SUDDILIVE || SHIVAMOGGA
ಇನ್ನೆಷ್ಟು ವರ್ಷ ಬೇಕು ಚತುಷ್ಪಥ ರಸ್ತೆ ಮುಗಿಯಲು-How many more years will it take to complete the four-lane road?
ಶಿವಮೊಗ್ಗ - ಭದ್ರಾವತಿ ನಡುವೆ ನಡೆಯುತ್ತಿರುವ ಹೈವೇ ಕಾಮಗಾರಿ ಆರು ವರ್ಷ ಕಳೆದರೂ ಮುಗಿಯುತ್ತಿಲ್ಲ. ಅದರಲ್ಲೂ ಮಾಚೇನಹಳ್ಳಿ ಡೈರಿ ಬಳಿಯ ಕಲ್ಲು ಕರಗಿಸಲು ಹೈವೇ ಪ್ರಕಾರ ನಾಲ್ಕು ವರ್ಷಗಳಿಂದ ದಿನ ದೂಡುತ್ತಿದೆ. ಕಿರಿದಾದ ರಸ್ತೆಯಲ್ಲಿ ಪ್ರತಿದಿನ ಪ್ರಯಾಣಿಕರು ಜೀವದ ಹಂಗುತೊರೆದು ವಾಹನ ಓಡಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಕುಸಿತವಾಗಿದ್ದ ಜಾಗದಲ್ಲೇ ರಸ್ತೆ ಇನ್ನಷ್ಟು ಸಡಿಲಗೊಂಡಿದೆ. ಯಾವಾಗ ಬೇಕಾದರೂ ಅನಾಹುತಗಳ ಸಂಭವಿಸಬಹುದು.
ತುಮಕೂರು - ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ 10 ವರ್ಷ ದಾಟಿದೆ. ಒಟ್ಟು ನಾಲ್ಕು ಪ್ಯಾಕೇಜ್ಗಳಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ತುಮಕೂರಿನಿಂದ ತರೀಕೆರೆವರೆಗಿನ ಮೂರು ಪ್ಯಾಕೇಜ್ ಮುಕ್ತಾಯ ಹಂತಕ್ಕೆ ತಲುಪಿದೆ. ನಾಲ್ಕನೇ ಪ್ಯಾಕೇಜ್ ಕಾಮಗಾರಿ ಶೇ.50ರಷ್ಟು ಮಾತ್ರ ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ಮುಗಿಯಲು ಎಷ್ಟು ವರ್ಷ ಬೇಕೋ ಗೊತ್ತಿಲ್ಲ. ಅದರಲ್ಲೂ ಭದ್ರಾವತಿ ಶಿವಮೊಗ್ಗ ನಡುವಿನ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲು ಅನೇಕ ಬಾರಿ ಸೂಚನೆ ನೀಡಲಾಗಿದ್ದರೂ ಮುಗಿಯುತ್ತಿಲ್ಲ. ಭದ್ರಾವತಿ ಬೈಪಾಸ್, ಮಾಚೇನಹಳ್ಳಿ ಡೇರಿ, ಐಟಿ ಪಾರ್ಕ್ ನಡುವಿನ ಫ್ಲೈ ಓವರ್ ಹಾಗೂ ಅಂಡರ್ಪಾಸ್ ಕಾಮಗಾರಿ ತೆವಳುತ್ತ ಸಾಗಿದೆ.
ಬೈಪಾಸ್ ಬಳಿಯ ಓವರ್ ಬ್ರಿಡ್ಜ್ ಹಾಗೂ ಅಂಡರ್ಪಾಸ್ ಕಾಮಗಾರಿಗೆ ಹೈಟೆನ್ಶನ್ ವಿದ್ಯುತ್ ಲೈನ್ಗಳು ಅಡ್ಡಿಯಾಗಿದ್ದವು. ಲೈನ್ ಎತ್ತರಿಸಿ ಕಾಮಗಾರಿ ಅನುವು ಮಾಡಿಕೊಡಲು ಎರಡು ವರ್ಷ ತೆಗೆದುಕೊಳ್ಳಲಾಯಿತು. ಈಗ ಲೈನ್ ಎತ್ತರಿಸಲಾಗಿದ್ದರೂ ಕೆಲಸ ಮಾತ್ರ ವೇಗ ಪಡೆದಿಲ್ಲ.
ಅದೇ ರೀತಿ ಶಿಮುಲ್ ಡೇರಿ ಬಳಿ ಇರುವ ಕಲ್ಲಿನ ಬೆಟ್ಟವನ್ನು ಕರಗಿಸಿ ಸಮತಟ್ಟು ಮಾಡಿ ರಸ್ತೆ ಮಾಡಲು ನಾಲ್ಕು ವರ್ಷಗಳಲ್ಲೇ ತೆಗೆದುಕೊಳ್ಳಲಾಗಿದೆ. ಸುತ್ತಮುತ್ತ ಕೈಗಾರಿಕೆಗಳು, ಕಟ್ಟಡಗಳು ಇರುವುದರಿಂದ ಸೋಟಕ ಬಳಸುವಂತಿಲ್ಲ. ಡ್ರಿಲ್ ಮಾಡಿ ಕಲ್ಲನ್ನು ಪುಡಿ ಮಾಡಬೇಕಿತ್ತು. ಆದರೆ ಗುತ್ತಿಗೆದಾರ ಇದಕ್ಕೆ ಹೆಚ್ಚಿನ ಆದ್ಯತೆ ಕೊಡದ ಪರಿಣಾಮ ನಾಲ್ಕು ವರ್ಷ ಆದರೂ ಪೂರ್ಣಗೊಂಡಿಲ್ಲ.
ವಾಹನಗಳಿಗೆ ಸರ್ವೀಸ್ ಒಂದು ಕಡೆ ಮಾತ್ರ ಸರ್ವೀಸ್ ಕೊಡಲಾಗಿದೆ. ಈ ಭಾಗದಲ್ಲೇ ಶಿಮುಲ್ ಹಾಲಿನ ಡೇರಿ, ಮದ್ಯದ ಅಂಗಡಿಗಳು, ಗೂಡಂಗಡಿಗಳು ಇದ್ದು ಸದಾ ಜನಸಂದಣಿಯಿಂದ ಕೂಡಿರುತ್ತಿದೆ. ಇಲ್ಲಿ ವಾಹನಗಳನ್ನು ಓಡಿಸುವುದು ಬಹಳ ತ್ರಾಸದಾಯಕ. ಶಿಮುಲ್ ಎದುರು ಕಳೆದ ಮಳೆಗಾಲದಲ್ಲಿ ಕುಸಿದಿದ್ದ ಭಾಗವನ್ನು ಇನ್ನೂ ದುರಸ್ತಿ ಮಾಡಲು ಆಗಿಲ್ಲ. ಕನಿಷ್ಠ ಇಲ್ಲಿ ತಡೆಗೋಡೆ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸದೆ ಗುತ್ತಿಗೆದಾರ ಕಾಲಹರಣ ಮಾಡಿದ್ದಾನೆ. ಈಗ ಕೆಲಸಕ್ಕೆ ವೇಗ ನೀಡಲಾಗಿದೆಯಾದರೂ ಮಳೆಗಾಲ ಆರಂಭವಾಗಿರುವುದರಿಂದ ಪೂರ್ಣಗೊಳ್ಳಲು ಸಾಕಷ್ಟು ಸಮಯಬೇಕಿದೆ. ಅಲ್ಲಿವರೆಗೂ ಕುಸಿಯದೆ ಉಳಿದರೆ ಮಾತ್ರ ವಾಹನ ಓಡಾಡಬಹುದು.
ಐಟಿ ಪಾರ್ಕ್ ಬಳಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್ ಹಾಗೂ ಅಂಡರ್ ಬ್ರಿಡ್ಜ್ ಕೆಲಸ ಸಹ ಇದೇ ವರ್ಷ ಪೂರ್ಣಗೊಳ್ಳುವುದು ಅನುಮಾನ. ಕಳೆದ ಮಳೆಗಾಲದಲ್ಲೇ ಅಂಡರ್ಪಾಸ್ ಕೆಲಸ ಮುಗಿದಿದ್ದು ಫ್ಲೈ ಓವರ್ಗೆ ಮಣ್ಣು ಹೊಡೆಯಲಾಗುತ್ತಿದೆ. ಮತ್ತೊಂದು ಮಳೆಗಾಲ ಬಂದರೂ ಪೂರ್ಣಗೊಂಡಿಲ್ಲ. ಇಲ್ಲೂ ಸಹ ಒಂದೇ ಕಡೆ ಸರ್ವೀಸ್ ರಸ್ತೆ ಇದ್ದು ದ್ವಿಮುಖ ಸಂಚಾರ ಇದೆ. ಕೈಗಾರಿಕಾ ಪ್ರದೇಶವಾಗಿರುವುದರಿಂದ ಲಾರಿಗಳು ಎಥೇಚ್ಛವಾಗಿ ಸಂಚರಿಸುತ್ತವೆ. ಒಂದು ವಾಹನ ಕೆಟ್ಟು ನಿಂತರೆ ಅರ್ಧ ಕಿ.ಮೀ ರಸ್ತೆ ದಾಟಲು ಅರ್ಧ ತಾಸು ಬೇಕು. ಫ್ಲೈ ಓವರ್ನ ಮತ್ತೊಂದು ಬದಿ ಸರ್ವೀಸ್ ಮಾಡಲು ಅದ್ಯಾವ ಸಮಸ್ಯೆ ಇದೆಯೋ ದೇವರೆ ಬಲ್ಲ!
How many more years will it take to complete the four-lane road?