ಗೋಪಿ ವೃತ್ತದ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್ ಮರ-A huge tree fell across the road near Gopi Circle.

 SUDDILIVE || SHIVAMOGGA

ಗೋಪಿ ವೃತ್ತದ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್ ಮರ-A huge tree fell across the road near Gopi Circle.   

Tree, fall

ಶಿವಮೊಗ್ಗ: ನಗರದ ಗೋಪಿ ವೃತ್ತದ ಸಮೀಪದ ಸವಾರ್‌ಲೈನ್ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ಇದ್ದಕ್ಕಿದ್ದಂತೆ ಬುಡಮೇಲಾಗಿ ರಸ್ತೆಗೆ ಉರುಳಿದ್ದು, ಬೆಳ್ಳಂಬೆಳಿಗ್ಗೆ ಇದನ್ನ ಮಹಾನಗರ ಪಾಲಿಕೆ ಸರಿಪಡಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಮರ ಬೀಳುವ ಕ್ಷಣದಲ್ಲೇ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಮರ ರಸ್ತೆ ಮಧ್ಯಭಾಗಕ್ಕೆ ಅಡ್ಡಲಾಗಿ ಬಿದ್ದ ಪರಿಣಾಮ ಸವಾರ್‌ಲೈನ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಗಿ ಸಂಚಾರ ದಟ್ಟಣೆ ಉಂಟಾಯಿತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಜೆಸಿಬಿ ಯಂತ್ರ ಹಾಗೂ ಕಟಿಂಗ್ ಯಂತ್ರಗಳ ಸಹಾಯದಿಂದ ಮರದ ಬೃಹತ್ ಕೊಂಬೆ ಮತ್ತು ರೆಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ.  ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಹಂತ ಹಂತವಾಗಿ ಪುನಃ ಆರಂಭಿಸಲಾಯಿತು.


ಸ್ಥಳೀಯರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸುರಿದ ಮಳೆ ಹಾಗೂ ಗಾಳಿಯಿಂದ ಮರದ ಬೇರು ಭಾಗ ದುರ್ಬಲಗೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಬಳಿಕ ರಸ್ತೆ ಬದಿಯಲ್ಲಿರುವ ಅಪಾಯಕಾರಿಯಾಗಿ ವಾಲಿರುವ ಮತ್ತು ಹಳೆಯ ಮರಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ತೆರವುಗೊಳಿಸುವಂತೆ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಆಗ್ರಹಿಸಿದ್ದಾರೆ. ಕಳೆದ ಕೆಲವು ಸಂದರ್ಭಗಳಲ್ಲಿಯೂ ಮಳೆಗಾಲದಲ್ಲಿ ಮರಗಳು ಧರೆಗುರುಳಿದ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

A huge tree fell across the road near Gopi Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close