ಸಿಎಂ ಡಿಕೆ ಶಿವಕುಮಾರ್ ಪಿಎ ಬಂಧನ-CM DK Shivakumar's PA arrested

SUDDILIVE || SHIVAMOGGA

ಸಿಎಂ ಡಿಕೆ ಶಿವಕುಮಾರ್ ಪಿಎ ಬಂಧನ-CM DK Shivakumar's PA arrested    

CM, PA

ಶಿವಮೊಗ್ಗ, ಜು. 29: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿ.ಎ.) ಎಂದು ಸುಳ್ಳು ಪರಿಚಯಿಸಿಕೊಂಡು ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ₹15 ಲಕ್ಷ ವಂಚನೆ ಎಸಗಿದ ಆರೋಪದಡಿ ದಾಖಲಾದ ಪ್ರಕರಣದಲ್ಲಿ ತುಂಗಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗದ ಕೆಎಚ್‌ಬಿ ಕಾಲೋನಿಯ ನಿವಾಸಿ ಹಾಗೂ ರೈತರಾದ ಮಂಜುನಾಥ ಹಂಜಿ ಅವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 504/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂಬಾತ ತಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿ.ಎ. ಎಂದು ಪರಿಚಯಿಸಿಕೊಂಡು, ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ದೂರುದಾರರಿಂದ ವಿವಿಧ ಹಂತಗಳಲ್ಲಿ ಒಟ್ಟು ₹15 ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ಶಿವಮೊಗ್ಗದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಹಾಗೂ ವಡ್ಡಿನಕೊಪ್ಪದಲ್ಲಿಯೂ ನಗದು ರೂಪದಲ್ಲಿ ಹಣ ಸ್ವೀಕರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಲೈಸೆನ್ಸ್ ಕೊಡಿಸದೇ ಹಣದೊಂದಿಗೆ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಂಚನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆಹಾಕಲು ಹಾಗೂ ಇದೇ ರೀತಿಯಲ್ಲಿ ಇತರರಿಗೂ ವಂಚನೆ ನಡೆಸಿರುವ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

CM DK Shivakumar's PA arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close