SUDDILIVE || SHIVAMOGGA
ಶಿಕಾರಿಪುರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಭಾರತ್ ಜೋಡೋ 2.0 ಸಭೆಯಲ್ಲಿ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ವಾಗ್ದಾಳಿ-Congress shows strength in Shikaripura: Madhu Bangarappa, Belur Gopalakrishna attack at Bharat Jodo 2.0 meeting
ಶಿವಮೊಗ್ಗ: ಭಾರತ್ ಜೋಡೋ ಯಾತ್ರೆಯ ಆಶಯಗಳನ್ನು ಮತ್ತೊಮ್ಮೆ ಜನರಿಗೆ ತಲುಪಿಸುವ ಉದ್ದೇಶದಿಂದ ಶಿಕಾರಿಪುರದಲ್ಲಿ ನಡೆದ ‘ಭಾರತ್ ಜೋಡೋ 2.0’ ಪಾದಯಾತ್ರೆಯ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕೇವಲ ಐದು ದಿನಗಳ ಅವಧಿಯಲ್ಲಿ ಶಿಕಾರಿಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸೇರಿರುವುದು ಸಂತೋಷ ತಂದಿದೆ ಎಂದರು.
‘ಭಾರತ್ ಜೋಡೋ 2.0’ ಕಾರ್ಯಕ್ರಮದ ಕೇಂದ್ರಬಿಂದು ಕಾರ್ಯಕರ್ತರು ಹಾಗೂ ಜನರು. ಈ ಸಂದೇಶ ಹಳ್ಳಿಹಳ್ಳಿಗೆ, ಮನೆಮನೆಗೆ ತಲುಪಬೇಕು ಎಂದು ಕರೆ ನೀಡಿದರು.
ರಾಹುಲ್ ಗಾಂಧಿಯವರ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ ಎಂದು ಹೇಳಿದ ಮಧು ಬಂಗಾರಪ್ಪ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರನ್ನು ಕಳೆದುಕೊಂಡಿದ್ದರೂ ರಾಹುಲ್ ಗಾಂಧಿ ಅವರು ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದರು ಎಂದು ಹೇಳಿದರು.
ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಂಘಟನೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ರಾಜಕೀಯ ಸಂಘರ್ಷಕ್ಕಿಂತ ಚುನಾವಣೆಯಲ್ಲಿ ಜನರ ಬೆಂಬಲ ಪಡೆದು ಎದುರಾಳಿಗಳನ್ನು ಸೋಲಿಸುವ ಮೂಲಕ ಅಧಿಕಾರವನ್ನು ಜನರ ಕೈಗೆ ನೀಡುವ ಉದ್ದೇಶ ಕಾಂಗ್ರೆಸ್‌ನದು ಎಂದು ಹೇಳಿದರು.
ಬಹಳ ಕೀಳುಮಟ್ಟದಲ್ಲಿ ಮಾತನಾಡಿದ್ರು. ಏನೋ ಸೊರಬಕ್ಕೆ ಬಂದು ಶಕ್ತಿಪ್ರದರ್ಶನನೋ ಅಥವಾ ತಾಕತ್ತು ತೋರಿಸ್ತೀವಿ ಸೊರಬ ಗೆಲ್ತೀವಿ ಎಂದು ಹೇಳ್ತಿದ್ರು, ಸೊರಬಕ್ಕೆ ಬರ್ತೀವಿ ಅಂದ ತಕ್ಷಣ ನಾವು ಶಿಕಾರಿಪುರಕ್ಕೆ ಬಂದು ಇವತ್ತು ನಮ್ಮ ತೋರಿಸಿದ್ದೀವಿ ಎಂದರು.
ಭೂಹಕ್ಕು, ಬಗರ್ ಹುಕುಂ ವಿಚಾರ ಪ್ರಸ್ತಾಪ
ಶಿಕಾರಿಪುರದಲ್ಲಿ ಭೂಹಕ್ಕಿನ ವಿಚಾರವನ್ನೂ ಮಧು ಬಂಗಾರಪ್ಪ ಪ್ರಸ್ತಾಪಿಸಿದರು. ದೇವರಾಜ ಅರಸು ಅವರ ಕಾಲದಲ್ಲಿ ಭೂಹಕ್ಕು ನೀಡುವ ಕೆಲಸ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕೂಡ ಭೂಹಕ್ಕು ಹಾಗೂ ರೈತರ ವಿಚಾರದಲ್ಲಿ ಕ್ರಮ ಕೈಗೊಂಡಿದ್ದರು ಎಂದು ಸ್ಮರಿಸಿದರು.
ಬಗರ್ ಹುಕುಂ ಸಮಿತಿ ಸಭೆಗಳು ನಡೆಯದಿರುವ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಗಮನ ಸೆಳೆದ ಮಧು ಬಂಗಾರಪ್ಪ, ಸಭೆಗಳು ನಡೆಯದ ಕಡೆ ಪ್ರತ್ಯೇಕವಾಗಿ ಸಭೆ ನಡೆಸಿ ಅರ್ಹರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ವೇಗಗೊಳಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ, ಉಚಿತ ವಿದ್ಯುತ್ ಸೇರಿದಂತೆ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಸರ್ಕಾರದ ಯೋಜನೆಗಳಿಂದ ಜನರಿಗೆ ದೊರೆಯುತ್ತಿರುವ ಪ್ರಯೋಜನಗಳನ್ನು ಸಭಿಕರಿಗೆ ನೆನಪಿಸಿದರು. ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುವುದಾಗಿ ಹೇಳುವವರ ಬಗ್ಗೆ ಜನರು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ವಿಜಯೇಂದ್ರ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ, ಬಿಜೆಪಿ ನಾಯಕರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ವೈಯಕ್ತಿಕ ಟೀಕೆಗಳಿಗೆ ಹೋಗದೆ, ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಿ ಚುನಾವಣೆಯಲ್ಲಿ ರಾಜಕೀಯವಾಗಿ ಉತ್ತರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
“ಶಿಕಾರಿಪುರದಿಂದ ಶಿಕಾರಿ ಆರಂಭವಾಗಿದೆ. ಈ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು” ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
‘ಶಿಕಾರಿಪುರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ’: ಬೇಳೂರು
ಸಭೆಯಲ್ಲಿ ಮಾತನಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿ ದೇಶದಲ್ಲಿ ಹೊಸ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರವಿದ್ದು, ಶಿಕಾರಿಪುರಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕಾಲಿಟ್ಟಿರುವುದು ಪಕ್ಷದ ಕಾರ್ಯಕರ್ತರಿಗೆ ಹೊಸ ಉತ್ಸಾಹ ನೀಡಿದೆ ಎಂದರು.
“ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಂದೇ ತರುತ್ತೇವೆ” ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಳ್ಳಾರಿಯಲ್ಲಿ ನಡೆಸಿದ ಪಾದಯಾತ್ರೆಯ ಉದ್ದೇಶದ ಕುರಿತು ಪ್ರಶ್ನಿಸಿದ ಬೇಳೂರು, ಅದು ಯಾರಿಗಾಗಿ ನಡೆದಿತ್ತು ಎಂಬುದನ್ನು ಜನರಿಗೆ ತಿಳಿದಿದೆ ಎಂದು ಟೀಕಿಸಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಉಳಿಸುವುದಕ್ಕಾಗಿ ಅಥವಾ ಶ್ರೀರಾಮುಲು ಅವರನ್ನು ಉಳಿಸುವುದಕ್ಕಾಗಿ ಪಾದಯಾತ್ರೆ ನಡೆಸಲಾಗಿತ್ತೇ, ಅಥವಾ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನಡೆಸಲಾಗಿತ್ತೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ನಾಯಕರು ಏಕವಚನದಲ್ಲಿ ಮಾತನಾಡಿರುವುದನ್ನೂ ಬೇಳೂರು ಗೋಪಾಲಕೃಷ್ಣ ಟೀಕಿಸಿದರು. ಕಾಂಗ್ರೆಸ್ ಪಕ್ಷ ಹಾಗೂ ಅದರ ಸಚಿವರನ್ನು ಬಿಜೆಪಿ ನಾಯಕರು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
‘ಶಿಕಾರಿಪುರದಲ್ಲಿ ಅಭಿವೃದ್ಧಿಯಾಗಿಲ್ಲ’ ಎಂಬ ಆರೋಪ
ಶಿಕಾರಿಪುರ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ನಡೆದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಬಿ.ವೈ. ವಿಜಯೇಂದ್ರ ಅವರು ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದಾರೆ ಎಂದು ಹೇಳಿದ ಅವರು, ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಮಾಡಿದ್ದರೆ ಲಕ್ಷಾಂತರ ಮತಗಳ ಅಂತರದಲ್ಲಿ ಗೆಲ್ಲಬೇಕಿತ್ತು ಎಂದು ಟೀಕಿಸಿದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಾಗರಾಜ್ ಗೌಡ ಅವರಿಗೆ ಟಿಕೆಟ್ ನೀಡಿದ್ದರೆ ವಿಜಯೇಂದ್ರ ಅವರು ಗೆಲ್ಲುತ್ತಿರಲಿಲ್ಲ ಎಂದು ಬೇಳೂರು ಹೇಳಿದರು.
ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ನಡೆಯಲಿದೆ ಎಂದು ಹೇಳಿದ ಅವರು, ಶಿಕಾರಿಪುರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
‘ಭಾರತ್ ಜೋಡೋ 2.0’ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ ನೀಡುವ ಉದ್ದೇಶ ಹೊಂದಿರುವುದಾಗಿ ಮುಖಂಡರು ತಿಳಿಸಿದರು. ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ರಾಜ್ಯ ಹಾಗೂ ಜಿಲ್ಲಾ ಮುಖಂಡರು, ಶಾಸಕರು, ಸಚಿವರು, ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಶಿಕಾರಿಪುರದಿಂದಲೇ ಬಿಜೆಪಿಗೆ ಪಾಠ-ಯತೀಂದ್ರ
ಭಾರತ್ ಜೋಡೋ 2.0 ಅಥವಾ ಜನಜೋಡೋ ಜಾಗೃತಿ ಯಾತ್ರೆಯ ಉದ್ದೇಶ ಜನರಲ್ಲಿ ಸಂವಿಧಾನದ ಆಶಯ, ಭಾವೈಕ್ಯತೆ ಹಾಗೂ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು. ರಾಹುಲ್ ಗಾಂಧಿ 2022ರಲ್ಲಿ ಕೈಗೊಂಡ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಎಲ್ಲ ಕ್ಷೇತ್ರಗಳಿಗೂ ತಲುಪಿರಲಿಲ್ಲ. ಅಂತಹ ಕ್ಷೇತ್ರಗಳಲ್ಲಿ ಮತ್ತೆ ಯಾತ್ರೆ ನಡೆಸಲಾಗುತ್ತಿದ್ದು, ಜನರನ್ನು ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದಿಂದ ಒಗ್ಗೂಡಿಸುವುದು ಇದರ ಉದ್ದೇಶವಾಗಿದೆ ಎಂದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಶೋಷಿತರು, ಬಡವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಜನರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಅಧಿಕಾರದಲ್ಲಿ ಉಳಿಯಲು ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ ಯತೀಂದ್ರ ಸಿದ್ದರಾಮಯ್ಯ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದರು. ಜನರ ಸಮಸ್ಯೆಗಳನ್ನು ಬಿಟ್ಟು ಸಮಾಜದಲ್ಲಿ ದ್ವೇಷ ಮೂಡಿಸುವ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದ ಅವರು, ಜನರು ಒಗ್ಗಟ್ಟಾಗಿ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸಬೇಕು ಎಂದರು. ಶಿಕಾರಿಪುರದ ಸ್ವಾತಂತ್ರ್ಯ ಹೋರಾಟದ ಪರಂಪರೆ ಮತ್ತು ಸ್ವಾಭಿಮಾನದ ನೆಲದಿಂದಲೇ ಬಿಜೆಪಿಗೆ ಪಾಠ ಕಲಿಸುವ ಪ್ರಕ್ರಿಯೆ ಆರಂಭವಾಗಬೇಕು ಎಂದು ಅವರು ಕರೆ ನೀಡಿದರು.
Congress shows strength in Shikaripura: Madhu Bangarappa, Belur Gopalakrishna attack at Bharat Jodo 2.0 meeting
