ಶಿವಮೊಗ್ಗದಲ್ಲಿ ಮತ್ತೆ ರ್ಯಾಪಿಡೊ ವಿರುದ್ಧ ಕಾರ್ಯಾಚರಣೆ? ಆರ್‌ಟಿಒ ಪಾತ್ರದ ಕುರಿತು ಕುತೂಹಲ-Crackdown on Rapido in Shivamogga again? Curiosity surrounds the RTO's role

SUDDILIVE || SHIVAMOGGA

ಶಿವಮೊಗ್ಗದಲ್ಲಿ ಮತ್ತೆ ರ್ಯಾಪಿಡೊ ವಿರುದ್ಧ ಕಾರ್ಯಾಚರಣೆ? ಆರ್‌ಟಿಒ ಪಾತ್ರದ ಕುರಿತು ಕುತೂಹಲ-Crackdown on Rapido in Shivamogga again? Curiosity surrounds the RTO's role

Crackdown, rapido

Crackdown, raido

ಶಿವಮೊಗ್ಗ, ಆ.6: ಶಿವಮೊಗ್ಗ ನಗರದಲ್ಲಿ ರ‌್ಯಾಪಿಡೊ (Rapido) ದ್ವಿಚಕ್ರ ವಾಹನ ಸೇವೆ ನಡೆಸುತ್ತಿರುವ ಸವಾರರ ವಿರುದ್ಧ ಮತ್ತೆ ಕಾರ್ಯಾಚರಣೆ ನಡೆಯುತ್ತಿರುವುದು ಕಂಡುಬಂದಿದ್ದು, ಈ ಬಾರಿ ಆಟೋ ಚಾಲಕರೇ ರ‌್ಯಾಪಿಡೊ ವಾಹನಗಳನ್ನು ಪತ್ತೆಹಚ್ಚಿ ಆರ್‌ಟಿಒ ಅಧಿಕಾರಿಗಳಿಗೆ ಒಪ್ಪಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ಪ್ರಯಾಣಿಕರ ಹೆಸರಿನಲ್ಲಿ ರ‌್ಯಾಪಿಡೊ ಸೇವೆಯನ್ನು ಬುಕ್ ಮಾಡುವ ಕೆಲ ಆಟೋ ಚಾಲಕರು, ರ‌್ಯಾಪಿಡೊ ಸವಾರರು ನಿಗದಿತ ಸ್ಥಳಕ್ಕೆ ಬಂದ ತಕ್ಷಣ ವಾಹನದ ಕೀಗಳನ್ನು ಕಸಿದುಕೊಂಡು ಅವರನ್ನು ನೇರವಾಗಿ ಆರ್‌ಟಿಒ ಅಧಿಕಾರಿಗಳ ಬಳಿಗೆ ಕರೆದೊಯ್ಯುತ್ತಿರುವ ಘಟನೆಗಳು ನಡೆದಿವೆ ಎನ್ನಲಾಗಿದೆ. ಈ ಬೆಳವಣಿಗೆ ರ‌್ಯಾಪಿಡೊ ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಲವಾರು ರ‌್ಯಾಪಿಡೊ ದ್ವಿಚಕ್ರ ವಾಹನಗಳನ್ನು ತಡೆದು ಆರ್‌ಟಿಒ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ಕೆಲವು ಚಾಲಕರು ಹಲವು ಗಂಟೆಗಳ ಕಾಲ ಆರ್‌ಟಿಒ ಕಚೇರಿಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಈ ಬೆಳವಣಿಗೆಯಲ್ಲಿ ಆಟೋ ಚಾಲಕರ ಪಾತ್ರ ಮಾತ್ರವಲ್ಲದೆ, ಆರ್‌ಟಿಒ ಅಧಿಕಾರಿಗಳ ನಡೆ ಕೂಡ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಟೋ ಚಾಲಕರು ಬುಕ್ ಮಾಡಿ ವಾಹನಗಳನ್ನು ಹಿಡಿದು ಅಧಿಕಾರಿಗಳಿಗೆ ಒಪ್ಪಿಸುತ್ತಿರುವ ಕ್ರಮಕ್ಕೆ ಅಧಿಕೃತ ಮಾನ್ಯತೆ ಇದೆಯೇ? ಅಥವಾ ಇದು ಕೇವಲ ಆಟೋ ಚಾಲಕರ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯೇ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ನಗರದಲ್ಲಿ ಪ್ರಸ್ತುತ ಸುಮಾರು 400ಕ್ಕೂ ಹೆಚ್ಚು ರ‌್ಯಾಪಿಡೊ ವಾಹನಗಳು (ದ್ವಿಚಕ್ರ ವಾಹನಗಳು ಹಾಗೂ ಆಟೋ ಸೇವೆ ಸೇರಿ) ಕಾರ್ಯನಿರ್ವಹಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಇಂದಿನ ಕಾರ್ಯಾಚರಣೆಯಲ್ಲಿ 16ಕ್ಕೂ ಹೆಚ್ಚು ವಾಹನಗಳನ್ನು ಆರ್‌ಟಿಒ ಕಚೇರಿಗೆ ತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರ‌್ಯಾಪಿಡೊ ಸೇವೆ ಕುರಿತು ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಪರ-ವಿರೋಧ ಚರ್ಚೆಗಳು ನಡೆದಿದ್ದು, ಒಂದು ಕಡೆ ಕಡಿಮೆ ದರದಲ್ಲಿ ತ್ವರಿತ ಸಂಚಾರ ಸೌಲಭ್ಯ ದೊರೆಯುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದರೆ, ಮತ್ತೊಂದೆಡೆ ಆಟೋ ಚಾಲಕರು ತಮ್ಮ ಜೀವನೋಪಾಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ, ರ‌್ಯಾಪಿಡೊ ಸೇವೆ ಕಾನೂನುಬದ್ಧವಾಗಿದ್ದರೂ ಆಟೋ ಚಾಲಕರು ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಹಾಗೂ ಅದಕ್ಕೆ ಆರ್‌ಟಿಒ ಅಧಿಕಾರಿಗಳು ಸಹಕಾರ ನೀಡುತ್ತಿರುವ ಆರೋಪಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ. ಆದರೆ ಈ ಕುರಿತು ಆರ್‌ಟಿಒ ಇಲಾಖೆಯಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ.

Crackdown on Rapido in Shivamogga again? Curiosity surrounds the RTO's role

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close