ಕೋಣಂದೂರು ಖಾಸಗಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಅಸ್ವಸ್ಥತೆ: ಆತಂಕ ಬೇಡ ಎಂದ್ರು ಡಿಹೆಚ್ ಒ-Students unwell at Konandur private residential school: No need to worry, says DHO

SUDDILIVE || SHIVAMOGGA

ಕೋಣಂದೂರು ಖಾಸಗಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಅಸ್ವಸ್ಥತೆ: ಆತಂಕ ಬೇಡ ಎಂದ್ರು ಡಿಹೆಚ್ ಒ-Students unwell at Konandur private residential school: No need to worry, says DHO

Unwell, student

ತೀರ್ಥಹಳ್ಳಿ, ಜುಲೈ 25: ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ನ್ಯಾಷನಲ್ ರೆಸಿಡೆನ್ಸಿ ಶಾಲೆಯಲ್ಲಿ (National Residential School, Konandur) ಸುಮಾರು 30 ರಿಂದ 40 ವಿದ್ಯಾರ್ಥಿಗಳಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಂಟಾಗಿದ್ದ ಆತಂಕದ ನಡುವೆಯೇ, ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಇದೀಗ ಸಂಪೂರ್ಣ ನಿಯಂತ್ರಣದಲ್ಲಿದ್ದು, ಬಹುತೇಕ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ.ನಟರಾಜ್ ಸ್ಪಷ್ಟಪಡಿಸಿದ್ದಾರೆ.

ಘಟನೆಯ ವಿವರಗಳು: ಗುರುವಾರ ಸಂಜೆಯಿಂದ ವಿದ್ಯಾರ್ಥಿಗಳಲ್ಲಿ ವಾಂತಿ ಮತ್ತು ಭೇದಿ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಅಧಿಕಾರಿಗಳ ಮಾಹಿತಿ ಪ್ರಕಾರ, ಮೊದಲು ಸುಮಾರು ಏಳೆಂಟು ವಿದ್ಯಾರ್ಥಿಗಳಲ್ಲಿ ಈ ಲಕ್ಷಣಗಳು ಕಂಡುಬಂದವು. ಬಳಿಕ ಶುಕ್ರವಾರವೂ ಇನ್ನೂ ಕೆಲ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿತ್ತು. 

ಆದರೆ, ಒಟ್ಟಾರೆ ಸುಮಾರು 30 ರಿಂದ 40 ವಿದ್ಯಾರ್ಥಿಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಕೋಣಂದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿ ಆಸ್ಪತ್ರೆಗೆ ಮತ್ತು ಅಲ್ಲಿಂದ ಶಿವಮೊಗ್ಗ ಜಿಲ್ಲಾ ಮೆಗನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅಧಿಕಾರಿಗಳ ಭೇಟಿ ಮತ್ತು ಚಿಕಿತ್ಸೆ:

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ, ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಸೇರಿದಂತೆ ಆರೋಗ್ಯ ಇಲಾಖೆಯ ತಂಡ ರಾತ್ರಿ ವೇಳೆಯೇ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲನೆ ನಡೆಸಿದೆ. ಹೆಚ್ಚಿನ ವಿದ್ಯಾರ್ಥಿಗಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಕೇವಲ ಇಬ್ಬರು ವಿದ್ಯಾರ್ಥಿಗಳು ಸ್ವಲ್ಪ ಅಸ್ವಸ್ಥವಾಗಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಐಸಿಯುನಲ್ಲಿ ನಿಗಾ ವಹಿಸಲಾಗಿದೆ. ಈಗ ಅವರೆಲ್ಲಾ ಗುಣಮುಖರಾಗುತ್ತಿದ್ದಾರೆ.  ಅವರ ಆರೋಗ್ಯದಲ್ಲಿಯೂ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೊರಗಿನಿಂದ ತರಲಾಗುವ ಆಹಾರದ ಮೇಲೂ ನಿಗಾ

ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಸುಮಾರು 700 ರಿಂದ 750 ವಿದ್ಯಾರ್ಥಿಗಳಿಗೆ ಆಹಾರ ಸಿದ್ಧಪಡಿಸಲಾಗುತ್ತದೆ. ಚಪಾತಿ ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನು ಹಲವು ವರ್ಷಗಳಿಂದ ಹೊರಗಿನಿಂದ ಪೂರೈಸಲಾಗುತ್ತಿದೆ. ಕಳೆದ 28 ವರ್ಷಗಳಿಂದ ಇದೇ ವ್ಯವಸ್ಥೆ ಜಾರಿಯಲ್ಲಿದ್ದು, ಇದುವರೆಗೆ ಯಾವುದೇ ದೊಡ್ಡ ಸಮಸ್ಯೆ ಉಂಟಾಗಿರಲಿಲ್ಲ ಎಂದು ಶಾಲಾ ಆಡಳಿತ ತಿಳಿಸಿದೆ.

ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಿನಿಂದ ತರಲಾಗುವ ಆಹಾರವನ್ನು ತಾತ್ಕಾಲಿಕವಾಗಿ ತಪ್ಪಿಸುವಂತೆ ಸೂಚನೆ ನೀಡಲಾಗಿದೆ. ಹಸಿ ಪದಾರ್ಥಗಳು, ಮಜ್ಜಿಗೆ, ಕೋಸುಂಬರಿ ಸೇರಿದಂತೆ ಹಸಿ ಪದಾರ್ಥಗಳನ್ನ ಸೇವಿಸದಂತೆ ತಿಳಿಸಲಾಗಿದೆ. ಸುಲಭವಾಗಿ ಸೋಂಕು ತಗಲುವ ಸಾಧ್ಯತೆಯಿರುವ ಆಹಾರಗಳನ್ನು ಸದ್ಯಕ್ಕೆ ನೀಡದಂತೆ ಅಧಿಕಾರಿಗಳು ಶಾಲಾ ಆಡಳಿತಕ್ಕೆ ಸೂಚಿಸಿದ್ದಾರೆ.

ಆತಂಕ ಬೇಡ, ಪರಿಸ್ಥಿತಿ ನಿಯಂತ್ರಣದಲ್ಲಿ-ಡಿಹೆಚ್ ಒ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಟರಾಜ್  ಈಗಾಗಲೇ ಶಾಲೆಗೆ ಭೇಟಿ ನೀಡಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಪರೀಕ್ಷೆಯ ವರದಿ ಬಂದ ಬಳಿಕ ಅಸ್ವಸ್ಥತೆಗೆ ನಿಖರ ಕಾರಣ ಏನು ಎಂಬುದು ಸ್ಪಷ್ಟವಾಗಲಿದೆ. ಅಷ್ಟರವರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಡಿಹೆಚ್ ಒ ತಿಳಿಸಿದ್ದಾರೆ.

Students unwell at Konandur private residential school: No need to worry, says DHO

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close