SUDDILIVE || RIPPONPETE
ಬಸ್ ನಿಲ್ದಾಣದಲ್ಲಿ ಪತ್ತೆಯಾದ ನವಜಾತ ಶಿಶು-Parents leave newborn baby with milk bottle at bus stop
ಜುಲೈ 6: ಕರುಳು ಹಿಂಡುವ ಘಟನೆಯೊಂದರಲ್ಲಿ ಸುಮಾರು 10 ರಿಂದ 15 ದಿನಗಳ ಪ್ರಾಯದ ನವಜಾತ ಹೆಣ್ಣು ಶಿಶುವನ್ನು ಕೈಚೀಲದಲ್ಲಿ ಹಾಕಿ, ಜೊತೆಗೆ ಹಾಲಿನ ಬಾಟಲಿಯನ್ನಿಟ್ಟು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಹೋದ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿ ನಡೆದಿದೆ.
ಅಪರಿಚಿತರು ನವಜಾತ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೈಚೀಲವೊಂದರಲ್ಲಿ ಇರಿಸಿ, ಗವಟೂರು ಹೊಳೆ ಸಮೀಪದ ನಿರ್ಜನ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿದ್ದಾರೆ. ಮಗುವಿನೊಂದಿಗೆ ಒಂದು ಹಾಲಿನ ಬಾಟಲಿಯನ್ನೂ ಇಟ್ಟು ಹೋಗಿರುವುದು ಕಂಡುಬಂದಿದೆ.
ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾಸಿಸುವ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ಅನುಮಾನಗೊಂಡು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೈಚೀಲದಲ್ಲಿದ್ದ ನವಜಾತ ಶಿಶು ಪತ್ತೆಯಾಗಿದ್ದು, ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸುಮಾರು 1.6 ಕೆ.ಜಿ. ತೂಕವಿರುವ ಮಗು ಆರೋಗ್ಯವಾಗಿದ್ದು, ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ಆರೈಕೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆ ಮತ್ತು ಪಾಲನೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಗುವನ್ನು ಯಾರು, ಯಾವ ಕಾರಣಕ್ಕಾಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಿಪ್ಪನ್‌ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದು, ಮಗುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
Parents leave newborn baby with milk bottle at bus stop

