SUDDILIVE || SHIVAMOGGA
ಶಿಕಾರಿಪುರದಲ್ಲಿ ‘ಭಾರತ್ ಜೋಡೋ 2.0’ ಪಾದಯಾತ್ರೆಗೂ ಮುನ್ನ ಕೆಳಗೆ ಬಿದ್ದ ಕಾಂಗ್ರೆಸ್ ಬಾವುಟ-Congress flag falls down ahead of 'Bharat Jodo 2.0' march in Shikaripura
ಶಿವಮೊಗ್ಗ: ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆ ಆರಂಭವಾಗಲಿರುವ ಬೆನ್ನಲ್ಲೇ ಕಾಂಗ್ರೆಸ್ ಬಾವುಟಗಳನ್ನು ತೆರವುಗೊಳಿಸಿರುವ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಶಿಕಾರಿಪುರದಿಂದ ಪಾದಯಾತ್ರೆ ಆರಂಭಿಸಲು ಸಿದ್ಧತೆಗಳು ನಡೆದಿವೆ.
ಪಾದಯಾತ್ರೆಯ ಮಾರ್ಗದಲ್ಲಿ ಅಳವಡಿಸಲಾಗಿದ್ದ ಕಾಂಗ್ರೆಸ್ ಬಾವುಟಗಳನ್ನು ಕಟ್ ಮಾಡಿ ಕೆಳಗೆ ಎಸೆದಿರುವ ಘಟನೆ ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ಗ್ರಾಮದ ಸುತ್ತಮುತ್ತ ನಡೆದಿದೆ ಎನ್ನಲಾಗಿದೆ. ರಾತ್ರಿ ವೇಳೆ ಘಟನೆ ನಡೆದಿದ್ದು, ಪಾದಯಾತ್ರೆ ಆರಂಭಕ್ಕೂ ಮುನ್ನವೇ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಾವುಟಗಳನ್ನು ತೆರವುಗೊಳಿಸಿರುವ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡ ಇರಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣವಾಗಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಬಿಜೆಪಿ–ಕಾಂಗ್ರೆಸ್ ರಾಜಕೀಯ ಜಿದ್ದಾಜಿದ್ದಿ ಮತ್ತಷ್ಟು ಚರ್ಚೆಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕ್ಷೇತ್ರದಲ್ಲೇ ಕಾಂಗ್ರೆಸ್ ‘ಭಾರತ್ ಜೋಡೋ 2.0’ ಪಾದಯಾತ್ರೆ ನಡೆಯುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ.
ಪಾದಯಾತ್ರೆಯಲ್ಲಿ ಸಚಿವ ಎಸ್. ಮಧು ಬಂಗಾರಪ್ಪ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
Congress flag falls down ahead of 'Bharat Jodo 2.0' march in Shikaripura
