SUDDILIVE || SHIKARIPURA
ಶಾಹಿ ಗಾರ್ಮೆಂಟ್ಸ್ ಕಾರ್ಮಿಕರಿಗೆ PF, ಕನಿಷ್ಠ ವೇತನ ನೀಡುವಂತೆ ಕ.ರ.ವೇ. ಆಗ್ರಹ-Demand from the karave to provide PF, minimum wage to Shahi Garments workers
ಶಿಕಾರಿಪುರ: ತಾಲೂಕಿನ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಭವಿಷ್ಯ ನಿಧಿ (PF) ಹಾಗೂ ಕನಿಷ್ಠ ವೇತನ ಸೇರಿದಂತೆ ಅಗತ್ಯ ಕಾರ್ಮಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಹಿನ್ನಲೆಯಲ್ಲಿ 2½ ಸಾವಿರ ಜನ ಈ ಪ್ರತಿಭಟನ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಶಾಹೀ ಗಾರ್ಮೆಂಟ್ ನಿಂದ ತಾಲೂಕು ಕಚೇರಿಯ ವರೆಗೆ 6½ ಸಾವಿರ ಜನ ಭಾಗಿಯಾಗಿದ್ದು ವಿಶೇಷವಾಗಿತ್ತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷ ರವಿನಾಯ್ಕ ಡಿ. ಹಾಗೂ ಶಿಕಾರಿಪುರ ತಾಲೂಕು ಯುವ ಘಟಕದ ಅಧ್ಯಕ್ಷ ಚಂದ್ರಾನಾಯ್ಕ ಕೆ. (ಕುಸ್ಕೂರು) ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಮನವಿಯಲ್ಲಿ, ಶಿಕಾರಿಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ನೂರಾರು ಸ್ಥಳೀಯ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಕಾರ್ಮಿಕರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಸಂಘಟನೆ ಆರೋಪಿಸಿದೆ.
ಪ್ರಸ್ತುತ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಗಾರ್ಮೆಂಟ್ಸ್ ಕಾರ್ಮಿಕರಿಗೆ ಕನಿಷ್ಠ ₹18 ಸಾವಿರದಿಂದ ₹25 ಸಾವಿರದವರೆಗೆ ಮಾಸಿಕ ವೇತನ ದೊರೆಯಬೇಕು ಎಂದು ಸಂಘಟನೆ ಮನವಿಯಲ್ಲಿ ಉಲ್ಲೇಖಿಸಿದೆ. ಆದರೆ, ಕಾರ್ಖಾನೆಯಲ್ಲಿ ದುಡಿಯುತ್ತಿರುವ ನೌಕರರಿಗೆ ಸಮರ್ಪಕ ಕನಿಷ್ಠ ವೇತನ ಹಾಗೂ ಭವಿಷ್ಯ ನಿಧಿ (PF) ಸೌಲಭ್ಯ ನೀಡಲಾಗುತ್ತಿಲ್ಲ ಎಂಬುದು ಸಂಘಟನೆಯ ಪ್ರಮುಖ ಆರೋಪವಾಗಿದೆ.
ಕಾರ್ಮಿಕರಿಗೆ PF ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳು ದೊರೆಯದಿದ್ದರೆ ಅವರ ಭವಿಷ್ಯದ ಸಾಮಾಜಿಕ ಭದ್ರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಡಿಮೆ ಆದಾಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕುಟುಂಬ ನಿರ್ವಹಣೆ ಸೇರಿದಂತೆ ಹಲವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶಾಹಿ ಗಾರ್ಮೆಂಟ್ಸ್ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಪರಿಶೀಲನೆ ಹಾಗೂ ತನಿಖೆ ನಡೆಸಬೇಕು. ಕಾರ್ಮಿಕರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ PF, ಕನಿಷ್ಠ ವೇತನ ಹಾಗೂ ಇತರೆ ಕಾರ್ಮಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಲೋಪ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಾರ್ಮಿಕರ ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಹಾಗೂ ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಮನವಿಗೆ ಸ್ಪಂದಿಸಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಪ್ರತಿಭಟನ ಮೆರವಣಿಗೆಯಲ್ಲಿ ಸಂಘಟನೆಯ ಡಕ್ಯ -ಗ್ರಾಮಾಂತರ ಅಧ್ಯಕ್ಷರು, ಲಕ್ಷಣ -ರೈತ ಘಟಕ, ನಾಗರಾಜ್ -ಸಾಮಾಜಿಕ ಜಾಲತಾಣ ವಿಭಾಗದ ಪ್ರಮುಖರು, ಶಂಭು -ಉಡುಗಣಿ ಹೋಬಳಿ,ನಾಗರಾಜ್ -ಪ್ರಧಾನ ಕಾರ್ಯ ದರ್ಶಿ, ಮಾಲತೇಶ್ -ಅಂಜನಾಪುರ ಹೋಬಳಿ ದೇವರಾಜ್ -ಹೊಸೂರ್ ಹೋಬಳಿ ಭಾಗಿಯಾಗಿದ್ದರು.
