SUDDILIVE || HOLEHONNURU
20 ವರ್ಷಗಳ ಮೌಢ್ಯಕ್ಕೆ ಬ್ರೇಕ್: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಚಿಕನ್ ಊಟ- A break from 20 years of ignorance: For the first time, children at Morarji Desai Residential School are served chicken meals
ಹೊಳೆಹೊನ್ನೂರು, ಜು. 21: ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮುಂದುವರಿದಿದ್ದ ಮಾಂಸಾಹಾರ ನಿಷೇಧಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಭಾನುವಾರ ವಿದ್ಯಾರ್ಥಿಗಳಿಗೆ ಇಲಾಖೆಯ ಮೆನು ಪ್ರಕಾರ ಮೊದಲ ಬಾರಿಗೆ ಚಿಕನ್ ಊಟ (ಬಾಡೂಟ) ಬಡಿಸಲಾಗಿದೆ.
ಪರಿಶಿಷ್ಟ ಜಾತಿ ಮೀಸಲಾತಿಯಡಿ ಕಾರ್ಯನಿರ್ವಹಿಸುತ್ತಿರುವ ಈ ವಸತಿ ಶಾಲೆಯಲ್ಲಿ ಕಳೆದ ಎರಡು ದಶಕಗಳಿಗೂ ಅಧಿಕ ಅವಧಿಯಿಂದ ಶಾಲಾ ಆವರಣದಲ್ಲಿ ಯಾವುದೇ ರೀತಿಯ ಮಾಂಸಾಹಾರ ತಯಾರಿಸಲು ಹಾಗೂ ಬಡಿಸಲು ಅವಕಾಶ ನೀಡಲಾಗಿರಲಿಲ್ಲ. ಪರಿಣಾಮವಾಗಿ ಸರ್ಕಾರದ ಆಹಾರ ಮೆನುವಿನಲ್ಲಿ ಮಾಂಸಾಹಾರಕ್ಕೆ ಅವಕಾಶ ಇದ್ದರೂ ವಿದ್ಯಾರ್ಥಿಗಳು ಅದರ ಸೌಲಭ್ಯದಿಂದ ವಂಚಿತರಾಗುತ್ತಿದ್ದರು.
ಈ ನಿಷೇಧದ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಮಾಂಸಾಹಾರ ಸೇವಿಸಲು ಅನಿವಾರ್ಯವಾಗಿ ಮನೆಗಳಿಂದಲೇ ಆಹಾರ ತಯಾರಿಸಿಕೊಂಡು ಬಂದು ಕೊಡಬೇಕಾಗುತ್ತಿತ್ತು. ಇದು ವಿದ್ಯಾರ್ಥಿಗಳ ಪೌಷ್ಟಿಕ ಆಹಾರದ ಹಕ್ಕಿಗೆ ಧಕ್ಕೆ ತರುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಕುರಿತು ಪ್ರಕಟವಾದ ವಿಶೇಷ ವರದಿಯ ಬಳಿಕ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ ಅವರು ವಸತಿ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಸರ್ಕಾರದ ಆಹಾರ ಮೆನುವಿನಲ್ಲಿ ನಿಗದಿಪಡಿಸಿರುವಂತೆ ವಿದ್ಯಾರ್ಥಿಗಳಿಗೆ ಚಿಕನ್ ಸೇರಿದಂತೆ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು.
ಅದರಂತೆ ಜುಲೈ 19ರಂದು ಭಾನುವಾರ ಶಾಲೆಯ ಅಡುಗೆಮನೆಯಲ್ಲಿ ಚಿಕನ್ ತಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಯಿತು. ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಬಾಡೂಟವನ್ನು ವಿದ್ಯಾರ್ಥಿಗಳು ಸಂತೋಷದಿಂದ ಸವಿದರು ಎಂದು ತಿಳಿದುಬಂದಿದೆ.
"ಮಕ್ಕಳ ಆಹಾರದ ಹಕ್ಕು ಕಸಿದುಕೊಳ್ಳುವುದು ಸರಿಯಲ್ಲ"
ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿಯ ಪಾಲಕರಾದ ಜಯಪ್ಪ, "ವಸತಿ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದ ಮೌಢ್ಯಕ್ಕೆ ಈಗ ಬ್ರೇಕ್ ಬಿದ್ದಿದೆ. ಮೌಢ್ಯ ನಂಬಿಕೆಗಳ ಹೆಸರಿನಲ್ಲಿ ಮಕ್ಕಳ ಪೌಷ್ಟಿಕ ಆಹಾರದ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ಸರ್ಕಾರದ ಮೆನು ಪ್ರಕಾರ ಭಾನುವಾರದಿಂದ ಬಾಡೂಟ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಇದನ್ನು ಮುಂದೆಯೂ ನಿರಂತರವಾಗಿ ಮುಂದುವರಿಸಬೇಕು," ಎಂದು ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಆಹಾರ ಮೆನುವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯುವಂತಾಗಿರುವುದು ಪಾಲಕರು ಹಾಗೂ ಸ್ಥಳೀಯರಿಂದ ಸ್ವಾಗತಾರ್ಹ ಕ್ರಮವೆಂದು ಪರಿಗಣಿಸಲಾಗಿದೆ.
A break from 20 years of ignorance: For the first time, children at Morarji Desai Residential School are served chicken meals
