SUDDILIVE || SHIVAMOGGA
ಶಿವಮೊಗ್ಗದಲ್ಲಿ ಎರಡು ದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ-Disruption in drinking water supply in Shivamogga for two days
ಶಿವಮೊಗ್ಗ, ಜೂನ್ 22: ಶಿವಮೊಗ್ಗ ನಗರದಲ್ಲಿ ಜೂನ್ 23 ಹಾಗೂ 24ರಂದು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗಾಜನೂರು ಮೂಲ ಸ್ಥಾವರಕ್ಕೆ ಮೆಸ್ಕಾಂ ಇಲಾಖೆಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 23ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ನೀರು ಶುದ್ಧೀಕರಣ ಮತ್ತು ಪೂರೈಕೆ ಪ್ರಕ್ರಿಯೆ ಮೇಲೆ ಪರಿಣಾಮ ಬೀಳಲಿದ್ದು, ನಗರಕ್ಕೆ ದೈನಂದಿನವಾಗಿ ಸರಬರಾಜಾಗುವ ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯ ಸಂಭವಿಸಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಶಿವಮೊಗ್ಗ ನಿರ್ವಹಣೆ ಹಾಗೂ ಪಾಲನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಅಗತ್ಯ ಪ್ರಮಾಣದಲ್ಲಿ ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ತಾತ್ಕಾಲಿಕ ಅಡಚಣೆಯಿಂದ ಉಂಟಾಗುವ ಅನಾನುಕೂಲತೆಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದು, ವಿದ್ಯುತ್ ಸರಬರಾಜು ಪುನರಾರಂಭವಾದ ಬಳಿಕ ನೀರು ಸರಬರಾಜು ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


