SUDDILIVE || SHIVAMOGGA
ಸಕ್ರೆಬೈಲ್–ಮಂಡಗದ್ದೆ ಮಾರ್ಗದಲ್ಲಿ ರಸ್ತೆ ಮೇಲೆ ಬಿದ್ದ ಬೃಹತ್ ಮರ: ವಾಹನ ಸವಾರರಿಗೆ ಆತಂಕ- Massive tree falls on the road along the Sakrebailu-Mandagadde route; motorists concerned
ಶಿವಮೊಗ್ಗ: ಸಕ್ರೆಬೈಲ್‌ನಿಂದ ಮಂಡಗದ್ದೆ ಕಡೆಗೆ ಸಾಗುವ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.
ಸಕ್ರೆಬೈಲ್‌ನಿಂದ ಸುಮಾರು 2ರಿಂದ 3 ಕಿಲೋಮೀಟರ್ ದೂರದಲ್ಲಿ, ಟರ್ನ್‌ಗೂ ಮುನ್ನ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮರದ ಒಂದು ಭಾಗ ರಸ್ತೆಯ ಮೇಲೆ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮರ ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಆದರೆ, ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಾಹನ ಸವಾರರೇ ಮರ ತೆರವುಗೊಳಿಸಲು ಮುಂದಾಗಿದ್ದಾರೆ. ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದರ ಸಹಾಯದಿಂದ ಮರಕ್ಕೆ ಹುಕ್ ಅಳವಡಿಸಿ ತೆರವುಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿದ್ದು, ರಸ್ತೆ ಮೇಲೆ ಬಿದ್ದಿರುವ ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಬೇಕಾಗಿದೆ. ಮರದ ಒಂದು ಭಾಗ ಇನ್ನೂ ರಸ್ತೆಯಲ್ಲಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಸಕ್ರೆಬೈಲ್–ಮಂಡಗದ್ದೆ ನಡುವಿನ ಈ ಮಾರ್ಗದಲ್ಲಿ ನದಿ ಸಮೀಪ ಹಾಗೂ ತಿರುವುಗಳಿರುವುದರಿಂದ ರಸ್ತೆ ಮೇಲೆ ಬಿದ್ದಿರುವ ಮರದಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
