SUDDILIVE || SHIVAMOGGA
ಶಿವಮೊಗ್ಗದಲ್ಲಿ 1.207 ಕೆಜಿ ಗಾಂಜಾ ವಶ: ಯುವಕ ಬಂಧನ-1.207 kg of ganja seized in Shivamogga: Youth arrested
ಶಿವಮೊಗ್ಗ, ಜು.24: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಟಿ.ರಸ್ತೆಯ ನಮೋ ಶಂಕರ್ ಲೇಔಟ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ, ಆತನಿಂದ 1 ಕೆಜಿ 207 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ಜುಲೈ 24ರಂದು ಮಧ್ಯಾಹ್ನ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಪಂಚರ ಸಮ್ಮುಖದಲ್ಲಿ ದಾಳಿ ನಡೆಸಲಾಯಿತು. ನಮೋ ಶಂಕರ್ ಲೇಔಟ್‌ನ 3ನೇ ಕ್ರಾಸ್ ಬಳಿ ಕಪ್ಪು ಬಣ್ಣದ ಬ್ಯಾಗ್ ಹಿಡಿದು ಸಾರ್ವಜನಿಕರಿಗೆ ಅನುಮಾನಾಸ್ಪದ ರೀತಿಯಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದರು.
ಬಂಧಿತನನ್ನು ಅಬ್ಬು ಶಾಖಾದ್ರಿ ಜಹೀರುದ್ದೀನ್ (24) ಎಂದು ಗುರುತಿಸಲಾಗಿದ್ದು, ಆತ ಶಿವಮೊಗ್ಗದ ರಾಗಿಗುಡ್ಡ 4ನೇ ಕ್ರಾಸ್ ನಿವಾಸಿಯಾಗಿದ್ದು ಹಮಾಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಕೈಯಲ್ಲಿದ್ದ ಕಪ್ಪು ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಬಿಳಿ ಬಟ್ಟೆಯಲ್ಲಿ ಸುತ್ತಿ ಪ್ಯಾಕ್ ಮಾಡಿದ್ದ ಗಾಂಜಾ ಪತ್ತೆಯಾಯಿತು. ತೂಕ ಪರಿಶೀಲನೆ ವೇಳೆ ಪ್ಯಾಕಿಂಗ್ ಸಮೇತ ಒಟ್ಟು 1 ಕೆಜಿ 207 ಗ್ರಾಂ ಗಾಂಜಾ ಇದ್ದು, ಅದರ ಅಂದಾಜು ಮೌಲ್ಯ ₹65,000 ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ, ಕಪ್ಪು ಬ್ಯಾಗ್ ಹಾಗೂ ಪ್ಯಾಕಿಂಗ್ ಸಾಮಗ್ರಿಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಎನ್. ಅಂಬಿಗೇರ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪಂಚರ ಸಮ್ಮುಖದಲ್ಲಿ ನಡೆಸಲಾಯಿತು. ಆರೋಪಿಯ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕಾರಕ ವಸ್ತುಗಳ ಕಾಯ್ದೆ (NDPS Act) ಕಲಂ 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

