SUDDILIVE || SHIVAMOGGA
ಮಳೆಯ ಅಭಾವದ ನಡುವೆಯೂ ಜೋಗಕ್ಕೆ ಜೀವಕಳೆ; ವಾರಾಂತ್ಯದಲ್ಲಿ 6 ಸಾವಿರ ಪ್ರವಾಸಿಗರ ದಂಡು-Despite the lack of rain, joga is a lifeline; 6,000 tourists flock to the trail over the weekend
ಸಾಗರ, ಜು. 5: ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಅಭಾವ ಮುಂದುವರಿದಿದ್ದರೂ, ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಮಳೆಗಾಲದ ಸೊಬಗು ನಿಧಾನವಾಗಿ ಮೆರೆಯತೊಡಗಿದೆ. ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಮುನ್ನವೇ ಜೋಗದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.
ಮಳೆಗಾಲ ಇನ್ನೂ ಸಂಪೂರ್ಣವಾಗಿ ಚುರುಕುಗೊಳ್ಳದಿದ್ದರೂ ವಾರಾಂತ್ಯದ ಹಿನ್ನೆಲೆಯಲ್ಲಿ ಜೋಗಕ್ಕೆ ಪ್ರವಾಸಿಗರ ದಂಡು ಹರಿದು ಬಂದಿದೆ. ಶನಿವಾರ ಸುಮಾರು 3,500 ಮಂದಿ ಭೇಟಿ ನೀಡಿದ್ದರೆ, ಭಾನುವಾರ ಈ ಸಂಖ್ಯೆ 6,000ಕ್ಕೆ ಏರಿಕೆಯಾಗಿದೆ. ಜೋಗದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಜಲಧಾರೆಗಳಲ್ಲಿ ಹರಿಯುತ್ತಿರುವ ನೀರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಆಗುಂಬೆ ಅತಿ ಹೆಚ್ಚು ಮಳೆ
ಇದೇ ವೇಳೆ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಭಾರೀ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 151 ಮಿ.ಮೀ. ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಪ್ರದೇಶವಾಗಿ ಆಗುಂಬೆ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದ 'ಚಿರಾಪುಂಜಿ' ಎಂದೇ ಪ್ರಸಿದ್ಧಿಯಾಗಿರುವ ಆಗುಂಬೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 150 ಮಿ.ಮೀ. ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 130 ಮಿ.ಮೀ., ಗೇರ್ಸೊಪ್ಪದಲ್ಲಿ 120 ಮಿ.ಮೀ., ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 110 ಮಿ.ಮೀ., ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ ಮತ್ತು ಶೃಂಗೇರಿ, ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ತಲಾ 90 ಮಿ.ಮೀ. ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನಾವರದಲ್ಲಿ 80 ಮಿ.ಮೀ., ಯಲ್ಲಾಪುರ, ಶಿರಸಿ, ಕುಮಟಾ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ತಲಾ 70 ಮಿ.ಮೀ. ಮಳೆಯಾಗಿದೆ.
ಇದೇ ರೀತಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಸಂಕೇಶ್ವರ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಸಿದ್ದಾಪುರ, ಉಡುಪಿ ಜಿಲ್ಲೆಯ ಕುಂದಾಪುರ, ಬೀದರ್ ಜಿಲ್ಲೆಯ ಔರಾದ್, ಕೊಡಗು ಜಿಲ್ಲೆಯ ಭಾಗಮಂಡಲ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ತಲಾ 50 ರಿಂದ 60 ಮಿ.ಮೀ. ಮಳೆಯಾಗಿದೆ.
ಆಗುಂಬೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶರಾವತಿ ಕಣಿವೆಯ ಜಲಾನಯನ ಪ್ರದೇಶಕ್ಕೂ ಹೆಚ್ಚಿನ ನೀರು ಹರಿದುಬರುವ ನಿರೀಕ್ಷೆ ಮೂಡಿದ್ದು, ಮುಂದಿನ ದಿನಗಳಲ್ಲಿ ಜೋಗ ಜಲಪಾತದ ವೈಭವ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
