SUDDILIVE || SHIVAMOGGA
ಇನ್ ಸ್ಟಾದಲ್ಲಿ ವಿಡಿಯೋ ವೈರಲ್-ಅಪ್ರಾಪ್ತರ ಚೆಲ್ಲಾಟ, ದೊಡ್ಡವರಿಗೆ ಬಿತ್ತು ಕೇಸು-Video goes viral on Instagram - minors' pranks, adults get in trouble
ಶಿವಮೊಗ್ಗ, ಜೂನ್ 22: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸರು ಅಪ್ರಾಪ್ತ ವಯಸ್ಸಿನ ಬೈಕ್ ಸವಾರ ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎನ್.ಟಿ. ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ, ಬೈಕ್ ಮೇಲೆ ಮೂವರು ಪ್ರಯಾಣಿಸುತ್ತಾ ನಿರ್ಲಕ್ಷ್ಯ ಹಾಗೂ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಆಗಿದ್ದ ವಿಡಿಯೋದಲ್ಲಿ, ಬೈಕ್ ಸವಾರನೊಬ್ಬ ತನ್ನ ವಾಹನದ ಮೇಲೆ ಇನ್ನಿಬ್ಬರು ಯುವಕರನ್ನು ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ ಶಿವಮೊಗ್ಗ ನಗರದ ಎನ್.ಟಿ. ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿತ್ತು. ಈ ವಿಡಿಯೋ ಗಮನಿಸಿದ ಸಂಚಾರ ವಿಭಾಗದ ಅಧಿಕಾರಿಗಳು ತನಿಖೆ ನಡೆಸಿ ವಾಹನ ಹಾಗೂ ಸವಾರನನ್ನು ಪತ್ತೆಹಚ್ಚಿದ್ದಾರೆ.
ತನಿಖೆಯಲ್ಲಿ ವಿಡಿಯೋದಲ್ಲಿದ್ದ ಬೈಕ್‌ನ ನೋಂದಣಿ ಸಂಖ್ಯೆ KA-14 EB-6143 ಎಂದು ದೃಢಪಟ್ಟಿದ್ದು, ವಾಹನ ಚಲಾಯಿಸುತ್ತಿದ್ದವರು 17 ವರ್ಷದ ಅಪ್ರಾಪ್ತ ಬಾಲಕ ಎಂದು ತಿಳಿದುಬಂದಿದೆ. ಬೈಕ್ ಹಿಂಭಾಗದಲ್ಲಿ ಯುವಕರು ಕುಳಿತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ್ದ ಆರೋಪದಡಿ ವಾಹನದ ಮಾಲೀಕ ಪ್ರೇಮ್ ಕುಮಾರ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕನಿಂದ ವಾಹನ ಚಾಲನೆ, ಹೆಲ್ಮೆಟ್ ಧರಿಸದಿರುವುದು ಹಾಗೂ ಟ್ರಿಪಲ್ ರೈಡಿಂಗ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳ ಅಡಿಯಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
