ಶಿವಮೊಗ್ಗದಲ್ಲಿ ನಿರುಪಯುಕ್ತ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರ-Police operation against useless vehicles intensified in Shivamogga

SUDDILIVE || SHIVAMOGGA

ಶಿವಮೊಗ್ಗದಲ್ಲಿ ನಿರುಪಯುಕ್ತ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರ-Police operation against useless vehicles intensified in Shivamogga    
Police, vehicle

Police, operation

Police, operation


ಶಿವಮೊಗ್ಗ: ನಗರದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನಿರುಪಯುಕ್ತವಾಗಿ ನಿಲ್ಲಿಸಲಾಗಿದ್ದ ವಾಹನಗಳ ವಿರುದ್ಧ ಶಿವಮೊಗ್ಗ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಇಂದು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಿದ್ದ ವಾಹನಗಳನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.

ನಗರದ ಅಶೋಕನಗರ 7ನೇ ರಸ್ತೆ, ಬೈಪಾಸ್ ರಸ್ತೆ, ಪ್ಯಾಷನ್ ಪಾರ್ಟ್ ಸಮೀಪ, ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾರಸುದಾರರಿಲ್ಲದೆ ಹಾಗೂ ಬಳಕೆಯಾಗದೆ ನಿಂತಿದ್ದ ಆಟೋ ರಿಕ್ಷಾಗಳು, ಮಾರುತಿ ಇಕೊ ಕಾರು ಸೇರಿದಂತೆ ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 82 ನಿರುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ 59 ವಾಹನಗಳಿಗೆ ನೋಟಿಸ್ ಅಂಟಿಸಲಾಗಿತ್ತು. ಬಳಿಕ ವಾಹನ ಮಾಲೀಕರಿಗೆ ಅವಕಾಶ ನೀಡಿದ ನಂತರವೂ ತೆರವುಗೊಳಿಸದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇದುವರೆಗೆ 68 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ರವೀಂದ್ರನಗರ, ಗುಂಡಪ್ಪಶೆಟ್ಟಿಹಳ್ಳಿ, ಲಕ್ಷ್ಮೀ ಚಿತ್ರಮಂದಿರ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಂದ ತೆರವುಗೊಳಿಸಲಾಗಿದೆ.

ಇನ್ನೂ ಉಳಿದಿದ್ದ 14 ವಾಹನಗಳ ಪೈಕಿ 8 ವಾಹನಗಳನ್ನು ಮಾಲೀಕರೇ ತೆರವುಗೊಳಿಸಿದ್ದು, ಉಳಿದ ವಾಹನಗಳ ವಿರುದ್ಧವೂ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ನಗರದ ರಸ್ತೆ ಬದಿಗಳಲ್ಲಿ ದೀರ್ಘಕಾಲ ನಿರುಪಯುಕ್ತವಾಗಿ ನಿಂತಿರುವ ವಾಹನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆ ಹಾಗೂ ಸುರಕ್ಷತಾ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಯಾವುದೇ ಭಾಗದಲ್ಲಿ ವಾರಸುದಾರರಿಲ್ಲದೆ ಅಥವಾ ದೀರ್ಘಕಾಲದಿಂದ ನಿರುಪಯುಕ್ತವಾಗಿ ನಿಂತಿರುವ ವಾಹನಗಳು ಕಂಡುಬಂದರೆ, ಸಾರ್ವಜನಿಕರು ಕೂಡಲೇ ಶಿವಮೊಗ್ಗ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Police operation against useless vehicles intensified in Shivamogga    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close