SUDDILIVE || SHIVAMOGGA
ಸೆ.24ರಿಂದ ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್‌ಸ್ಥಾಪನೆಗೆ ಅಂಚೆಕಾರ್ಡ್ ಚಳವಳಿ-Anchecard movement for the restoration of Hosnagar Assembly Constituency from September 24
ಶಿವಮೊಗ್ಗ: ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಸೇರಿದಂತೆ ಹೊಸನಗರ ತಾಲ್ಲೂಕಿನ ವಿವಿಧ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಅಗತ್ಯವಿದೆ ಎಂದು ಆಗ್ರಹಿಸಿ, ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್‌ಸ್ಥಾಪಿಸುವಂತೆ ಸರ್ಕಾರದ ಗಮನ ಸೆಳೆಯಲು ಸೆ.24ರಿಂದ ಅಂಚೆಕಾರ್ಡ್ ಚಳವಳಿ ಆರಂಭಿಸಲಾಗುವುದು ಎಂದು ಹೊಸನಗರ ತಾಲ್ಲೂಕು ಸರ್ವೋದಯ ಮಂಡಳದ ಅಧ್ಯಕ್ಷ ಎಸ್.ಆರ್. ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1952ರ ಸಾರ್ವತ್ರಿಕ ಚುನಾವಣೆಯಿಂದ ಹೊಸನಗರ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವದಲ್ಲಿತ್ತು. 2008ರ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಸಂದರ್ಭದಲ್ಲಿ ಕ್ಷೇತ್ರ ರದ್ದುಗೊಂಡಿದ್ದು, 2004ರ ವಿಧಾನಸಭಾ ಚುನಾವಣೆಯೇ ಹೊಸನಗರ ಕ್ಷೇತ್ರದ ಕೊನೆಯ ಚುನಾವಣೆಯಾಗಿತ್ತು ಎಂದು ವಿವರಿಸಿದರು.
ಪುನರ್ವಿಂಗಡಣೆ ಬಳಿಕ ಹೊಸನಗರ ತಾಲ್ಲೂಕಿನ ಬಹುತೇಕ ಪ್ರದೇಶಗಳು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಕೆಲವು ಗಡಿ ಪ್ರದೇಶಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಪರಿಣಾಮವಾಗಿ ತಾಲ್ಲೂಕು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದ್ದು, ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಲ್ಲಿ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.
ಹೊಸನಗರಕ್ಕೆ ಪ್ರತ್ಯೇಕ ಶಾಸಕರಿಲ್ಲದ ಹಿನ್ನೆಲೆಯಲ್ಲಿ ತಾಲ್ಲೂಕಿನ ಜನರ ಸಮಸ್ಯೆಗಳು ವಿಧಾನಸಭೆಯಲ್ಲಿ ನೇರವಾಗಿ ಹಾಗೂ ಪರಿಣಾಮಕಾರಿಯಾಗಿ ಪ್ರತಿಧ್ವನಿಸುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ. ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳ ಪ್ರಮುಖ ಕೇಂದ್ರಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದ್ದು, ಹೊಸನಗರ ತಾಲ್ಲೂಕಿನ ಪ್ರದೇಶಗಳಿಗೆ ನಿರೀಕ್ಷಿತ ಮಟ್ಟದ ಗಮನ ಹಾಗೂ ಅನುದಾನ ಸಿಗುತ್ತಿಲ್ಲ ಎಂದು ವಿಶ್ವೇಶ್ವರಯ್ಯ ಆರೋಪಿಸಿದರು.
ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಪ್ರತ್ಯೇಕ ರಾಜಕೀಯ ಪ್ರತಿನಿಧಿತ್ವ ಅಗತ್ಯ
ಶರಾವತಿ ಮತ್ತು ವಾರಾಹಿ ಹಿನ್ನೀರಿನ ಮುಳುಗಡೆ ಸಂತ್ರಸ್ತರ ಭೂಹಕ್ಕು ಮತ್ತು ಹಕ್ಕುಪತ್ರ ಸಮಸ್ಯೆ, ಕಸ್ತೂರಿರಂಗನ್ ವರದಿ, ಅರಣ್ಯ ಹಕ್ಕು ಕಾಯ್ದೆ, ಹಿನ್ನೀರಿನ ಪ್ರದೇಶಗಳಿಗೆ ಸೇತುವೆ, ಲಾಂಚ್ ಹಾಗೂ ಒಳನಾಡು ರಸ್ತೆ ಸಂಪರ್ಕ ಸೇರಿದಂತೆ ಹಲವು ಸಮಸ್ಯೆಗಳು ಹೊಸನಗರ ತಾಲ್ಲೂಕಿನಲ್ಲಿ ದೀರ್ಘಕಾಲದಿಂದ ಇವೆ. ಇವುಗಳ ಪರಿಹಾರಕ್ಕೆ ಪ್ರತ್ಯೇಕ ರಾಜಕೀಯ ಪ್ರತಿನಿಧಿತ್ವ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಎಲ್ಲ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಸೆ.24ರಿಂದ ತಾಲ್ಲೂಕಿನಾದ್ಯಂತ ಅಂಚೆಕಾರ್ಡ್ ಚಳವಳಿ ನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಚಳವಳಿಯಲ್ಲಿ ಪಾಲ್ಗೊಂಡು, ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನಃ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವೋದಯ ಮಂಡಳದ ಸಲಹಾ ಸಮಿತಿಯ ಮುಖ್ಯಸ್ಥ ಎಂ.ಎನ್. ಸುಂದರ್ ರಾಜ್, ಜಿಲ್ಲಾ ಅಧ್ಯಕ್ಷ ಆರ್. ಮನೋಹರ್, ಗೌರವಾಧ್ಯಕ್ಷ ಬಸವರಾಜಪ್ಪ ಪರಪ್ಪ ಕಂದಗಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ಜಿ. ವಿಜಯಕುಮಾರ್ ಉಪಸ್ಥಿತರಿದ್ದರು.
