದಾಖಲಿಸಿ, 20 ಆಟೋಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಆಟೋ ಚಾಲಕರು ಕಡ್ಡಾಯವಾಗಿ ಆಟೋ ಮೀಟರ್ ಅನ್ನು ಬಳಕೆ ಮಾಡುವಂತೆ ಅನುಷ್ಠಾನ ಮಾಡುವಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯವಾಗಿದ್ದು, ಯಾವುದೇ ಆಟೋ ಚಾಲಕರು ಆಟೋ ಮೀಟರ್ ಅನ್ನು ಬಳಕೆ ಮಾಡದೇ ಇದ್ದಲ್ಲಿ ಅಥವಾ ನಿರಾಕರಿಸಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರು ನೀಡುವುದು. ಸಾರ್ವಜನಿಕರ ದೂರಿನ ಮೇರೆಗೆ, ಆಟೋ ಮೀಟರ್ ಬಳಕೆ ಮಾಡದ ಆಟೋ ಚಾಲಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದಾಗಿ ಇಲಾಖೆ ಪ್ರಕಟಣೆ ಹೊರಡಿಸಿದೆ.