SUDDILIVE || SHIVAMOGGA
ಪಾಟ್ನಾ ಮೃಗಾಲಯಕ್ಕೆ ಶಿವಮೊಗ್ಗದಿಂದ ಎರಡು ಕಾಡುಕೋಣಗಳ ಸಾಗಣೆ- Transportation of two Indian bison from Shivamogga to Patna Zoo
ಶಿವಮೊಗ್ಗ: ಪ್ರಾಣಿ ವಿನಿಮಯ ಯೋಜನೆಯಡಿ ಶಿವಮೊಗ್ಗ ಮೃಗಾಲಯದಿಂದ ಎರಡು ಕಾಡುಕೋಣಗಳನ್ನು ಪಾಟ್ನಾ ಮೃಗಾಲಯಕ್ಕೆ ಸಾಗಿಸಲಾಗುತ್ತಿದೆ. ಆಗಸ್ಟ್ 13ರಂದು ಶಿವಮೊಗ್ಗ ಮೃಗಾಲಯದ ತಂಡವು ಎರಡು ಕಾಡುಕೋಣಗಳೊಂದಿಗೆ ಪಾಟ್ನಾ ಮೃಗಾಲಯದತ್ತ ಪ್ರಯಾಣ ಆರಂಭಿಸಿದೆ.
ಸಾಗಣೆಗೆ ಮುನ್ನ ಎರಡೂ ಕಾಡುಕೋಣಗಳಿಗೆ ಸುಮಾರು ಒಂದು ತಿಂಗಳ ಕಾಲ ಕ್ರೇಟ್‌ನಲ್ಲಿ ಪ್ರಯಾಣಿಸುವ ಕುರಿತು ವಿಶೇಷ ತರಬೇತಿ ನೀಡಲಾಗಿತ್ತು. ತರಬೇತಿಯ ಪರಿಣಾಮವಾಗಿ ಎರಡೂ ಪ್ರಾಣಿಗಳು ಸಾಗಣೆಗೆ ಉತ್ತಮವಾಗಿ ಹೊಂದಿಕೊಂಡಿದ್ದು, ಶಾಂತವಾಗಿದ್ದವು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಯಸ್ಕ ಕಾಡುಕೋಣವನ್ನು ಕ್ರೇಟ್ ತರಬೇತಿಯೊಂದಿಗೆ ದೈಹಿಕ ನಿಯಂತ್ರಣದ ಮೂಲಕ ಸುರಕ್ಷಿತವಾಗಿ ಕ್ರೇಟ್‌ಗೆ ಸೇರಿಸಲಾಯಿತು. ಉಪವಯಸ್ಕ ಕಾಡುಕೋಣಕ್ಕೆ ಕ್ರೇಟ್ ತರಬೇತಿಯ ಜೊತೆಗೆ ರಾಸಾಯನಿಕ ನಿಯಂತ್ರಣ ವಿಧಾನವನ್ನು ಬಳಸಲಾಯಿತು. ಎರಡೂ ಕಾಡುಕೋಣಗಳ ನಿಯಂತ್ರಣ ಹಾಗೂ ಕ್ರೇಟ್‌ಗೆ ಸ್ಥಳಾಂತರಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಕಾರ್ಯಾಚರಣೆಯನ್ನು ಶಿವಮೊಗ್ಗ ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಶ್ರವಣ್ ಸಿಂಗ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. ಅವರ ನೇತೃತ್ವದಲ್ಲಿ ನಡೆದ ಇದು ಮೊದಲ ಕಾಡುಕೋಣ ಸಾಗಣೆ ಯೋಜನೆಯಾಗಿದೆ.
ಎರಡು ಕಾಡುಕೋಣಗಳಿಗೆ ಬದಲಾಗಿ 12 ಪ್ರಾಣಿಗಳು
ಪ್ರಾಣಿ ವಿನಿಮಯ ಯೋಜನೆಯಡಿ ಶಿವuಮೊಗ್ಗ ಮೃಗಾಲಯದಿಂದ ಪಾಟ್ನಾ ಮೃಗಾಲಯಕ್ಕೆ ನೀಡಲಾಗುತ್ತಿರುವ ಎರಡು ಕಾಡುಕೋಣಗಳಿಗೆ ಬದಲಾಗಿ ಒಟ್ಟು 8 ತೋಳಗಳು ಹಾಗೂ 4 ಘರಿಯಾಲ್‌ಗಳನ್ನು(ಮೊಸಳೆ ಜಾತಿ ಪ್ರಬೇಧ) ಶಿವಮೊಗ್ಗ ಮೃಗಾಲಯ ಪಡೆಯಲಿದೆ.
8 ತೋಳಗಳಲ್ಲಿ 3 ಗಂಡು ಮತ್ತು 5 ಹೆಣ್ಣು ತೋಳಗಳು ಹಾಗೂ 4 ಘರಿಯಾಲ್‌ಗಳಲ್ಲಿ 2 ಗಂಡು ಮತ್ತು 2 ಹೆಣ್ಣು ಘರಿಯಾಲ್‌ಗಳು ಇರಲಿವೆ. ಈ ವಿನಿಮಯದಿಂದ ಶಿವಮೊಗ್ಗ ಮೃಗಾಲಯದ ಪ್ರಾಣಿ ವೈವಿಧ್ಯ ಮತ್ತಷ್ಟು ಹೆಚ್ಚಲಿದೆ.
ಶಿವಮೊಗ್ಗ ಮೃಗಾಲಯದಿಂದ ಇದು ಎರಡನೇ ಕಾಡುಕೋಣ ಸಾಗಣೆ
ಶಿವಮೊಗ್ಗ ಮೃಗಾಲಯದಿಂದ ಕಾಡುಕೋಣಗಳನ್ನು ಬೇರೆ ಮೃಗಾಲಯಕ್ಕೆ ಸಾಗಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಾಣಿ ವಿನಿಮಯ ಯೋಜನೆಯಡಿ ಶಿವಮೊಗ್ಗ ಮೃಗಾಲಯದಿಂದ ಇಂದೋರ್ ಮೃಗಾಲಯಕ್ಕೆ ಕಾಡುಕೋಣಗಳನ್ನು ಸಾಗಿಸಲಾಗಿತ್ತು.
ಇದೀಗ ಎರಡನೇ ಹಂತದಲ್ಲಿ ಎರಡು ಕಾಡುಕೋಣಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರತಿಯಾಗಿ ತೋಳಗಳು ಮತ್ತು ಘರಿಯಾಲ್‌ಗಳನ್ನು ಪಡೆಯಲಾಗುತ್ತಿದೆ. ಸುರಕ್ಷಿತ ಸಾಗಣೆಗಾಗಿ ಮುಂಚಿತವಾಗಿ ನೀಡಲಾದ ಕ್ರೇಟ್ ತರಬೇತಿ ಹಾಗೂ ತಜ್ಞರ ಮೇಲ್ವಿಚಾರಣೆ ಕಾರ್ಯಾಚರಣೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
