ಸಾಗರದಲ್ಲಿ ಬರ ಪರಿಹಾರಕ್ಕೆ ರೈತ ಸಂಘಗಳ ಹಕ್ಕೊತ್ತಾಯ- Farmers' unions demand drought relief in Sagara

 SUDDILIVE || SHIVAMOGGA

ಸಾಗರದಲ್ಲಿ ಬರ ಪರಿಹಾರಕ್ಕೆ ರೈತ ಸಂಘಗಳ ಹಕ್ಕೊತ್ತಾಯ-  Farmers' unions demand drought relief in Sagara 
Sagara, drought

ಕೃಷಿಸಾಲ ಮನ್ನಾ, ಬ್ಯಾಂಕ್ ಸಾಲ ವಸೂಲಿ ತಡೆ, 7 ಗಂಟೆ ವಿದ್ಯುತ್ ಸೇರಿದಂತೆ ಹಲವು ಬೇಡಿಕೆ


ಸಾಗರ: ಮಲೆನಾಡಿನಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ಜಿಲ್ಲಾ ಘಟಕ, ಸಂಯುಕ್ತ ರೈತ ಸಂಘ ಸಾಗರ ಹಾಗೂ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿವೆ.

ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿರುವ ಹಕ್ಕೊತ್ತಾಯ ಪತ್ರದಲ್ಲಿ, ಸುಮಾರು 140 ವರ್ಷಗಳ ಬಳಿಕ ಭೀಕರ ಬರ ಪರಿಸ್ಥಿತಿ ಎದುರಾಗಿದೆ ಎಂದು ಸಂಘಟನೆಗಳು ತಿಳಿಸಿವೆ. ಕೆರೆ, ಕಟ್ಟೆ, ಬಾವಿ ಸೇರಿದಂತೆ ಜಲಮೂಲಗಳು ಬತ್ತಿಹೋಗಿದ್ದು, ನೀರಿನ ಕೊರತೆಯಿಂದ ರೈತರ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ತೋಟಗಾರಿಕೆ, ವಾಣಿಜ್ಯ ಹಾಗೂ ಆಹಾರ ಬೆಳೆಗಳ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಜೀವನೋಪಾಯಕ್ಕಾಗಿ ಗ್ರಾಮೀಣ ಜನರು ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಸರ್ಕಾರ ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಸಾಗರ ಹಾಗೂ ಹೊಸನಗರ ತಾಲೂಕುಗಳನ್ನು ಕೈಬಿಟ್ಟಿರುವುದು ಪಕ್ಷಪಾತದ ಧೋರಣೆಯಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಶರಾವತಿ, ವರಾಹಿ, ಚಕ್ರ, ಅಂಜನಾಪುರ, ಅಂಬಲಿಗೊಳ ಹಾಗೂ ತುಂಗಾ-ಭದ್ರ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗದೆ, ವಿದ್ಯುತ್ ಮತ್ತು ನೀರಾವರಿ ಮೇಲೂ ಪರಿಣಾಮ ಬೀರಿದೆ ಎಂದು ಹಕ್ಕೊತ್ತಾಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರೈತ ಸಂಘಗಳ ಪ್ರಮುಖ ಬೇಡಿಕೆಗಳು

  • ರೈತರ ಕೃಷಿಸಾಲವನ್ನು ಮನ್ನಾ ಮಾಡಬೇಕು.
  • ಬ್ಯಾಂಕುಗಳ ಸಾಲ ವಸೂಲಾತಿಗೆ ತಡೆ ನೀಡಬೇಕು.
  • ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆಗಳ ವಿದ್ಯುತ್ ಒದಗಿಸಬೇಕು.
  • ಕೃಷಿ ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸೇರಿಸಿ, ರೈತ ಕೂಲಿಕಾರರಿಗೆ 250ಕ್ಕೂ ಹೆಚ್ಚು ದಿನಗಳ ಉದ್ಯೋಗ ಭದ್ರತೆ ಕಲ್ಪಿಸಬೇಕು.
  • ಬೆಳೆನಷ್ಟದ ಮಾಪನಕ್ಕೆ ಒಂದು ಗ್ರಾಮ ಪಂಚಾಯಿತಿಯನ್ನು ಒಂದು ಘಟಕವಾಗಿ ಪರಿಗಣಿಸಬೇಕು.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರ ಅನುಪಾತದಲ್ಲಿ ಬೆಳೆನಷ್ಟ ಪರಿಹಾರ ನೀಡುವ ಪರಿಷ್ಕೃತ ನೀತಿ ಜಾರಿಗೊಳಿಸಬೇಕು.
  • ಶೇ.33ರಷ್ಟು ಬೆಳೆನಷ್ಟವಾದರೂ ಪರಿಹಾರ ದೊರೆಯುವಂತೆ ನಿಯಮ ರೂಪಿಸಬೇಕು.
  • ಮಲೆನಾಡಿನ ಆದಿವಾಸಿ ಹಾಗೂ ಬುಡಕಟ್ಟು ಜನರಿಗೆ ಹಿಂದಿನಂತೆ ಪೌಷ್ಟಿಕ ಆಹಾರ ಯೋಜನೆ ಮುಂದುವರಿಸಿ, ಉದ್ಯೋಗ ಭದ್ರತೆ ಒದಗಿಸಬೇಕು.
  • ಅಂತರ್ಜಲ ಕೊರತೆಯಿಂದ ಬಳಲುತ್ತಿರುವ ಪ್ರದೇಶಗಳಲ್ಲಿ ಜಲಪೂರಣ ಯೋಜನೆಗಳನ್ನು ಜಾರಿಗೊಳಿಸಬೇಕು.
  • ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಆದ್ಯತಾ ಯೋಜನೆ ರೂಪಿಸಬೇಕು.
  • ಭತ್ತ, ಜೋಳ, ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕು.
  • ಶಾಶ್ವತ ಬರ ನಿರ್ಮೂಲನೆಗೆ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು.

ಮಲೆನಾಡಿನ ರೈತರ ಹಾಗೂ ಗ್ರಾಮೀಣ ಜನರ ಬದುಕಿನ ಮೇಲೆ ಬರದ ಪರಿಣಾಮ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸಂಘಟನೆಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.

Farmers' unions demand drought relief in Sagara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close