SUDDILIVE || SHIVAMOGGA
ನಾಳೆ KSCA ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ-ಡಿ.ಎಸ್.ಅರುಣ್- KSCA Indoor Stadium to be inaugurated tomorrow-D.S.Arun
ಶಿವಮೊಗ್ಗ: ಮಲೆನಾಡು ಭಾಗದ ಯುವ ಕ್ರಿಕೆಟಿಗರಿಗೆ ಮಳೆಗಾಲದಲ್ಲೂ ನಿರಂತರ ಅಭ್ಯಾಸ ನಡೆಸಲು ಅನುಕೂಲವಾಗುವಂತೆ ಶಿವಮೊಗ್ಗದಲ್ಲಿ ಸುಮಾರು ₹4.90 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಳಾಂಗಣ ಕ್ರಿಕೆಟ್ ಅಭ್ಯಾಸ ಮೈದಾನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅನುಮೋದನೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್. ಅರುಣ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಾಂಗಣ ಕ್ರಿಕೆಟ್ ಅಭ್ಯಾಸ ಮೈದಾನದ ಗುದ್ದಲಿ ಪೂಜೆ ಸೆ.29ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.
ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಅಂಡರ್-14, ಅಂಡರ್-16 ಹಾಗೂ ಅಂಡರ್-19 ಸೇರಿದಂತೆ ವಿವಿಧ ವಯೋಮಾನದ ಕ್ರಿಕೆಟಿಗರಿಗೆ ಅಭ್ಯಾಸ ನಡೆಸಲು ಸಮಸ್ಯೆಯಾಗುತ್ತಿತ್ತು. ಕಳೆದ ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ಒಳಾಂಗಣ ಅಭ್ಯಾಸ ಮೈದಾನ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಇದೀಗ KSCA ಈ ಬೇಡಿಕೆಯನ್ನು ಈಡೇರಿಸುತ್ತಿದೆ ಎಂದು ಅರುಣ್ ಹೇಳಿದರು.
ನಾಲ್ಕು ಪಿಚ್, ಜಿಮ್ ಸೇರಿದಂತೆ ಸೌಲಭ್ಯ
ಇದು ಕೇವಲ ಶೆಡ್ ನಿರ್ಮಿಸುವ ಯೋಜನೆಯಲ್ಲ. ಹೊರಾಂಗಣ ಮೈದಾನದಲ್ಲಿ ಆಡುವ ಅನುಭವ ಸಿಗುವ ರೀತಿಯಲ್ಲಿ ಒಳಾಂಗಣ ಟರ್ಫ್ ವ್ಯವಸ್ಥೆ ಹಾಗೂ ನಾಲ್ಕು ಪಿಚ್‌ಗಳನ್ನು ನಿರ್ಮಿಸಲಾಗುವುದು. ತರಬೇತಿ ಪಡೆಯುವ ಆಟಗಾರರಿಗೆ ಅಗತ್ಯವಿರುವ ಜಿಮ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ವಿವರಿಸಿದರು.
KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಸಂತೋಷ್ ಮೆನನ್, ಸುಜಿತ್ ಸೋಮಸುಂದರ್ ಹಾಗೂ ಮಾಜಿ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರು ಯೋಜನೆಗೆ ವಿಶೇಷ ಗಮನಹರಿಸಿದ್ದಾರೆ. ಶಿವಮೊಗ್ಗಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಜಾವಗಲ್ ಶ್ರೀನಾಥ್ ಅವರು ಮಳೆಗಾಲದ ಸಮಸ್ಯೆಯನ್ನು ಗಮನಿಸಿ ಸುಸಜ್ಜಿತ ಒಳಾಂಗಣ ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಿದ್ದರು ಎಂದು ಅರುಣ್ ತಿಳಿಸಿದರು.
ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿದಂತೆ ಸಂಸ್ಥೆಯ ಪ್ರಮುಖರು, ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಫ್ಲಡ್‌ಲೈಟ್ ನಿರ್ಮಾಣದ ನಿರೀಕ್ಷೆ
ಶಿವಮೊಗ್ಗ ಕೆಸಿಎ ಮೈದಾನಕ್ಕೆ ಫ್ಲಡ್‌ಲೈಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅನುಮೋದನೆ ದೊರೆತರೆ ಸುಮಾರು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂದು ಅರುಣ್ ಹೇಳಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್‌ಇಡಿ ವ್ಯವಸ್ಥೆ ಅಳವಡಿಸಿದ ಬಳಿಕ ಅಲ್ಲಿನ ಕೆಲವು ಫ್ಲಡ್‌ಲೈಟ್ ಉಪಕರಣಗಳನ್ನು ಮೈಸೂರು ಸೇರಿದಂತೆ ಇತರೆ ಮೈದಾನಗಳಿಗೆ ಬಳಸುವ ಯೋಜನೆ ಇದೆ. ಮುಂದಿನ ಹಂತದಲ್ಲಿ ಶಿವಮೊಗ್ಗ ಮತ್ತು ಹುಬ್ಬಳ್ಳಿ ಕುರಿತು ಯೋಚನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ಲಯನ್ಸ್ ತಂಡ ಮಹಾರಾಜ ಟ್ರೋಫಿ ಗೆದ್ದಿರುವ ಹಿನ್ನೆಲೆಯಲ್ಲಿ, ಮುಂದಿನ ವರ್ಷ ಶಿವಮೊಗ್ಗದಲ್ಲಿ ಫ್ಲಡ್‌ಲೈಟ್ ವ್ಯವಸ್ಥೆ ಇದ್ದರೆ ಮಹಾರಾಜ ಟ್ರೋಫಿ ಪಂದ್ಯಗಳನ್ನು ಆಯೋಜಿಸುವ ಆಸೆ ಇದೆ ಎಂದು ಅರುಣ್ ಹೇಳಿದರು.
ಪಂದ್ಯಗಳ ಸಂಖ್ಯೆ ಹೆಚ್ಚಿಸಲು ಒತ್ತು
ಯುವ ಆಟಗಾರರಿಗೆ ಕೇವಲ ಅಭ್ಯಾಸ ಸಾಕಾಗುವುದಿಲ್ಲ; ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳನ್ನು ಆಡಲು ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ KSCA ವತಿಯಿಂದ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರುಣ್ ತಿಳಿಸಿದರು.
ಪ್ರಸ್ತುತ ವಲಯ ಮಟ್ಟದಲ್ಲಿ ಆಟಗಾರರಿಗೆ ವರ್ಷಕ್ಕೆ ಸಿಗುವ ಲೀಗ್ ಪಂದ್ಯಗಳ ಸಂಖ್ಯೆ ಕಡಿಮೆಯಿದ್ದು, ಅದನ್ನು ಹೆಚ್ಚಿಸುವ ಅಗತ್ಯವಿದೆ. ಅಂಡರ್-14, ಅಂಡರ್-16 ಮತ್ತು ಅಂಡರ್-19 ವಿಭಾಗಗಳಲ್ಲಿ ಆಟಗಾರರ ಸಂಖ್ಯೆ ಹೆಚ್ಚಾಗಿದ್ದು, ಕೆಲವು ವಿಭಾಗಗಳಲ್ಲಿ ನಾಲ್ಕು ತಂಡಗಳನ್ನು ರಚಿಸುವಷ್ಟು ಸ್ಪರ್ಧೆ ಇದೆ ಎಂದರು.
ಕಳೆದ ವರ್ಷ KSCA ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಪಂದ್ಯಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಮೈದಾನಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಜೊತೆಗೆ ಅಗತ್ಯ ಬಜೆಟ್ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪಂದ್ಯಗಳಿಗಾಗಿ ಅಂಪೈರ್, ಸ್ಕೋರರ್, ಊಟ, ವಸತಿ ಹಾಗೂ ಇತರ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಬೇಕಾಗುತ್ತದೆ. ಶಿವಮೊಗ್ಗದಲ್ಲಿ ಸುಮಾರು 60–70 ಮಂದಿ ಉಳಿದುಕೊಳ್ಳಬಹುದಾದ ಡಾರ್ಮಿಟರಿ ಸೌಲಭ್ಯವೂ ಇದೆ ಎಂದು ಅರುಣ್ ವಿವರಿಸಿದರು.
ಮೈದಾನಕ್ಕೆ ನೀರು ನಿಲ್ಲುವ ಸಮಸ್ಯೆ ಪರಿಹಾರ
ಕೆಸಿಎ ಮೈದಾನದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದ ಸಮಸ್ಯೆ ನಿವಾರಣೆಗೆ ಸುಮಾರು ₹45 ಲಕ್ಷ ವೆಚ್ಚದಲ್ಲಿ ಹಾರಿಜಾಂಟಲ್ ಡ್ರಿಲ್ಲಿಂಗ್ ಕಾಮಗಾರಿ ನಡೆಸಲಾಗಿದೆ. ಮೈದಾನದ ಮಟ್ಟಕ್ಕಿಂತ ಕೆಳಗೆ ನೀರು ಹರಿದುಹೋಗುವಂತೆ ಔಟ್‌ಲೆಟ್ ವ್ಯವಸ್ಥೆ ಮಾಡಲಾಗಿದ್ದು, ಇದೀಗ ನೀರು ವೇಗವಾಗಿ ಹೊರಹೋಗುತ್ತಿದೆ ಎಂದು ಅರುಣ್ ಹೇಳಿದರು.
ಹಿಂದೆ ಮಳೆ ಬಂದಾಗ ಹಲವು ದಿನಗಳ ಕಾಲ ನೀರು ನಿಲ್ಲುತ್ತಿದ್ದರೆ, ಈಗ ಕೆಲವೇ ಗಂಟೆಗಳಲ್ಲಿ ನೀರು ಹೊರಹೋಗುವ ವ್ಯವಸ್ಥೆ ಮಾಡಲಾಗಿದೆ. ಹೊಸ ಒಳಾಂಗಣ ಮೈದಾನವನ್ನು ನೆಲಮಟ್ಟಕ್ಕಿಂತ ಸುಮಾರು ಐದು ಅಡಿ ಎತ್ತರದಲ್ಲಿ ನಿರ್ಮಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ ಎಂದರು.
‘ಆಟಗಾರರಿಗೆ ಪಂದ್ಯಗಳ ಕೊರತೆಯೇ ಬೆಂಗಳೂರಿಗೆ ಹೋಗಲು ಕಾರಣ’
ಶಿವಮೊಗ್ಗದಲ್ಲಿ ಉತ್ತಮ ಮೂಲಸೌಕರ್ಯವಿದ್ದರೂ ಕೆಲವು ಪ್ರತಿಭಾವಂತ ಆಟಗಾರರು ಹೊರ ಜಿಲ್ಲೆಗಳಿಗೆ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅರುಣ್, ಪ್ರತಿಭೆಯ ಕೊರತೆ ಇಲ್ಲ; ಪಂದ್ಯಗಳನ್ನು ಆಡುವ ಹೆಚ್ಚಿನ ಅವಕಾಶಕ್ಕಾಗಿ ಕೆಲವರು ಬೆಂಗಳೂರಿಗೆ ತೆರಳುತ್ತಿದ್ದಾರೆ ಎಂದು ಹೇಳಿದರು.
KSCA ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿರುವ ಕೋಚ್‌ಗಳು ಅಗತ್ಯ ಅರ್ಹತೆ ಹಾಗೂ ಪರೀಕ್ಷೆಗಳನ್ನು ಪೂರೈಸಿದವರಾಗಿದ್ದಾರೆ. ಆದರೆ ಆಟಗಾರರಿಗೆ ಹೆಚ್ಚಿನ ಪಂದ್ಯಾವಕಾಶ ಒದಗಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಆಟಗಾರರು ಕೇವಲ ಸೌಲಭ್ಯಗಳ ಮೇಲೆ ಅವಲಂಬಿತರಾಗದೆ ದೈಹಿಕ ಸಾಮರ್ಥ್ಯ ಹಾಗೂ ಕಠಿಣ ಪರಿಶ್ರಮಕ್ಕೂ ಹೆಚ್ಚಿನ ಒತ್ತು ನೀಡಬೇಕು. ಈ ಕುರಿತು ಆಟಗಾರರಿಗೆ ಕೌನ್ಸೆಲಿಂಗ್ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಅರುಣ್ ಹೇಳಿದರು.
₹5.80 ಕೋಟಿ ಕೆರೆ ಅಭಿವೃದ್ಧಿ ಯೋಜನೆ
ಕೆಸಿಎ ಮೈದಾನದ ಸಮೀಪದ ಕೆರೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು ₹5.80 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಂದಿನ ಹಂತದ ಅನುಮೋದನೆಗಾಗಿ ಡಿಎಂಎಗೆ ಕಳುಹಿಸಲಾಗಿದೆ ಎಂದು ಅರುಣ್ ತಿಳಿಸಿದರು.
ಶಿವಮೊಗ್ಗವನ್ನು ಕ್ರಿಕೆಟ್ ಹಬ್ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಪಂದ್ಯಾವಳಿಗಳು ಹಾಗೂ ತರಬೇತಿ ವ್ಯವಸ್ಥೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ಗೋವಾದ ಮಾಜಿ ಕ್ರಿಕೆಟಿಗರು ಶಿವಮೊಗ್ಗಕ್ಕೆ ಬಂದು ಪಂದ್ಯಗಳನ್ನು ಆಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದ ತಂಡಗಳೂ ಇಲ್ಲಿ ಪಂದ್ಯಗಳಿಗಾಗಿ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಶಿವಮೊಗ್ಗ ಕೆಸಿಎ ಮೈದಾನದಲ್ಲಿ ವಿಜಯ್ ಮರ್ಚೆಂಟ್ ಟ್ರೋಫಿ ಸೇರಿದಂತೆ ವಿವಿಧ ಪಂದ್ಯಗಳು ನಡೆಯುತ್ತಿದ್ದು, ಫೆಬ್ರವರಿ 1ರಂದು ಕರ್ನಾಟಕ–ಪಂಜಾಬ್ ಪಂದ್ಯವೂ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಅರುಣ್ ತಿಳಿಸಿದರು.
ಗ್ರಾಮೀಣ ಭಾಗದ ಪ್ರತಿಭೆಗಳನ್ನು ಬೆಳೆಸಲು ವಿವಿಧ ಕಡೆ ಆರಂಭವಾಗಿರುವ ಕ್ರಿಕೆಟ್ ಅಕಾಡೆಮಿಗಳಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ಆಟಗಾರರಿಗೆ ಅವಕಾಶಗಳ ಕೊರತೆಯಾಗದಂತೆ KSCA ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
KSCA Indoor Stadium to be inaugurated tomorrow-D.S.Arun
