SUDDILIVE || SHIVAMOGGA
ಅಡಿಕೆ ಗೋಡನ್‌ಗಳ ಮೇಲೆ ಅಧಿಕಾರಿಗಳ ದಾಳಿ: ರಸಾಯನಿಕ ಬಣ್ಣ ಬಳಕೆಗೆ ಕಠಿಣ ಕ್ರಮದ ಎಚ್ಚರಿಕೆ-Officials raid areca nut godowns: Warning of strict action for use of chemical dyes
ಶಿವಮೊಗ್ಗ: ಅಡಿಕೆಗೆ ಹೆಚ್ಚು ಕೆಂಪು ಹಾಗೂ ಆಕರ್ಷಕ ಬಣ್ಣ ಬರಲೆಂದು ನಿಷೇಧಿತ ರಸಾಯನಿಕ ಮತ್ತು ಕೈಗಾರಿಕಾ ಬಣ್ಣಗಳನ್ನು ಬಳಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಹೊರವಲಯದ ಬುಳ್ಳಾಪುರದಲ್ಲಿರುವ ಅಡಿಕೆ ಸಂಸ್ಕರಣಾ ಘಟಕಕ್ಕೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಳ್ಳಾಪುರದಲ್ಲಿ ರೈತರಿಂದ ಅಡಿಕೆ ಖರೀದಿಸಿ, ಸಂಸ್ಕರಣೆ ನಡೆಸಿ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಹೊರರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ರವಾನಿಸುವ ಘಟಕಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಡಾ. ಮೈತ್ರಿ ಅವರು ಅಡಿಕೆ ಸಂಸ್ಕರಣಾ ಪ್ರಕ್ರಿಯೆ, ಸಂಗ್ರಹಣೆ ಹಾಗೂ ಬಣ್ಣ ಬಳಕೆಯ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಅಡಿಕೆಯ ಕೆಲವು ಮಾದರಿಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಕೃತಕ ಬಣ್ಣ ಬಳಕೆಯ ಬಗ್ಗೆ ದೂರು
ಅಡಿಕೆ ಗೋಡನ್‌ಗಳಲ್ಲಿ ಕಡಿಮೆ ದರ್ಜೆಯ ಅಡಿಕೆಯನ್ನು ಉತ್ತಮ ಗುಣಮಟ್ಟದಂತೆ ತೋರಿಸಲು ಹೆಚ್ಚು ಕೆಂಪು ಬಣ್ಣ ಬರುವಂತೆ ರಸಾಯನಿಕಯುಕ್ತ ಕೈಗಾರಿಕಾ ಬಣ್ಣಗಳನ್ನು ಬಳಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಡಾ. ಮೈತ್ರಿ ತಿಳಿಸಿದರು.
ಆಹಾರ ಪದಾರ್ಥಗಳಿಗೆ ಬಳಸಲು ಅನುಮತಿ ಇಲ್ಲದ ಕೈಗಾರಿಕಾ ರಸಾಯನಿಕ ಬಣ್ಣಗಳನ್ನು ಅಡಿಕೆಗೆ ಬಳಸುವುದು ಕಾನೂನುಬಾಹಿರವಾಗಿದ್ದು, ಇಂತಹ ಪದ್ಧತಿ ರೈತರು ಹಾಗೂ ಅಡಿಕೆ ಬಳಕೆದಾರರ ಹಿತಾಸಕ್ತಿಗೆ ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದರು.
ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಎಚ್ಚರಿಕೆ
ರಸಾಯನಿಕಯುಕ್ತ ಕೈಗಾರಿಕಾ ಬಣ್ಣಗಳು ಆಹಾರ ಪದಾರ್ಥಗಳಿಗೆ ಬಳಸಲು ಉದ್ದೇಶಿಸಿರುವ ಬಣ್ಣಗಳಲ್ಲ. ಇಂತಹ ಬಣ್ಣಗಳು ದೇಹದೊಳಗೆ ಸೇರಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಡಾ. ಮೈತ್ರಿ ಹೇಳಿದರು.
ವಿಶೇಷವಾಗಿ ಅಡಿಕೆಯನ್ನು ನೇರವಾಗಿ ಜಗಿಯುವುದರಿಂದ ಬಣ್ಣದಲ್ಲಿರುವ ರಾಸಾಯನಿಕಗಳು ಬಾಯಿ ಮತ್ತು ಲೋಳೆಪೊರೆಗೆ ನೇರವಾಗಿ ಸಂಪರ್ಕಕ್ಕೆ ಬರುವ ಸಾಧ್ಯತೆ ಇರುವುದರಿಂದ ಇದರ ಸುರಕ್ಷತೆ ಬಗ್ಗೆ ಗಂಭೀರವಾಗಿ ಗಮನಹರಿಸಬೇಕಾಗಿದೆ ಎಂದು ಅವರು ತಿಳಿಸಿದರು.
Rhodamine B ಹಾಗೂ Sudan ಸೇರಿದಂತೆ ಕೆಲವು ಕೈಗಾರಿಕಾ ಬಣ್ಣಗಳ ಆಹಾರ ಬಳಕೆಯ ಕುರಿತು ಆರೋಗ್ಯದ ಅಪಾಯಗಳ ಬಗ್ಗೆ ಎಚ್ಚರಿಕೆಗಳಿವೆ. ಹೀಗಾಗಿ ಆಹಾರ ಪದಾರ್ಥಗಳಲ್ಲಿ ಅನುಮತಿಯಿಲ್ಲದ ಬಣ್ಣಗಳ ಬಳಕೆಯನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು ಎಂದು ಅವರು ಹೇಳಿದರು.
ರಫ್ತಿನ ಮೇಲೂ ಪರಿಣಾಮ
ಅಡಿಕೆಗೆ ಕೃತಕ ಬಣ್ಣ ಬಳಸಿ ರವಾನಿಸಿದ ಸಂದರ್ಭದಲ್ಲಿ ಹೊರರಾಜ್ಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಪರಿಶೀಲನೆಯ ವೇಳೆ ಇಡೀ ಲಾಟ್‌ಗಳು ತಿರಸ್ಕೃತವಾಗಿರುವ ಪ್ರಕರಣಗಳು ವರದಿಯಾಗಿವೆ ಎಂದು ಡಾ. ಮೈತ್ರಿ ತಿಳಿಸಿದರು.
ಕರ್ನಾಟಕ ಮತ್ತು ಕೇರಳದಿಂದ ರವಾನೆಯಾದ ಕೆಲವು ಅಡಿಕೆ ಲಾಟ್‌ಗಳು ಬಣ್ಣ ಬಳಕೆಯ ಕಾರಣದಿಂದ ತಿರಸ್ಕೃತಗೊಂಡಿರುವ ಮಾಹಿತಿ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಇಂತಹ ಬೆಳವಣಿಗೆಗಳು ಅಡಿಕೆ ವ್ಯಾಪಾರಿಗಳಷ್ಟೇ ಅಲ್ಲದೆ, ರೈತರ ಮೇಲೆಯೂ ಆರ್ಥಿಕ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಂಸ್ಕರಣೆಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು.
ನೈಸರ್ಗಿಕ ವಿಧಾನಕ್ಕೆ ಒತ್ತು
ಅಡಿಕೆಗೆ ಕೃತಕ ಬಣ್ಣ ಹಾಕುವ ಬದಲು ಉತ್ತಮ ಗುಣಮಟ್ಟದ ಅಡಿಕೆಯನ್ನು ಆಯ್ಕೆ ಮಾಡುವುದು, ಸರಿಯಾದ ರೀತಿಯಲ್ಲಿ ಒಣಗಿಸುವುದು, ಸ್ವಚ್ಛತೆಯಿಂದ ಸಂಸ್ಕರಣೆ ನಡೆಸುವುದು ಹಾಗೂ ಸೂಕ್ತ ಸಂಗ್ರಹಣಾ ವಿಧಾನಗಳನ್ನು ಅನುಸರಿಸುವ ಮೂಲಕ ನೈಸರ್ಗಿಕ ಬಣ್ಣ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ಡಾ. ಮೈತ್ರಿ ಹೇಳಿದರು.
ರಸಾಯನಿಕ ಬಳಕೆಯಿಂದ ಅಡಿಕೆ ಬೇಗನೆ ಹಾಳಾಗುವ ಸಾಧ್ಯತೆ ಇದ್ದು, ಫಂಗಸ್ ಬೆಳವಣಿಗೆ ಸೇರಿದಂತೆ ಗುಣಮಟ್ಟದ ಸಮಸ್ಯೆಗಳು ಉಂಟಾಗಬಹುದು. ಇದರಿಂದ ಅಡಿಕೆಯ ನೈಸರ್ಗಿಕ ಸುವಾಸನೆ ಮತ್ತು ರುಚಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಮಾದರಿ ಸಂಗ್ರಹ; ಬಣ್ಣ ಬಳಕೆ ದೃಢಪಟ್ಟರೆ ಕಾನೂನು ಕ್ರಮ
ಪರಿಶೀಲನೆಯ ಸಂದರ್ಭದಲ್ಲಿ ಅಡಿಕೆಯ ಕೆಲವು ಮಾದರಿಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಮಾದರಿಗಳ ಪರೀಕ್ಷೆ ಹಾಗೂ ಪರಿಶೀಲನೆಯ ಬಳಿಕ ಅಡಿಕೆಗೆ ನಿಷೇಧಿತ ಅಥವಾ ಕಾನೂನುಬಾಹಿರ ರಸಾಯನಿಕ ಬಣ್ಣ ಬಳಸಿರುವುದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಕೆ ನೀಡಿದರು.
ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳು ಯಾವುದೇ ರೀತಿಯ ಕೃತಕ ಅಥವಾ ನಿಷೇಧಿತ ರಸಾಯನಿಕಗಳನ್ನು ಬಳಸದೆ, ನಿಯಮಾನುಸಾರ ಅಡಿಕೆಯನ್ನು ಸಂಸ್ಕರಿಸಿ ವಹಿವಾಟು ನಡೆಸಬೇಕು. ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಗೆ ವಿಶ್ವಾಸ ಉಳಿಯುವಂತೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಪರಿಶೀಲನೆಯ ಸಂದರ್ಭದಲ್ಲಿ ತಹಶೀಲ್ದಾರ್ ರಾಜೀವ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಲಿಂಗರಾಜ್, ಕೀರ್ತಿಕುಮಾರ್, ಶ್ರವಣಕುಮಾರ್, ಶ್ವೇತಾ, ಸುಮಾ, ಮನೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

