SUDDILIVE || ANAVATTI
ಪ್ರೇಮ ಪ್ರಕರಣ ಹಿನ್ನೆಲೆ: ವಿಷ ಸೇವಿಸಿ ಯುವತಿ ಆತ್ಮಹತ್ಯೆ-Love affair background: Young woman commits suicide by consuming poison
ಜಿಲ್ಲೆಯ ಸೊರಬ ತಾಲೂಕು ಶಿದ್ದೇಹಳ್ಳಿ ಗ್ರಾಮದಲ್ಲಿ 20 ವರ್ಷದ ಯುವತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಅನುಷಾ (20) ಎಂದು ಗುರುತಿಸಲಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಅನುಷಾ ಅವರು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಮನೆಯಲ್ಲೇ ಇದ್ದರು. ಸುಮಾರು ಎರಡು ದಿನಗಳ ಹಿಂದೆ ಅವರು ವಿಷ ಸೇವಿಸಿದ್ದು, ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಮೃತಳ ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಇರಬಹುದೆಂಬ ಮಾಹಿತಿ ದೊರೆತಿದ್ದು, ಇದೇ ಗ್ರಾಮದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಆದರೆ ಯುವತಿಯ ಸಾವಿಗೆ ಸಂಬಂಧಿಸಿದಂತೆ ಯಾರ ಮೇಲೂ ಅನುಮಾನ ವ್ಯಕ್ತವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಯುವತಿ ಸ್ವತಃ ವಿಷ ಸೇವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಮೃತ ಅನುಷಾ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ರಸ್ತೆಯ ಶಿದ್ದೇಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಆನವಟ್ಟಿ ಪೊಲೀಸರು ಘಟನೆಯ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
Love affair background: Young woman commits suicide by consuming poison

