SUDDILIVE || SHIKARIPURA
ಗಣೇಶ ಮೆರವಣಿಗೆ ವೇಳೆ ಡಿಜೆ ಬಳಕೆ: ಇಬ್ಬರ ವಿರುದ್ದ ಪ್ರಕರಣ ದಾಖಲು-DJ used during Ganesh procession: Case registered against two
ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಕೆಗೆ ವಿಧಿಸಲಾಗಿರುವ ನಿರ್ಬಂಧದ ನಡುವೆಯೂ ಡಿಜೆ ಬಳಸಿದ ಆರೋಪದ ಮೇರೆಗೆ ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದ ಇಬ್ಬರ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿತ್ತಲ ಗ್ರಾಮದ ಶ್ರೀ ಮಾರಿಕಾಂಬ ಧರ್ಮದರ್ಶಿ ಸಮಿತಿ ವತಿಯಿಂದ ಸೆ.26ರಂದು ನಡೆದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಆರ್. ಪಾಟೀಲ್ ಅವರು ದಾಖಲಿಸಿರುವ ವರದಿ ಪ್ರಕಾರ, ಗಣೇಶ ವಿಸರ್ಜನೆ ಬಂದೋಬಸ್ತ್ ಕರ್ತವ್ಯಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ಹಿತ್ತಲ ಗ್ರಾಮಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನೀಡಿದ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ವರದಿ ಪ್ರಕಾರ, ಹಿತ್ತಲ ಗ್ರಾಮದ ಪುಟ್ಟಸ್ವಾಮಿ (52) ಎಂಬುವರಿಗೆ ಸೇರಿದ KA-15-TB-3257 ಸಂಖ್ಯೆಯ ಮಹೀಂದ್ರಾ ಟ್ರ್ಯಾಕ್ಟರ್‌ನಲ್ಲಿ ಅದಿತಿ ಸೌಂಡ್ಸ್ ಸಿಸ್ಟಮ್ ಅಳವಡಿಸಲಾಗಿತ್ತು. ಅದಿತಿ ಸೌಂಡ್ಸ್ ಸಿಸ್ಟಮ್‌ನ ಮಾಲೀಕ ಶಿವಕುಮಾರ್ (55) ಅವರು ಡಿಜೆ ಸೌಂಡ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇವರಿಬ್ವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಲಾಗಿದೆ.
ಗಣೇಶ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸಿರುವುದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಿ ಹೊರಡಿಸಿರುವ ಆದೇಶಕ್ಕೆ ವಿರುದ್ಧವಾಗಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಸೆ.26ರಂದು ರಾತ್ರಿ ಸುಮಾರು 10 ಗಂಟೆಯಿಂದ 11.30ರವರೆಗೆ ಡಿಜೆ ಸೌಂಡ್ ಸಿಸ್ಟಮ್ ಬಂದ್ ಮಾಡದೆ, ಸುಪ್ರೀಂ ಕೋರ್ಟ್‌ನ ಶಬ್ದಮಾಲಿನ್ಯಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿ, 105 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇದರಿಂದ ಹಿತ್ತಲ ಗ್ರಾಮದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರದಿಯಲ್ಲಿ, ಆರೋಪಿತರು ಜಿಲ್ಲಾಧಿಕಾರಿಗಳ ಆದೇಶ, ಶಿಕಾರಿಪುರ ತಾಲ್ಲೂಕು ದಂಡಾಧಿಕಾರಿಗಳು ನೀಡಿರುವ ಅನುಮತಿ ಪತ್ರದಲ್ಲಿನ ಷರತ್ತುಗಳು ಹಾಗೂ ಶಬ್ದಮಾಲಿನ್ಯಕ್ಕೆ ಸಂಬಂಧಿಸಿದ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಮುಂದೆಯೂ ಇದೇ ರೀತಿಯ ಕೃತ್ಯಗಳು ನಡೆಯುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿತರಿಂದ ಉತ್ತಮ ನಡವಳಿಕೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಮೊತ್ತದ ಬಾಂಡ್ ಪಡೆಯುವಂತೆ ಪೊಲೀಸರು ಕೋರಿದ್ದಾರೆ.
ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ PAR No.44/2025, BNSS ಕಲಂ 126 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
