ಜಾತಿ ನಿಂದನೆ ಆರೋಪ: ಸುಂದರೇಶ್ ಕ್ಷಮೆ ಕೇಳಬೇಕು; ಆರ್. ಪ್ರಸನ್ನಕುಮಾರ್ ಆಗ್ರಹ- Caste abuse allegation: Sundaresh must apologise; R. Prasannakumar Agraha

SUDDILIVE || SHIVAMOGGA

ಜಾತಿ ನಿಂದನೆ ಆರೋಪ: ಸುಂದರೇಶ್ ಕ್ಷಮೆ ಕೇಳಬೇಕು; ಆರ್. ಪ್ರಸನ್ನಕುಮಾರ್ ಆಗ್ರಹ- Caste abuse allegation: Sundaresh must apologise; R. Prasannakumar Agraha  
Caste, abuse


ಶಿವಮೊಗ್ಗ:
ವೈಯಕ್ತಿಕ ಟೀಕೆಗಳಿಗೆ ಪಕ್ಷದ ವೇದಿಕೆಯಲ್ಲಿ ಉತ್ತರ ನೀಡಲು ಸಿದ್ಧನಿದ್ದೇನೆ. ಆದರೆ ನನ್ನ ಜಾತಿಯನ್ನು ಉಲ್ಲೇಖಿಸಿ ಅವಹೇಳನಕಾರಿ ಪದ ಬಳಸಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಅವರು ತಮ್ಮ ಹಾಗೂ ಇಡೀ ಸಮಾಜದ ಕ್ಷಮೆ ಕೇಳಬೇಕು ಎಂದು ಮಾಜಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನನ್ನ ವಿಚಾರವಾಗಿ ಏನೇ ಟೀಕೆ ಮಾಡಲಿ, ಅದಕ್ಕೆ ಪಕ್ಷದೊಳಗೆ ಉತ್ತರ ಕೊಡುತ್ತೇನೆ. ಆದರೆ ನನ್ನ ಜಾತಿಯ ಹೆಸರನ್ನು ಹಿಡಿದು ಮಾತನಾಡುವ ಅಗತ್ಯ ಇರಲಿಲ್ಲ. ‘ದಡ್ಡ ಕುರುಬ’ ಎಂದು ಮಾತನಾಡಿರುವುದಕ್ಕೆ ಅವರು ಕ್ಷಮೆ ಕೇಳಬೇಕು. ನಮ್ಮ ಇಡೀ ಸಮಾಜದ ಕ್ಷಮೆಯನ್ನೂ ಕೇಳಬೇಕು” ಎಂದು ಒತ್ತಾಯಿಸಿದರು.

ಸುಂದರೇಶ್ ಅವರು ತಮ್ಮ ಸ್ನೇಹಿತರಾಗಿದ್ದರೂ, ಇತ್ತೀಚೆಗೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪ್ರಸನ್ನಕುಮಾರ್ ಹೇಳಿದರು. ಜಾತಿಯ ವಿಚಾರವನ್ನು ರಾಜಕೀಯ ಚರ್ಚೆಗೆ ತರುವುದು ಸರಿಯಾದ ಕ್ರಮವಲ್ಲ ಎಂದ ಅವರು, ಎಲ್ಲಾ ಸಮುದಾಯಗಳಿಗೂ ಗೌರವ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರ ವಿಚಾರದಲ್ಲಿ ಸ್ಪಷ್ಟನೆ

ತಾವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಿಲ್ಲೆಯ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ತಮ್ಮ ಕರ್ತವ್ಯವಾಗಿತ್ತು ಎಂದು ಪ್ರಸನ್ನಕುಮಾರ್ ಸ್ಪಷ್ಟಪಡಿಸಿದರು.

“ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಜಿಲ್ಲೆಯ ಸಮಸ್ಯೆಗಳು ಹಾಗೂ ಪಕ್ಷದ ವಿಚಾರಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ತರುವುದು ನನ್ನ ಕರ್ತವ್ಯ. ನಾನು ಹಲವು ಬಾರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಆದರೆ ಅವರು ನಾನು ಹೇಳಿದಂತೆ ಕೇಳುತ್ತಿದ್ದರು ಎನ್ನುವುದು ಸರಿಯಲ್ಲ. ಅವರು ಸರ್ಕಾರದ ಸಚಿವರು. ಸೂಕ್ತವಾದುದನ್ನು ನಿರ್ಧರಿಸುವ ಅಧಿಕಾರ ಅವರಿಗಿದೆ” ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ವ್ಯವಸ್ಥೆ ಇದೆ. ಎಐಸಿಸಿ ವೀಕ್ಷಕರು ಸೇರಿದಂತೆ ಪಕ್ಷದ ವಿವಿಧ ಹಂತದ ನಾಯಕರು ಜಿಲ್ಲೆಗೆ ಬಂದು ಪಕ್ಷದ ವಿಚಾರಗಳನ್ನು ನಿರ್ವಹಿಸುವ ವ್ಯವಸ್ಥೆಯಿದೆ. ಅದನ್ನು ಟೀಕಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

SUDA, KUDA ಬಗ್ಗೆ ಹೇಳಿಕೆಗೂ ತಿರುಗೇಟು

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಇತರ ಸಂಸ್ಥೆಗಳ ಬಗ್ಗೆ ‘ಕಿತ್ತೋಗಿರುವ ಸಂಸ್ಥೆಗಳು’ ಎಂಬ ರೀತಿಯಲ್ಲಿ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್, ಇದೇ ಸಂಸ್ಥೆಗಳಲ್ಲಿ ಅಧಿಕಾರ ಅನುಭವಿಸಿದವರು ಈಗ ಅವುಗಳ ಬಗ್ಗೆ ಅಂತಹ ಹೇಳಿಕೆ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

“ಇಷ್ಟು ದಿನ ಆ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಇದ್ದವರು, ಸಂಸ್ಥೆ ಸರಿಯಿಲ್ಲ ಎಂದಾದರೆ ಅಲ್ಲಿ ಏಕೆ ಮುಂದುವರಿದಿದ್ದರು? ಸಂಸ್ಥೆಯ ಬಗ್ಗೆ ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆ ನೀಡುವುದರಿಂದ ಸಂಸ್ಥೆಗಳ ಗೌರವಕ್ಕೆ ಧಕ್ಕೆ ಬರುತ್ತದೆ” ಎಂದು ಹೇಳಿದರು.

ಪಕ್ಷದ ನಾಯಕರಿಗೆ ಗೌರವ ನೀಡಬೇಕು

ರಾಷ್ಟ್ರೀಯ ಯುವ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಂತಹ ಜವಾಬ್ದಾರಿ ಸ್ಥಾನದಲ್ಲಿರುವ ನಾಯಕರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಬಾರದು ಎಂದು ಪ್ರಸನ್ನಕುಮಾರ್ ಹೇಳಿದರು.

ಅದೇ ರೀತಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಇರುವವರಿಗೆ ಅವರು ಹೊಂದಿರುವ ಜವಾಬ್ದಾರಿಗೆ ಅನುಗುಣವಾಗಿ ಗೌರವ ನೀಡಬೇಕು ಎಂದರು.

‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಭಿನ್ನಾಭಿಪ್ರಾಯವೇ?’

ಸುಂದರೇಶ್ ಅವರ ಇತ್ತೀಚಿನ ಹೇಳಿಕೆಗಳ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್, ತಮ್ಮ ಅವಧಿಯವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳು ಬರುತ್ತಿವೆ ಎಂದು ಹೇಳಿದರು.

“ನನ್ನ ಕಾಲದವರೆಗೂ ಏನೂ ಮಾತನಾಡಲಿಲ್ಲ. ಯೋಗೇಶ್ ಅವರಿಗೆ ಸ್ಥಾನ ಸಿಕ್ಕಿತು, ನನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಇವೆಲ್ಲ ಆರಂಭವಾಗಿದೆ” ಎಂಬ ಹೇಳಿಕೆಗಳು ಬರುತ್ತಿವೆ ಎಂದು ಅವರು ತಿಳಿಸಿದರು.

‘₹25 ಲಕ್ಷ ಬೇಡಿಕೆ’ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ

ಮಾಧ್ಯಮ ಪ್ರತಿನಿಧಿಗಳು ಪಕ್ಷದೊಳಗಿನ ಕೆಲವರ ವಿರುದ್ಧ ಹಣದ ಬೇಡಿಕೆ ಹಾಗೂ ವಸೂಲಿ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ, ಅಂತಹ ಆರೋಪಗಳ ಬಗ್ಗೆ ತಮಗೆ ನೇರ ಮಾಹಿತಿ ಇಲ್ಲ ಎಂದು ಪ್ರಸನ್ನಕುಮಾರ್ ಹೇಳಿದರು.

“ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಯಾವುದೇ ಅಧಿಕಾರಿಯ ಬಳಿ ಪಕ್ಷ ನಡೆಸಲು ಹಣ ಕೊಡಿ ಎಂದು ಕೇಳಿಲ್ಲ” ಎಂದು ಸ್ಪಷ್ಟಪಡಿಸಿದರು.

ಆದರೆ ಇಂತಹ ಆರೋಪಗಳು ಇದ್ದರೆ ಅವುಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವ ಬದಲು ಸಂಬಂಧಪಟ್ಟವರು ಕೆಪಿಸಿಸಿ ಅಥವಾ ಎಐಸಿಸಿ ಮಟ್ಟದಲ್ಲಿ ವಿಚಾರ ಪ್ರಸ್ತಾಪಿಸಬೇಕು ಎಂದು ಹೇಳಿದರು.

‘ನನ್ನ ಜಾತಿಯ ವಿಚಾರವಾಗಿ ಮಾತನಾಡಿದ್ದಕ್ಕೆ ಸ್ಪಷ್ಟನೆ ಬೇಕು’

ಸುದ್ದಿಗೋಷ್ಠಿಯ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸನ್ನಕುಮಾರ್, “ಬೇರೆ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಲು ಪಕ್ಷದ ವೇದಿಕೆ ಇದೆ. ನನ್ನ ಜಾತಿಯ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವುದೇ ಈ ಸುದ್ದಿಗೋಷ್ಠಿ ನಡೆಸಲು ಪ್ರಮುಖ ಕಾರಣ” ಎಂದು ಹೇಳಿದರು.

ತಮ್ಮ ಜಾತಿಯ ವಿಚಾರ ಪ್ರಸ್ತಾಪವಾಗಿರುವುದರಿಂದಲೇ ತಾವು ವೈಯಕ್ತಿಕವಾಗಿ ಸುದ್ದಿಗೋಷ್ಠಿಗೆ ಬಂದಿರುವುದಾಗಿ ತಿಳಿಸಿದ ಅವರು, ಈ ವಿಚಾರದಲ್ಲಿ ಸುಂದರೇಶ್ ಅವರು ಕ್ಷಮೆ ಕೇಳಬೇಕು ಎಂದು ಮತ್ತೊಮ್ಮೆ ಒತ್ತಾಯಿಸಿದರು.

ಪಕ್ಷದೊಳಗಿನ ಇತರ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಲಾಗುವುದು. ಮುಂದಿನ ಕ್ರಮದ ಬಗ್ಗೆ ಕೂಡ ಪಕ್ಷದ ವೇದಿಕೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರ್. ಪ್ರಸನ್ನಕುಮಾರ್ ಹೇಳಿದರು.

Caste abuse allegation: Sundaresh must apologise; R. Prasannakumar Agraha 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close