SUDDILIVE || SHIVAMOGGA
ಶಿವಮೊಗ್ಗ ನಗರಾದ್ಯಂತ ಪೊಲೀಸ್ ಹೈ ಅಲರ್ಟ್-Police on high alert across Shivamogga city
ಶಿವಮೊಗ್ಗ: ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ನಗರ ಪೊಲೀಸ್ ಇಲಾಖೆ ನಗರಾದ್ಯಂತ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಗರದ ಪ್ರಮುಖ ರಸ್ತೆ, ಪ್ರವೇಶ ದ್ವಾರಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಲಾಗುತ್ತಿದೆ.
ತಪಾಸಣೆ ವೇಳೆ ದ್ವಿಚಕ್ರ ವಾಹನಗಳು, ಕಾರುಗಳು, ಸರಕು ಸಾಗಣೆ ವಾಹನಗಳು ಸೇರಿದಂತೆ ವಿವಿಧ ವಾಹನಗಳನ್ನು ಪರಿಶೀಲಿಸಲಾಗುತ್ತಿದ್ದು, ವಾಹನಗಳ ದಾಖಲೆಗಳು, ಚಾಲಕರ ಗುರುತಿನ ಮಾಹಿತಿ ಹಾಗೂ ವಾಹನಗಳಲ್ಲಿ ಸಾಗಿಸಲಾಗುತ್ತಿರುವ ವಸ್ತುಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ.
ಇದರೊಂದಿಗೆ, ಯಾವುದೇ ಸಂಶಯಾಸ್ಪದ ವಸ್ತುಗಳು, ಸ್ಫೋಟಕ ಸಾಮಗ್ರಿಗಳು, ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಅಥವಾ ಕಾನೂನುಬಾಹಿರ ವಸ್ತುಗಳ ಸಾಗಾಟ ನಡೆಯದಂತೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಅಗತ್ಯವಿದ್ದಲ್ಲಿ ವಾಹನಗಳ ಡಿಕ್ಕಿ, ಬ್ಯಾಗ್ ಹಾಗೂ ಸರಕುಗಳನ್ನು ಪರಿಶೀಲಿಸಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ನಗರದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ವಿಶೇಷ ಕಾರ್ಯಾಚರಣೆ ಮುಂದುವರಿದಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಪೊಲೀಸ್ ಇಲಾಖೆಯ ಈ ಮುಂಜಾಗ್ರತಾ ಕ್ರಮಗಳು ನಗರದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರು ತಪಾಸಣೆ ವೇಳೆ ಪೊಲೀಸರಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

